Advertisement

ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ, ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ

08:51 PM Oct 30, 2022 | Team Udayavani |

ಬೆಂಗಳೂರು: ಕೋಲಾರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು  ಸ್ಪಷ್ಟಪಡಿಸಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಇಂದು ಕರೆದಿರುವ ವೀರಶೈವ ಲಿಂಗಾಯತ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು ಅವರು, ಕಾರ್ಯಕರ್ತರು ನನ್ನ ಮೇಲಿನ ಅಭಿಮಾನದಿಂದ‌ ಕೋಲಾರದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದಾರೆ. ಅಲ್ಲಿನ ಜನರ ಸಮಸ್ಯೆ ಏನಿದೆ ಅಂತ ನನಗೆ ಗೊತ್ತಿದೆ. ಕೋಲಾರದಲ್ಲಿ ನಮ್ಮ‌ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಕೆಜಿಎಫ್ ಬಿಟ್ಟು ಉಳಿದ ಕಡೆ ನಮ್ಮ ಶಾಸಕರು ಇದ್ದಾರೆ. ನಾನೇ ಹೋಗಿ ಸ್ಪರ್ಧೆ ಮಾಡಬೇಕು ಅಂತ ಇಲ್ಲ. ಎಲ್ಲಾ ಮುಖಂಡರ ಜತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.

ಮಾನ ಮರ್ಯಾದೆ ಇದ್ದಾರೆ ತನಿಖೆ ಮಾಡಿಸಿ:

ಕೆ.ಆರ್.ಪುರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ಸಾವು ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಸಚಿವ ಎಂಟಿಬಿ ನಾಗರಾಜ್ ವಿಡಿಯೋ ಜಗಜ್ಜಾಹೀರು ಆಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತನಿಖೆ ಮಾಡಿಸಲಿ. ಈಗಾಗಲೇ ಮುಖ್ಯಮಂತ್ರಿಗಳು ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಆದರೆ, ಏನು, ಯಾವ ರೀತಿ ತನಿಖೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.

ನಂದೀಶ್ ಅವರ ಸಾವು ಪೊಲೀಸ್ ಇಲಾಖೆಯಲ್ಲಿ ನಡೆಯುವ ಕರಾಳ ಘಟನೆಗಳಿಗೆ ಕನ್ನಡಿ ಹಿಡಿದಂತೆ ಇದೆ. ಈ ಕಾರಣಕ್ಕೆ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.

Advertisement

ಕೋಟಾ ಶ್ರೀನಿವಾಸ ಪೂಜಾರಿ ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ:

ಬಿಜೆಪಿ ಸರ್ಕಾರದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಒಬ್ಬರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ. ಎಲ್ಲರೂ ದುಡ್ಡಿನ ದಂಧೆ ಮಾಡಲು‌ ಬಾಗಿಲು ತೆಗೆದುಕೊಂಡು ಕೂತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಸಚಿವ ಎಂಟಿಬಿ ನಾಗರಾಜ್ ಯಾಕೆ ಹಾಗೆ ಹೇಳಿದರು? ಅದರ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಎಲ್ಲವೂ ಗೊತ್ತಿದೆ. ನಂದೀಶ್ 80 ಲಕ್ಷ ರೂಪಾಯಿ ಕೊಟ್ಟು ಮೂರು ತಿಂಗಳು ಆಗಿರಲಿಲ್ಲ. ಅಷ್ಟರಲ್ಲಿ ಅವರನ್ನು ಅಮಾನತು ಮಾಡಿದರು. ಅದರ ನೋವಿನಲ್ಲಿ ನಂದೀಶ್ ಗೆ ಹೃದಯಾಘಾತ ಆಗಿರಬಹುದು. ಅಲ್ಲಿನ ಶಾಸಕರಿಗೆ ಎಷ್ಟು ಹೋಗಿದೆ, ಯಾರ್ಯಾರಿಗೆ ಎಷ್ಟು ಹೋಗಿದೆ. ಎಲ್ಲವೂ ತನಿಖೆ ಮಾಡಿದ್ರೆ ಹೊರಬರಲಿದೆ ಎಂದು ಕುಮಾರಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದರು.

ಜೆಸಿಬಿಯಿಂದ ಹಣ ಬಾಚುತ್ತಿರುವ ಸರ್ಕಾರ:

ಕೆಲ ಸಚಿವರು ಎಷ್ಟೇ ಶ್ರೀಮಂತರಿದ್ದರೂ ಅವರಿಗೆ ಹಣದ ದಾಹ ಕಡಿಮೆಯಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟನ್ನೂ ಗೋರುತ್ತಿದ್ದಾರೆ. ಈ ಸರಕಾರದಲ್ಲಿ ಕೈನಲ್ಲಿ‌ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ, ಹಿತಾಚಿಯಲ್ಲಿ ಬಾಚುತ್ತಿದ್ದಾರೆ. ಆದೇನು ತನಿಖೆ ಮಾಡುತ್ತಾರೋ ನೋಡೋಣ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನವೆಂಬರ್ 1ಕ್ಕೆ ಮೊದಲ ಪಟ್ಟಿ:

ನವೆಂಬರ್ 1ರಂದು ಜೆಡಿಎಸ್ ಪಟ್ಟಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಮಾತನಾಡಿದ ಹೆಚ್ ಡಿಕೆ, ನಾವು ಎಲ್ಲರಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ. ಬೇರೆ ಪಕ್ಷಗಳಲ್ಲಿ ಅನೇಕ ಪಟ್ಟಿಗಳಿವೆ. ಅವುಗಳ ಪಾಲಿಗೆ ಪಟ್ಟಿಗಳೇ ಫಜೀತಿ ಆಗಲಿವೆ. ಈಗಾಗಲೇ 123 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಅವರಿಗೆಲ್ಲ ಕೆಲಸ ಪ್ರಾರಂಭ ಮಾಡಲು ಹೇಳಿದ್ದೇನೆ. ನಾವು ಯಾವುದೇ ಪ್ರಚಾರ ಮಾಡದೇ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದರು.

ಬೇರೆ ಪಕ್ಷಗಳು ಬೇರೆ ಬೇರೆ ರಾಜ್ಯದಿಂದ‌ ನಾಯಕರನ್ನು ಕರೆದುಕೊಂಡು ಬಂದು ಕಾರ್ಯತಂತ್ರ ಮಾಡುತ್ತಿದ್ದಾರೆ. ನಾವು ಕೂಡ 3-4 ತಂಡದಲ್ಲಿ ಕಾರ್ಯತಂತ್ರ ಮಾಡ್ತಿದ್ದೇವೆ. ಚುನಾವಣೆಗಾಗಿಯೇ ವಾರ್ ರೂಂ ಕೂಡಾ ತೆರೆಯಲು ಉದ್ದೇಶಿಸಲಾಗಿದೆ. ನಾವು ಎಲ್ಲಾ‌ ಪಕ್ಷಗಳಂತೆ ಸ್ಟ್ರಾಟರ್ಜಿ ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next