ಹುಬ್ಬಳ್ಳಿ: ರಾಜಕೀಯದಲ್ಲಾದ ಅನೇಕ ಬದಲಾವಣೆಗಳಿಂದ ನಾನು ಮತ್ತು ನಮ್ಮ ಪಕ್ಷ ಸೋತಿದೆ. ಇಂತಹ ಸನ್ನಿವೇಶದಲ್ಲಿ ಪಕ್ಷವನ್ನು ಹೇಗೆ ಸಂಘಟಿಸಿ ಅಧಿಕಾರಕ್ಕೆ ತರಬೇಕೆಂಬುದು ನನಗೆ ಗೊತ್ತಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋತ ಮಾತ್ರಕ್ಕೆ ದೇವೇಗೌಡರ ಹುಮ್ಮಸ್ಸು ಮುಗಿದಿದೆ ಎಂದು ಭಾವಿಸಬೇಡಿ. ನನ್ನಲ್ಲಿ ಹೋರಾಟದ ಹುಮ್ಮಸ್ಸು ಇನ್ನೂ ಕುಗ್ಗಿಲ್ಲ. ಜೀವನಪೂರ್ತಿ ಹೋರಾಟದ ಹಾದಿಯಲ್ಲೇ ಬಂದಿರುವ ನನಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂಬ ಗುರಿಯಿದೆ. ಪ್ರಾದೇಶಿಕ ಪಕ್ಷ ಉಳಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ. ಪ್ರಾದೇಶಿಕ ಪಕ್ಷ ನಿರ್ನಾಮ ಮಾಡಬೇಕೆಂದವರಿಗೆ ಅಚ್ಚರಿಯಾಗುವ ರೀತಿ ಹೋರಾಟ ಮಾಡುವೆ. ಮುಂಬರುವ ತಾಲೂಕು, ಜಿಲ್ಲಾಮಟ್ಟ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ 9 ಸದಸ್ಯರ ಕೋರ್ ಕಮಿಟಿ ರಚನೆ ಮಾಡಿದ್ದು, ಮೂರ್‍ನಾಲ್ಕು ದಿನದಲ್ಲಿ ಘೋಷಿಸುವೆ. ಸಮಿತಿ ಸದಸ್ಯರು ಪ್ರತಿ ಜಿಲ್ಲೆಗೆ ಹೋಗಿ ಸದಸ್ಯತ್ವ ಶಿಬಿರ ಮಾಡಿ ಪಕ್ಷ ಬಲಗೊಳಿಸಲಿದ್ದಾರೆ. ಪಕ್ಷ ನಿಷ್ಠರಿಗೆ ಸದಸ್ಯತ್ವ ನೋಂದಣಿ ಸೇರಿದಂತೆ ಮುಂಬರುವ ತಾಲೂಕು, ಜಿಲ್ಲಾ ಮಟ್ಟ, ಸ್ಥಳೀಯ ಚುನಾವಣೆಗಳ ಜವಾಬ್ದಾರಿ ನೀಡಲಾಗುವುದು ಎಂದರು.
ಮೈತ್ರಿ ಸರ್ಕಾರ ಇಷ್ಟವಿರಲಿಲ್ಲ: ಮೈತ್ರಿ ಸರ್ಕಾರ ಪತನವಾಗಲು ಕಾರಣ ಯಾರು ಎಂಬುದು ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಲು ನನಗೆ ಇಷ್ಟವಿರಲಿಲ್ಲ. ಈ ವಿಷಯವಾಗಿ ಕೇಂದ್ರದ ಕಾಂಗ್ರೆಸ್ ಧುರೀಣರಿಗೆಕಟುವಾಗಿಯೇ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್‌ನ ಸೋನಿಯಾ ಗಾಂಧಿ ಜೊತೆ ಚರ್ಚಿಸಲು ಮುಂದಾಗಿದ್ದೆ. ಆದರೆ ಗುಲಾಂನಬಿ ಆಜಾದ್ ಸೇರಿದಂತೆ ಕಾಂಗ್ರೆಸ್‌ನ ಕೆಲ ನಾಯಕರೇ ಇದಕ್ಕೆ ತಡೆಯೊಡ್ಡಿದರು. ಖರ್ಗೆ ಸಿಎಂ ಸ್ಥಾನಕ್ಕೆ ಒಪ್ಪಲಿಲ್ಲ. ಬೇಡವೆಂದರೂ ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಿದರು ಎಂದರು.
