Advertisement

ಕಾಗದ ಬರ್ದಿದೀನಣ್ಣಾ…ಯಾವ ಅಡ್ರೆಸ್‌ಗೆ ಕಳಿಸಲಿ?

04:48 PM Jun 13, 2019 | mahesh |

ಹೆಣ್ಣುಮಕ್ಕಳಿಗೆ ಅಪ್ಪನ ಮೇಲೆ ಅತೀ ಅನ್ನುವಷ್ಟು ಕಾಳಜಿ, ಭಕ್ತಿ, ಮಮತೆ. “ಪಾಪ, ನಮ್ಮಪ್ಪ’ ಎಂಬುದು ಹೆಚ್ಚಿನ ಹೆಣ್ಣುಮಕ್ಕಳ ಕೊರಳ ಮಾತು. ತಮ್ಮನ್ನು ಸಾಕಲು ಅಪ್ಪ ಪಟ್ಟ ಶ್ರಮದ ನೆನಪಾದರೆ ಸಾಕು; ಹೆಣ್ಣುಮಕ್ಕಳ ಕಣ್ಣು ಕೊಳವಾಗುತ್ತದೆ. ಹೆಸರಾಂತ ಕತೆಗಾರರಾಗಿದ್ದ ಎನ್‌. ಎನ್‌. ಚಿದಂಬರ ರಾವ್‌ ಅವರಿಗೆ, ಮಗಳು ಮಾಲಿನಿ ಗುರುಪ್ರಸನ್ನ ಬರೆದ ಆಪ್ತ ಪತ್ರ ಇಲ್ಲಿದೆ. ಕಣ್ಣೆದುರೇ ಇರುವ “ವಿಶ್ವ ಅಪ್ಪಂದಿರ ದಿನ’ದ ನೆಪದಲ್ಲಿ ಈ ಬರಹವನ್ನು ಒಪ್ಪಿಸಿಕೊಳ್ಳಿ…

Advertisement

“ಸಂಕಟ ಅಣ್ಣಾ…’
ಹೀಗೊಂದು ಮಾತು ಹೇಳಿದ್ದರೆ ತಕ್ಷಣ ನೀವು ಓಡಿಬರುತ್ತಿದ್ದಿರಿ.. “ಯಾಕೋ ಕಂದಾ?’ ಎಂದು ತಬ್ಬಿ ಕಣ್ಣೊರೆಸುತ್ತಿದ್ದಿರಿ. ಕಣ್ಣೊರೆಸಿದ ನಂತರವೇ ಕೂತು ಪಾಠ ಹೇಳುತ್ತಿದ್ದಿರಿ, ಕೊಂಚವೂ ನೋಯಿಸದೆ. ತಪ್ಪು ಮಾಡಿದಾಗ ದೂರವಿಡದೇ… ಸರಿಯಾದದ್ದನ್ನೇ ಮಾಡಿದಾಗ ಒಂದು ನೆತ್ತಿ ನೇವರಿಸುವಿಕೆಯಲ್ಲಿ ಸಕಲವನ್ನೂ ಹೇಳುತ್ತಲೇ… ಬೆರಳು ಕೈಬಿಟ್ಟು ಹಿಂದೇ ನಿಂತು ನಡೆಸುತ್ತಿದ್ದಿರಲ್ಲಾ.. ಎಲ್ಲಿದ್ದೀರಿ ಅಣ್ಣಾ ನೀವೀಗ? ಯಾರ ಮಗನಾಗಿದ್ದೀರಿ ಅಥವಾ ಮಗಳು? ಅಥವಾ, ಅಡುಗೆ ಮಾಡುವಾಗ ಇಲ್ಲಿ ಕಿಟಕಿಯ ಬಳಿ ಕೂತು ನನ್ನನ್ನೇ ನಿಟ್ಟಿಸುವ ಹೆಸರೂ ಗೊತ್ತಿಲ್ಲದ ಹಕ್ಕಿ? ಬೇಡವೆಂದು ಬುಡ ಸವರುತ್ತಿದ್ದರೂ ಬಿಡೆನೆಂಬಂತೆ ಮತ್ಮತ್ತೆ ಚಿಗುರುತ್ತಿರುವ ಅಮೃತ ಬಳ್ಳಿ? ನನಗೆ ಸಂಕಟವಾದ ಕೂಡಲೇ ನೀವು ಬಂದೇ ಬರುತ್ತೀರಿ ಅಂತ ನನಗೆ ಗೊತ್ತು… ಆದರೆ ಎಲ್ಲಿ? ಯಾವ ರೂಪದಲ್ಲಿ? ಹುಡುಕುತ್ತಲೇ ಇರುತ್ತೇನೆ… ಹುಡುಕುತ್ತಲೇ…

