Advertisement

ದೆಹಲಿಗೆ ನೆರೆ ಸಂತ್ರಸ್ತರನ್ನು ಕರೆದೊಯ್ದು ಪ್ರತಿಭಟಿಸುವೆ

11:07 PM Oct 04, 2019 | Team Udayavani |

ಬೆಂಗಳೂರು: “ಕೇಂದ್ರ ಸರ್ಕಾರ ನೆರೆ ಪರಿಹಾರ ವಿಚಾರದಲ್ಲಿ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಾದ ಕ್ರಮವಲ್ಲ. ಅನಿವಾರ್ಯವಾದರೆ ನಾನು ದೆಹಲಿಗೆ ಪ್ರವಾಹ ಸಂತ್ರಸ್ತರನ್ನು ಕರೆದೊಯ್ದು ಪ್ರತಿಭಟನೆ ನಡೆಸಲಿದ್ದೇನೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

Advertisement

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಬಗ್ಗೆ ಕೇಂದ್ರ ಸರ್ಕಾರ ಅಥವಾ ಕೇಂದ್ರದ ಬಿಜೆಪಿಗೆ ನಾಯಕರಿಗೆ ಯಾವ ಅಭಿಪ್ರಾಯವಿದೆಯೋ ಗೊತ್ತಿಲ್ಲ. ಆದರೆ, ಪ್ರವಾಹ ಸಂತ್ರಸ್ತರು ಏನು ತಪ್ಪು ಮಾಡಿದರು ಎಂದು ಪ್ರಶ್ನಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ ದ್ದನ್ನು ನಾನು ಗಮನಿಸಿದ್ದೇನೆ. ಆದರೆ, ನಮಗಿಂತ ಹೆಚ್ಚಾಗಿ ಬಿಜೆಪಿಯ ನಿಷ್ಠಾವಂತ ನಾಯಕರೇ ಮಾತನಾಡುತ್ತಿದ್ದಾರೆ. ಇದಕ್ಕಿಂತ ಬೇರೆ ಮಾತು ಬೇಕಾ? ಎಂದರು.

ಮೋದಿಗೆ ಪತ್ರ ಬರೆಯುವೆ: “ರಾಜ್ಯದ ನೆರೆ ಹಾಗೂ ಬರ ಪರಿಸ್ಥಿತಿ ಬಗ್ಗೆ ನಾನು ಖುದ್ದಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಮತ್ತೂಂ ದು ಪತ್ರವನ್ನೂ ಬರೆಯುತ್ತೇನೆ. ಆದರೆ, ಖುದ್ದಾಗಿ ಭೇಟಿ ಮಾಡುವುದಿಲ್ಲ. ಅನಿವಾರ್ಯವಾದರೆ ಪ್ರವಾಹ ಸಂತ್ರಸ್ತರನ್ನೇ ದೆಹಲಿಗೆ ಕರೆದೊಯ್ಯುತ್ತೇನೆ. ಹಿಂದೆ ಎರಡು ಬಾರಿ ರೈತರನ್ನು ದೆಹಲಿಗೆ ಕರೆದೊಯ್ದು, ಪ್ರತಿ ಭಟನೆ ಮಾಡಿದ್ದೇನೆ’ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯದ ಜನರನ್ನು “ಟೇಕನ್‌ ಫಾರ್‌ ಗ್ರಾಂಟೆಡ್‌’ ರೀತಿಯಲ್ಲಿ ನೋಡುತ್ತಿದೆ. ನಾವು ಏನೇ ಮಾಡಿದರೂ ನಮ್ಮ ಜತೆ ಇರುತ್ತಾರೆ ಎಂಬ ಭ್ರಮೆ ಯಲ್ಲಿದೆ. ಇದು ಸರ್ವಕಾಲ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

“ಜೆಡಿಎಸ್‌ ಪಕ್ಷವು ಅ.10 ರಂದು ಕೇಂದ್ರ ಸರ್ಕಾರದ ವರ್ತನೆ ವಿರುದ್ಧ ಪ್ರತಿಭಟನೆ ಮಾಡಲಿದ್ದು, ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ಸ್ವಾತಂತ್ರ್ಯ ಉದ್ಯಾನ ದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಿದೆ. ನಾನೂ ಪಾಲ್ಗೊಳ್ಳುತ್ತೇನೆ. ಸದನದ ಒಳಗೆ ಹಾಗೂ ಹೊರಗೆ ನಾವು ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

ಸೂಲಿಬೆಲೆಗೆ ಶಹಬ್ಬಾಸ್‌ಗಿರಿ: ಚಕ್ರವರ್ತಿ ಸೂಲಿಬೆಲೆ ವಾಸ್ತವಾಂಶ ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಹಿನ್ನೆಲೆಯವ ರಾದರೂ ಜನರ ಸಮಸ್ಯೆಗಳ ಬಗ್ಗೆ ನೈಜತೆ ತಿಳಿದು ಕೊಂಡು ಮಾತನಾಡಿದ್ದಾರೆ. ಅವರೊಬ್ಬ ಉತ್ತಮ ವಾಗ್ಮಿ ಎಂದು ದೇವೇಗೌಡರು ಶಹಬ್ಬಾಸ್‌ಗಿರಿ ನೀಡಿದರು.

ರಾಜ್ಯದ ನೆರೆಪೀಡಿತ ಪ್ರದೇಶಕ್ಕೆ ಮಧ್ಯಂತರ ಪರಿಹಾರವಾಗಿ ಕೇಂದ್ರ ಸರ್ಕಾರ 1,200 ಕೋಟಿ ರೂ.ಬಿಡುಗಡೆ ಮಾಡಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪರಿಹಾರ ಕಾರ್ಯಕ್ಕೆ ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದೀಗ ಕೇಂದ್ರವೂ ಪರಿಹಾರ ನೀಡಿರುವುದು ಮತ್ತಷ್ಟು ವೇಗ ಬರಲಿದೆ. ಹೀಗಾಗಿ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರ್ನಾಟಕದ ಪರವಾಗಿದೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
-ಎನ್‌. ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next