ಬಿ.ಎಸ್. ಯಡಿಯೂರಪ್ಪ ಇನ್ನು ಮೂರು ವರ್ಷ ಅಧಿಕಾರ ನಡೆಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ದ್ವೇಷ ಸಾಧಿಸುತ್ತಿದೆ. ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾದ ಎಲ್ಲ ಕೆಲಸ ರದ್ದು ಮಾಡಿಸಲಾಗಿದೆ. ಯಡಿಯೂರಪ್ಪ ರಾಜಕೀಯ ದ್ವೇಷ ಸಾಧಿಸುವುದಿಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಧಿಕಾರಿಗಳನ್ನು ಮಾರ್ಪಾಡು ಮಾಡಿದ್ದಾರೆ. ಕುಮಾರಸ್ವಾಮಿ ಮಂಜೂರು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ತಡೆ ನೀಡಿದ್ದಾರೆ. ಇದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುವೆ. ಹಳೆ ರಾಜಕೀಯ ದ್ವೇಷದಿಂದ ನಮ್ಮ ಮೇಲೆ ಹಗೆತನ ಸಾಧಿಸಿದರೆ ಸುಮ್ಮನೆ ಕೂರಲು ಆಗಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನ 15 ಶಾಸಕರು ಮುಂಬೈಗೆ ಹೋದ್ರಲ್ಲ ಅವರನ್ನೇ ಕೇಳಿ ಯಾರು ಕಳಿಸಿದ್ದರು ಅಂತ. ಅವರೇ ಹೇಳುತ್ತಾರೆ ಎಂದರು.
ಅವರೊಂದಿಗೆ ಮತ್ತೇಕೆ ಮಾತನಾಡಲಿ?: ಅವರ ಮಗ ಸತ್ತಾಗ ನನಗೆ ಯಾರೂ ಹೇಳಿರಲಿಲ್ಲ, ನಾನೇ ಹೋಗಿದ್ದೆ, ನನಗೂ ಮನುಷ್ಯತ್ವ ಇದೆ. ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ವಿ ಎಂಬ ಕಾರಣಕ್ಕೆ ಎಲ್ಲ ಮರೆತು ಕೈಜೋಡಿಸಿದ್ದೆವು. ಜೆಡಿಎಸ್ ಜೊತೆ ಹೋಗಿದ್ದಕ್ಕೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಸ್ವತಃ ಅವರೇ ಕಾಂಗ್ರೆಸ್ ಹೈಕಮಾಂಡ್ ಮುಂದೆ ಹೇಳಿದ್ದಾರೆ. ಅಂತಹ ವೇಳೆ ಅವರೊಂದಿಗೆ ನಾನು ಏಕೆ ಮತ್ತೆ ಮಾತನಾಡಲಿ ಎಂದು ಸಿದ್ದರಾಮಯ್ಯ ಹೆಸರು ಉಲ್ಲೇಖೀಸದೆ ಹರಿಹಾಯ್ದರು.
ಜೆಡಿಎಸ್ ಮುಗಿಸಲು ಕಾಂಗ್ರೆಸ್‌ನವರು ನಮ್ಮ 8 ಹಿರಿಯರನ್ನು ಕರೆದುಕೊಂಡು ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸಿದ್ದರು. ಅದರಲ್ಲಿ ಗೆದ್ದವರು ಮೂವರು ಮಾತ್ರ. ಸಿದ್ದರಾಮಯ್ಯ 5 ವರ್ಷ ಅಧಿಕಾರ ನಡೆಸಿ ಅನ್ನಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಅನೇಕ ಯೋಜನೆ ಕೊಟ್ಟರು. ಆದರೆ ಅವರು ಗೆದ್ದಿದ್ದು 78 ಸೀಟು ಮಾತ್ರ. ಅವರು ಪಡೆದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಐದು ವರ್ಷ ಆಡಳಿತ ಮಾಡಿ ಹಲವು ಯೋಜನೆಗಳನ್ನು ಕೊಟ್ಟರೂ ಮತ್ತೆ ಅಧಿಕಾರಕ್ಕೆ ಏಕೆ ಬರಲಿಲ್ಲ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಜನರು ನೀಡುವ ತೀರ್ಮಾನವೇ ಅಂತಿಮ. ಸಿಎಎ, ಎನ್‌ಆರ್‌ಸಿ ಕುರಿತು ನನ್ನ ವಿರೋಧವಿದೆ ಎಂದರು.