ಮೊನ್ನೆ ಯಾರೋ ಕಾಲೇಜಿಗೆ ಹೋಗುವಾಗ ಬೆಳಗ್ಗೆ ಉಂಡು ಹೋದರೆ ಮತ್ತೆ ರಾತ್ರಿ ಮನೆಗೆ ಬಂದಮೇಲೆಯೇ ಊಟ ಕಾಣುತ್ತಿದ್ದುದು ಎಂದು ಹೇಳುತ್ತಿ¨ªಾಗ ಗಂಟಲುಬ್ಬಿ ಬಂತು. ಬೇಕು ಎನ್ನಿಸುತ್ತಿದ್ದರೂ.. ಹಸಿವಿನಿಂದ ಕಂಗಾಲಾಗಿ ಒ¨ªಾಡುತ್ತಿದ್ದರೂ ಹಣವಿಲ್ಲದೆ ಒ¨ªಾಡುವ ಜೀವಗಳನ್ನು ನೋಡಿದಾಗ ಕಣ್ಣು ಹನಿದುಂಬುತ್ತವೆ. ಆ ಕ್ಷಣದಲ್ಲಿ ನೀವು ಅಲ್ಲಿ ನಿಂತಿದ್ದೀರಿ ಅನಿಸಿ ತಲ್ಲಣಿಸುತ್ತೇನೆ. ಸಹಿಸಲಾಗದ ಸಂಕಟ. ಮತ್ತೆ ಮತ್ತೆ ನಿಮ್ಮ ನೆನಪು. ಮತ್ಮತ್ತೆ ತುಂಬಿ ಮಂಜಾಗುವ ಕಂಗಳು.

