ವಿಜಯಪುರ: ಇತ್ತೀಚೆಗೆ ಗೌರವ ಡಾಕ್ಟರೇಟ್, ಸಹಕಾರಿ ರತ್ನ ಪ್ರಶಸ್ತಿಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ. ರಾಜಕೀಯ ಪ್ರಭಾವ, ಶಿಫಾರಸು ಆಧರಿಸಿ ನೀಡುವ ಇಂಥ ಗೌರವಗಳನ್ನು ನೀಡಿದರೂ ನನ್ನ ಜೀವಮಾನದಲ್ಲಿ ಎಂದೂ ಪಡೆಯವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ರಾಷ್ತ್ರೀಯ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಸಮ್ಮುಖದಲ್ಲೇ ಸಹಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ಸಹಕಾರಿ ವ್ಯವಸ್ಥೆ ಹಾಗೂ ಕಛೇರಿ ಕೂಡ ಭ್ರಷ್ಟಾಚಾರದ ಕೂಪಗಳಾಗುತ್ತಿವೆ. ಹೀಗಾಗಿ ಸಹಕಾರಿ ಕಾನೂನು ಹಾಗೂ ಆಡಳಿತ ಶೈಲಿಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದರು.
ಇದನ್ನೂ ಓದಿ:ಡೇಟಾ ಸೈನ್ಸ್, ಸೆಮಿ ಕಂಡಕ್ಟರ್ ವಿಸ್ತರಣೆ ಸೇರಿ 8 ಒಪ್ಪಂದಕ್ಕೆ ಸಹಿ: ಡಿಸಿಎಂ ಅಶ್ವತ್ಥನಾರಾಯಣ
ದೇಶಕ್ಕೆ ಸಹಕಾರಿ ರಂಗದ ಮಾದರಿ ಎನಿಸಿರುವ ಕರ್ನಾಟಕ ಸಹಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ಬರಬೇಕಿದೆ ಎಂದರು.
ಎಸ್.ಟಿ. ಸೋಮಶೇಖರ ರಾಜ್ಯದ ಪ್ರಾಮಾಣಿಕ ಸಚಿವರು, ಮೈಸೂರು ದಸರಾ ಉತ್ಸವದಲ್ಲಿ ಹಣ ಉಳಿಸಿ, ಸರ್ಕಾರಕ್ಕೆ ಮರಳಿಸಿದ ಮೊದಲ ಸಚಿವರು. ಇಂಥ ಪ್ರಾಮಾಣಿಕ ಸಚಿವರ ಕೈಯಲ್ಲಿರುವ ಸಹಕಾರಿ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಲಂಚಬಾಕತನ ಕೊನೆಗಾಣಬೇಕಿದೆ ಸಚಿವ ಸೋಮಶೇಖರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ವಿಸ್ವಾಸವಿದೆ ಎಂದರು.