ಬೆಂಗಳೂರು: ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇರುತ್ತೇನೆ. ಬಿಜೆಪಿಯ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್ ಗೆ ನಿಷ್ಠನಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲೇ ಸಾಯೋವರೆಗೂ ಇರುತ್ತೇವೆ. ನರೇಂದ್ರ ಮೋದಿಯವರಿಗೆ ಕನಸು ಮನಸಿನಲ್ಲೂ ಬೆಂಬಲ ಕೊಟ್ಟಿಲ್ಲ. ನಾವು ಕೇವಲ ಪಕ್ಷದ ಹಿತದೃಷ್ಟಿಯಿಂದ ಪತ್ರ ಬರೆದಿದ್ದೆವು ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಭಾವುಕರಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ (ಸೋಮವಾರ) ಕಾರ್ಯಕಾರಣಿ ಸಭೆಯಲ್ಲಿ 23 ಕಾಂಗ್ರೆಸ್ ನ ಹಿರಿಯ ನಾಯಕರು ಕಾಂಗ್ರೆಸ್ ನ ಪುನರ್ ಸಂಘಟನೆ ಬಗ್ಗೆ ನೇರವಾಗಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೆವು. ಅದರಲ್ಲಿ ನಾನು ಕೂಡ ಸಹಿ ಹಾಕಿದ್ದೆ. ನಾವು ಸಹಿ ಹಾಕಿದ ಪತ್ರದಲ್ಲಿ ನಾವು ನಾಯಕತ್ವ ಪ್ರಶ್ನೆ ಮಾಡಿಲ್ಲ. ನಾವು ನೇರವಾಗಿ ಸೋನಿಯಾ ಗಾಂಧಿ ಅವರಿಗೆ ಮಾತ್ರ ಒಂದು ಪ್ರತಿ ಪತ್ರ ಕೊಟ್ಟಿದ್ದೇವೆ. ಆದರೆ ಈ ಪತ್ರ ಲೀಕ್ ಮಾಡಿದವರು ಯಾರು? ಈ ಪತ್ರ ಲೀಕ್ ಮಾಡಿದ ಬಗ್ಗೆ ತನಿಖೆ ನಡೆಸಬೇಕು. ಯಾರು ಲೀಕ್ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಅಂತ ಇಬ್ಬಾಗ ಆದಾಗಲೂ ಸಹ ಈಗ ಯಾರು ಕಾಂಗ್ರೆಸ್ ಗೆ ವಿಧೇಯರು ಅಂತ ಹೇಳಿಕೊಳ್ಳುತ್ತಿದ್ದಾರೋ ಅವರೆಲ್ಲ ಅರಸು ಜೊತೆ ಹೋಗಿದ್ದರು. ಆದರೆ ನಾವೆಲ್ಲ ಇಂದಿರಾ ಗಾಂಧಿಯವರ ಜೊತೆಯೇ ನಿಂತೆವು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳ ನಂಬಿ ಪಕ್ಷದಲ್ಲಿದ್ದೇವೆ. 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂದರು.
ಇದನ್ನೂ ಓದಿ: ಸೋನಿಯಾ ಗಾಂಧಿ ಪಕ್ಷದ ತಾಯಿಯ ಸ್ಥಾನದಲ್ಲಿದ್ದಾರೆ: ಕೆ.ಹೆಚ್. ಮುನಿಯಪ್ಪ ಹೇಳಿಕೆ
ಈಗ ಪುನರ್ ಸಂಘಟನೆಗೆ ಒಂದು ಕಮಿಟಿ ಮಾಡಲಾಗಿದೆ, ಅದನ್ನು ಸ್ವಾಗತಿಸುತ್ತೇವೆ. ಸೋನಿಯಾ ಗಾಂಧಿಯವರ ಮುಂದುವರಿಕೆ ಸ್ವಾಗತಿಸುತ್ತೇವೆ. ರಾಹುಲ್ ಗಾಂಧಿಯವರು ಮೊದಲು ನಾವು ಬಿಜೆಪಿ ಕೈಜೋಡಿಸಿದ್ದೇವೆ ಎಂದರು ಎಂದು ವರದಿ ಬಂತು. ನಂತರ ಹಾಗೆ ಹೇಳಿಲ್ಲ ಅಂತ ಅವರು ಹೇಳಿದರು. ಹೀಗಾಗಿ ಆ ಚರ್ಚೆಯನ್ನು ಈಗ ಮುಂದುವರಿಸುವುದಿಲ್ಲ ಎಂದರು.
ನಾವು ಪತ್ರದಲ್ಲಿ ಎಲ್ಲೂ ಕೂಡ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿಲ್ಲ. ವಾಸ್ತವವಾಗಿ ಪತ್ರದಲ್ಲಿಎರಡು ಮೂರು ಪ್ಯಾರಗಳಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ನಾಯಕತ್ವ ಪ್ರಶಂಸೆ ಮಾಡಿದ್ದೇವೆ. ಪಕ್ಷದಲ್ಲಿ ಬೇರು ಮಟ್ಟದಿಂದ ಸಂಪೂರ್ಣವಾಗಿ ಸಂಘಟನೆಯಲ್ಲಿ ಬದಲಾವಣೆ ಆಗಬೇಕು. ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯಬೇಕು ಎನ್ನುವುದು ಪತ್ರದ ಸಾರಾಂಶವಾಗಿತ್ತು ಎಂದು ವೀರಪ್ಪ ಮೊಯ್ಲಿ ವಿವರಣೆ ನೀಡಿದರು.