ನೀವು ಭೌತಿಕವಾಗಿ ಇಲ್ಲವಾದಾಗ, “ಇಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡವಳು’ ಎಂದು ಕಾರ್ಯಕ್ಕೆ ಬಂದವರೆಲ್ಲಾ ಅನುಕಂಪದ ದೃಷ್ಟಿ ಬೀರುವಾಗ ಕಾಡಿದ್ದು ದಟ್ಟ ಅನಾಥ ಪ್ರಜ್ಞೆ. ಮೇಲೆ ಹೊಚ್ಚಿದ್ದ ಬೆಚ್ಚನೆಯ ಸೂರನ್ನು ರಪ್ಪನೆ ಎಳೆದು ಬಯಲಲ್ಲಿ ನಿಲ್ಲಿಸಿದ ಹಾಗೆ… ಸುತ್ತಲಿದ್ದ ದಿಕ್ಕೆಲ್ಲ ಒಂದೇ ಅನಿಸಿದ ದಿಕ್ಕು ಕಾಣದ ತಬ್ಬಲಿ ಭಾವ. ಅತ್ತರೆ, “ಅಳಬಾರದು ಮಕ್ಕಳೇ’ ಎಂದು ಮುದ್ದಿಸುತ್ತಿದ್ದ ಅಮ್ಮನೇ ಬಿಕ್ಕಿಬಿಕ್ಕಿ ಅಳುವುದ ಕಂಡು ಕಂಗಾಲಾಗಿ, “ಅಳಬೇಡ ಅಮ್ಮ’ ಎಂದು ಪುಟ್ಟ ಕೈಗಳಿಂದ ಕಣ್ಣೊರೆಸುತ್ತಿದ್ದ ಮಕ್ಕಳು ಹೃದಯಕ್ಕಿಷ್ಟು ತಂಪು ತಂದರೂ ಎದೆಯಲ್ಲಿ ಬೆಂಕಿ… ಜೊತೆಗೇ ನೆನಪು… ನಿಮ್ಮ ತಂದೆ ಇಲ್ಲವಾದಾಗ ನಿಮಗೆ ಕೇವಲ ಹದಿನಾರೇ ವರ್ಷ… ಹೇಗೆ ತಡೆದುಕೊಂಡಿರಿ ನೀವು ಅಣ್ಣಾ , ಕಣ್ಣೊರೆಸುವ ನಮ್ಮ ಪುಟ್ಟ ಕೈಗಳಿಲ್ಲದೆ? ಕಾಡುವ ಬಡತನದಲ್ಲೂ, ಪ್ರತಿ ತರಗತಿಯಲ್ಲೂ ಮೊದಲ ಸ್ಥಾನ ಬಿಟ್ಟುಕೊಡದ ನೀವು, ಎಸ್‌ಎಸ್‌ಎಲ್‌ಸಿಯಲ್ಲೂ ರ್‍ಯಾಂಕ್‌ ಪಡೆದು ಮೈಸೂರಿಗೆ ಓದಲು ಹೋದಾಗ ಊಟಕ್ಕೂ ಪಡಿಪಾಟಲು… ವಾರಾನ್ನ ಮಾಡಿಕೊಂಡು ಓದುವ ಕಷ್ಟ. ನಿಮಗೆ ಡಿಕ್ಷನರಿ ಓದುವ ಹವ್ಯಾಸವಿತ್ತಂತೆ; ಹೌದಾ ಅಣ್ಣ ? ಲೈಬ್ರರಿಯಲ್ಲಿ ಕೂತು ಡಿಕ್‌Òನರಿ ಓದುತ್ತಿದ್ದ ನಿಮಗೆ ಅದನ್ನು ಕೊಡಲೆಂದೇ ಚರ್ಚಾಸ್ಪರ್ಧೆಯನ್ನಿಟ್ಟಿದ್ದರಂತೆ ನಿಮ್ಮ ಪ್ರೊಫೆಸರ್‌. ನೀವು ಗೆದ್ದೇ ಗೆಲ್ಲುತ್ತೀರಿ ಎಂದು ಅಷ್ಟು ಭರವಸೆ ಅವರಿಗೆ ಬಂದಿದ್ದು ಹೇಗೆ ಅಣ್ಣಾ? ಗೆದ್ದ ಪುಸ್ತಕವನ್ನು ಒಂದೆರಡು ತಿಂಗಳ ನಂತರ ಹಸಿವೆ ತಾಳಲಾರದೆ ನೀವು ಮಾರಿ ಒಂದು ಹೊತ್ತು ಊಟ ಮಾಡಿ ಕಣ್ಣೀರಿಟ್ಟಿರಂತೆ? ಆ ಅಂಗಡಿಗೆ ಪುಸ್ತಕ ಖರೀದಿಸಲು ಹೋದ ನಿಮ್ಮ ಪ್ರೊಫೆಸರ್‌, ಅದೇ ಪುಸ್ತಕವನ್ನು ಕೊಂಡು ನಿಮ್ಮನ್ನು ಕರೆದು ಕೇಳಿದರಂತಲ್ಲ… “ನನ್ನ ಪ್ರೀತಿಯನ್ನು ಮಾರಿದ್ದೇಕೆ?’ ಎಂದು.. ಎರಡು ಸುದೀರ್ಘ‌ ದಿನಗಳ ನಿಮ್ಮ ಉಪವಾಸದ ಕಥೆ.. ಪ್ರತೀ ವಾರದ್ದು.. ವಾರಾನ್ನಕ್ಕೆ ಆ ದಿನಗಳಲ್ಲಿ ಯಾವ ಮನೆಯೂ ಸಿಗದಿದ್ದುದು ಎಲ್ಲವನ್ನೂ ಕೇಳಿದ ಆ ಪುಣ್ಯಾತ್ಮ ಗಂಭೀರವಾಗಿ ನಿಮ್ಮ ಖಾಲಿ ಇದ್ದ ಎಲ್ಲ ದಿನಗಳೂ ತಮ್ಮ ಮನೆಯಲ್ಲೇ ಊಟಕ್ಕೆ ವ್ಯವಸ್ಥೆ ಮಾಡಿ, ಆ ಡಿಕ್ಸ್ ನರಿ ಕೂಡಾ ಕೊಟ್ಟು ಕಳಿಸಿದರಂತಲ್ಲ. ಖುಷಿಯಲ್ಲಿ ತಲೆಯಾಡಿಸಿ ಹೊರಟು ಬಂದು, ಹೇಳಲು ಮರೆತ ಧನ್ಯವಾದ ಸಮರ್ಪಿಸಲು ತಕ್ಷಣ ಅಲ್ಲಿಗೆ ಹಿಂತಿರುಗಿದಾಗ ಆ ಪ್ರೊಫೆಸರ್‌ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ನೋಡಿ ಸಪ್ಪಳ ಮಾಡದೆ ಹಾಗೇ ಹಿಂತಿರುಗಿ ಬಂದಿರಂತಲ್ಲ; ಶಿಷ್ಯನ ಮುಂದೆ ಭಾವುಕತೆಯನ್ನು ತೋರಿಸಿಕೊಳ್ಳಲಿಚ್ಛಿಸದ ಆ ಗುರು, ಅದನ್ನು ಗೌರವಿಸಿದ ಈ ಶಿಷ್ಯ. ಎಷ್ಟು ಘನತೆ ನಿಮ್ಮಿಬ್ಬರ ನಡೆಯಲ್ಲಿ..

