Advertisement

ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ: ವಿ. ಸೋಮಣ್ಣ

08:19 PM Jan 25, 2022 | Team Udayavani |

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೆಲಸ ನಿರ್ವಹಿಸುತ್ತೇನೆ. ನನಗೆ ದೊರೆತಿರುವ ಅವಕಾಶದಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಬೇಕೆಂಬುದೇ ನನ್ನ ಉದ್ದೇಶ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಗೆ ಪ್ರಥಮ ಭೇಟಿ ನೀಡಿದ ಅವರು, ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಅತಿ ಹಿಂದುಳಿದ ಜಿಲ್ಲೆ. ಆದರೆ ಇದೊಂದು ಪುಣ್ಯ ಕ್ಷೇತ್ರ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಸೇರಿದಂತೆ ಅನೇಕ ಪವಾಡ ಪುರುಷರು ನೆಲೆಸಿದ ಕ್ಷೇತ್ರ ಇದು. ಇಲ್ಲಿ ಕೆಲಸ ಮಾಡಲು ಸರ್ಕಾರ ಮತ್ತೆ ನನಗೆ ಅವಕಾಶ ನೀಡಿದೆ. ಇದಕ್ಕೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಭಾರಿಯಾಗಿದ್ದೇನೆ ಎಂದರು.

ಇಂದು ಜಿಲ್ಲೆಯ ಗಡಿ ಸತ್ತೇಗಾಲದಲ್ಲಿ ನನಗೆ ನೀಡಿದ ಸ್ವಾಗತವನ್ನು ನನ್ನ ಜೀವನದಲ್ಲಿ ಮರೆಯಲಾರೆ. ಜೀವನದಲ್ಲಿ ಏನಾದರೂ ಮಾಡಬೇಕು. ಮಲೆ ಮಹದೇಶ್ವರರ ಆಶೀರ್ವಾದದಿಂದ ಕಾಯಾ ವಾಚಾ ಮನಸಾ ಕೆಲಸ ನಿರ್ವಹಿಸುತ್ತೇನೆ ಎಂದರು.

ಪ್ರಶ್ನೆಗೆ ಉತ್ತರಿಸಿದ ಅವರು, ಆಯಾ ಜಿಲ್ಲೆಯವರನ್ನು ಅದೇ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡವುದು ಬೇಡ ಎಂದು ಮುಖ್ಯಮಂತ್ರಿಯವರು ತೀರ್ಮಾನಿಸಿ ಎಲ್ಲರಿಗೂ ಬೇರೆ ಬೇರೆ ಜಿಲ್ಲೆ ನೀಡಿದ್ದಾರೆ. ಹಾಗೆಯೇ ನನಗೂ ಚಾಮರಾಜನಗರ ಜಿಲ್ಲೆ ನೀಡಿದ್ದಾರೆ ಎಂದರು.

ರಾಜಕೀಯ ಕುರಿತು ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ ಸೋಮಣ್ಣ, ಜಿಲ್ಲೆಗೆ ಏನೇನು ಅಭಿವೃದ್ಧಿ ಕೆಲಸಗಳಾಗಬೇಕು ಅದನ್ನು ಕೇಳಿ. ಇನ್ನು 11-12 ತಿಂಗಳು ಸಮಯವಿದೆ. ಎಲ್ಲರೂ ಸೇರಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡೋಣ, ಇನ್ನಷ್ಟು ಕೆಲಸ ಮಾಡೋಣ, ರಾಜಕೀಯ ಎಲ್ಲ 2023ರ ಜನವರಿ ನಂತರ ಎಂದು ಹೇಳಿದರು.

Advertisement

ಬಳಿಕ ಸಚಿವರು ನಗರಕ್ಕೆ ಆಗಮಿಸಿ, ಕೊಳದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಅವರಿಗೆ ಹಾರ ಹಾಕಿ ಜೈಕಾರ ಕೂಗಿ ಸ್ವಾಗತಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ನಗರಸಭಾಧ್ಯಕ್ಷೆ ಆಶಾ ನಟರಾಜು, ಮುಖಂಡರಾದ ನಟರಾಜು, ಎಸ್. ಬಾಲಸುಬ್ರಹ್ಮಣ್ಯ, ನಗರಸಭಾ ಸದಸ್ಯರಾದ ಮನೋಜ್ ಪಟೇಲ್, ಶಿವರಾಜ್, ಕುಮುದಾ ಕೇಶವಮೂರ್ತಿ, ಚಂದ್ರಶೇಖರ್ ಮತ್ತಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next