ಎರಡು ಹೊತ್ತು ಊಟ ಸಿಗುವುದೂ ಪುಣ್ಯವೆಂದು ಹೇಳಹೊರಟವಳನ್ನು ತಡೆದಿದ್ದು ನಿಮ್ಮ ನೆನಪೇ. ನೀವು ಇದ್ದಿದ್ದರೆ ಖಂಡಿತಾ ಅವರಿಗಿಂತಲೂ ಕಷ್ಟಪಟ್ಟೆನೆಂದು ಎಂದೂ ಹೇಳಿಕೊಳ್ಳುತ್ತಿರಲಿಲ್ಲ.. ಪ್ರತಿಯೊಬ್ಬನೂ ಬೆಳೆದ ರೀತಿಯ ಆಧಾರದ ಮೇಲೆ ಅವನು ಅನುಭವಿಸುವ ಕಷ್ಟಗಳ ತೀವ್ರತೆ ಅವಲಂಬಿತವಾಗಿರುತ್ತದೆ ಎಂದೇ ಹೇಳುತ್ತಿದ್ದಿರಿ. ಅವನ ಕಷ್ಟ ನಿಮ್ಮ ಕಷ್ಟಕ್ಕಿಂತ ದೊಡ್ಡದು ಎಂದು ನನಗೆ ಮನವರಿಕೆ ಮಾಡಿಕೊಡುತ್ತಿದ್ದಿರಿ. ಈ ಕಥೆಯನ್ನೂ ನೀವೆಂದೂ ಹೇಳಿದವರೇ ಅಲ್ಲ . ಅತ್ತೆಯ ಬಾಯಿಂದ ಕೇಳಿದ ಮೇಲಷ್ಟೇ ಇವೆಲ್ಲವೂ ಅರಿವಾಗಿದ್ದು.. ಪ್ರಶ್ನಿಸಿದರೂ ಹಾಸ್ಯದಲ್ಲಿ ತೇಲಿಸಿಬಿಡುತ್ತಿದ್ದೀರಲ್ಲ ಅಣ್ಣಾ? “ಗೋಳು ಹೇಳಿಕೊಳ್ಳುವುದು ವ್ಯಸನವಾಗಿಬಿಡುತ್ತದೆ. ಅದು ಆಗಬಾರದೆಂದರೆ ನಾವು ಅಂಥ ಪ್ರಸಂಗಗಳನ್ನು ಪಾಠವಾಗಿ ಮಾತ್ರ ಸ್ವೀಕರಿಸಿ, ಮೌನವಾಗಿಬಿಡಬೇಕು.. ಮತ್ತೂಬ್ಬರ ಸಹಾನುಭೂತಿ ಗಳಿಸಲು ಬಳಸಿಕೊಳ್ಳಬಾರದು…’ ನಿಮ್ಮ ಈ ಮಾತುಗಳು ಪದೇ ಪದೆ ನೆನಪಾಗುತ್ತವೆ ಅಣ್ಣಾ.. ತುಟಿ ಬಿಚ್ಚದಿರುವ ಹಾಗೆ ಕಾಯುತ್ತವೆ.

Advertisement

ಊಟ ಬೇಡವೆಂದು ಹಠ ಹಿಡಿಯುವ ಮಕ್ಕಳ ಮುಂದೆ ನೀವು ನಮಗೆ ಹೇಳಿದ್ದ ಕಥೆಯನ್ನೇ ನಾನು ಹೇಳುವುದು. ನಿಮ್ಮ ತಂದೆ, ಅಂದರೆ- ನನ್ನ ಅಜ್ಜ ಮತ್ತು ಅವರ ಅಕ್ಕ ರಜೆಯಲ್ಲಿ ದನ ಮೇಯಿಸಲು ಹೋದಾಗ ಅವರ ಅಮ್ಮ ಕಟ್ಟಿಕೊಟ್ಟ ರಾಗಿರೊಟ್ಟಿ ತಿನ್ನಲಾಗದಷ್ಟು ಗಟ್ಟಿಯಾಗಿತ್ತೆಂದು ಯಾವುದೋ ಮರದ ಬುಡಕ್ಕೆ ಹಾಕಿ, ಹಿಂತಿರುಗಿ, ಮನೆಯಲ್ಲಿ ಆ ದಿನ ರಾಗಿಯ ಅಂಬಲಿಯನ್ನು ಮಾತ್ರ ಕುಡಿದು, ಮರುದಿನ ಕಟ್ಟಿಕೊಂಡು ಹೋಗಲು ಏನೂ ಇಲ್ಲದೆ, ಕೊನೆಗೆ ಹಿಂದಿನ ದಿನ ಎಸೆದಿದ್ದ ರೊಟ್ಟಿಯನ್ನೇ ಹುಡುಕಿ ತಿಂದ ಕಥೆಯನ್ನು ನೀವು ನಮಗೆ ಹೇಳಿದಾಗ ನಾವು ಬಿಕ್ಕಿಬಿಕ್ಕಿ ಅತ್ತ ರೀತಿಯಲ್ಲೇ ಅಳುತ್ತವೆ ಆ ಕಥೆ ಕೇಳಿದ ಮಕ್ಕಳು. “ನನಗೆ ಆಗುವುದಿಲ್ಲ ಎಂಬ ಪದ ಮಾತ್ರ ಆಗುವುದಿಲ್ಲ’ ಎಂಬುದು ನೀವೇ ಕಲಿಸಿಕೊಟ್ಟ ಪಾಠ. ಇರುವುದನ್ನೇ ಸಂಭ್ರಮದಿಂದ ಉಂಡುಡುತ್ತಿದ್ದ ನಿಮ್ಮದು ಅಲ್ಪ ತೃಪ್ತಿ ಎಂದು ಯಾರು ಹೇಳಿದರೂ ನೀವದನ್ನು ಒಪ್ಪುತ್ತಿರಲಿಲ್ಲ. ನನಗೆ ಬೇಕಾದ್ದು ಬೇಕಾದಷ್ಟಿದೆ. ಇದು ಅಲ್ಪವಲ್ಲ ಎಂದು ನೀವು ನುಡಿಯುತ್ತಿದ್ದುದು ನನಗೀಗಲೂ ಬೆರಗು. ಇರುವುದು ಸಾಕು ಎನ್ನುವುದಕ್ಕೂ, ಇರುವುದನ್ನು ಸಂಭ್ರಮಿಸುವುದಕ್ಕೂ ಇರುವ ವ್ಯತ್ಯಾಸ ನೀವು ಹೇಳಿ ಕಲಿತಿದ್ದಲ್ಲ ನಾನು.. ನೀವಿರುವ ರೀತಿಯಲ್ಲಿ ಕಲಿತಿದ್ದು.

ಅಣ್ಣಾ, ಈ ಹಾಡು ಹೇಳ್ಕೊಡಿ, ಅಣ್ಣಾ, ಇದೇನೋ ಗೊತ್ತಾಗ್ತಿಲ್ಲ, ಅಣ್ಣಾ, ಇವತ್ತು ಏನಾಯಿತು ಗೊತ್ತಾ?, ಅಣ್ಣಾ , ಈ ರಾಗದ ನೋಟ್ಸ್‌ ಹೇಳಿ, ಅಣ್ಣಾ, ಇವತ್ತೂಂದು ಚರ್ಚಾಸ್ಪರ್ಧೆ, ಅಣ್ಣಾ, ಕಂಠಪಾಠ ಸ್ಪರ್ಧೆಗೆ ರಾಗ ಹಾಕ್ಕೊಡಿ, ಅಣ್ಣಾ, ಈ ಪುಸ್ತಕ ಏನು ಹೇಳ್ತಿದೆ? ಅಣ್ಣಾ, ಒಂದು ಕಥೆ ಹೇಳಿ ಪ್ಲೀಸ್‌…
ಈಗ… ನೀವೂ ಹೀಗೆಲ್ಲಾ ಯಾರನ್ನಾದ್ರೂ ಕೇಳ್ತಿದೀರಾ? ನಿಮಗೆ, ನಿಮ್ಮಂಥ ಅಪ್ಪನೇ ಸಿಕ್ಕಿದ್ದಾರಾ? ನೀವೂ ನನ್ನಷ್ಟೇ ಪುಣ್ಯವಂತರಾ? ಹೇಳಿ ಅಣ್ಣಾ… ನಾನು ಯಾರಲ್ಲಿ ಕೇಳಲಿ? ಈ ಪತ್ರ ಎಲ್ಲಿಗೆಂದು ಕಳಿಸಲಿ? ಯಾವ ವಿಳಾಸಕ್ಕೆ?
ತುಂಬು ಪ್ರೀತಿಯುಣ್ಣಿಸಿದ ನೀವು ಬೆನ್ನು ತಿರುವಿ ಹೋದದ್ದೇಕೆ?
ಉತ್ತರಕ್ಕೆ ಕಾಯುತ್ತಿರುವ

ನಿಮ್ಮ ಅಕ್ಕರೆಯ ಮಗಳು…

Advertisement

Udayavani is now on Telegram. Click here to join our channel and stay updated with the latest news.

Next