ಹೀಗೇ ಎಷ್ಟು ದಿನ ಉಳಿಯಲಿ? ಒಮ್ಮೆ ಕುಳಿತು ಯೋಚಿಸಿದೆ. ಒಂದು ಸಕಾರಾತ್ಮಕ ಯೋಚನೆ ಹೊಳೆಯಿತು. ನಾನಿನ್ನು ಏನಾದರೂ ಸಾಧಿಸಲು ನೀನೇ ಮುಖ್ಯ ಆಗಬೇಕು. ಎಂಥ ಸಂದರ್ಭದಲ್ಲೂ ಆತ್ಮವಿಶ್ವಾಸ ಕುಗ್ಗಬಾರದು ಎಂದು ನಿಶ್ಚಯಿಸಿದ ಗಳಿಗೆ ಯಾವುದಾಗಿತ್ತೋ ಗೊತ್ತಿಲ್ಲ….
ನಾನು ಏನಾಗಿದ್ದೆ? ಸ್ವಲ್ಪವೂ ಗಂಭೀರತೆ ರೂಢಿಸಿಕೊಳ್ಳದ ಜೀವನ, ಉಡಾಫೆತನ, ಸದಾ ಸ್ನೇಹಿತರ ದಂಡು ಅವರೊಂದಿಗೆ ಇದ್ದರಷ್ಟೇ ಪರಮಸುಖ. ಮುಂದಿನ ಜೀವನದ ಗುರಿ ಏನು ಎಂಬುದನ್ನು ಅರಿಯದೇ ಸಾಗುತ್ತಿದ್ದೆ. ನನ್ನ ಗೆಳೆಯರಂತೂ ಪ್ರೀತಿ-ಪ್ರೇಮ ಅಂದುಕೊಂಡು ಅವಳೇ ನೆನಪು, ಉಸಿರು, ಬದನೆಕಾಯಿ ಅಂದುಕೊಂಡು ಸಾಯುತ್ತಿದ್ದರು. ಆದರೆ, ನನಗೂ ಅದಕ್ಕೂ ಆಗಿಬರೋಲ್ಲ ಎಂಬುದನ್ನು ತಿಳಿದೋ ಅಥವಾ ಅದರಿಂದ ಈ ನೋವುಗಳನ್ನು ಅನುಭವಿಸುವ ಕರ್ಮ ಏಕೆ ಅಂದುಕೊಂಡೋ ಇವರುಗಳಿಗೆ ಸಹಾಯ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದೆ.
ಒಮ್ಮೆ ಗೆಳೆಯನ ಕಾಲೇಜಿನ ಬಳಿ ಹೋದಾಗ ಅವನ ಸಹಪಾಠಿಯಾಗಿದ್ದ ನಿನ್ನನ್ನೊಮ್ಮೆ ಕಂಡೆ. ಆಗಲೇ, ಲವ್ ಆಗಿಬಿಡ್ತಾ? ಗೊತ್ತಿಲ್ಲ. ಅಂದಿನಿಂದ ನಿನ್ನ ಧ್ಯಾನ. ನೀನು ನನಗಿಷ್ಟ ಎಂದು ಹೇಳಿಕೊಳ್ಳಲು ಸಮಯವನ್ನೇನು ತೆಗೆದುಕೊಳ್ಳಲಿಲ್ಲ. ಹಾಗೆಯೇ, ಒಪ್ಪಿಕೊಳ್ಳಲು ನೀನೂ ನಿರಾಕರಿಸಲಿಲ್ಲ. ಇನ್ನೇನು ಬೇಕು ನಮಗೆ? ಮಾಮೂಲಿ ಸುತ್ತಾಟ, ತಿರುಗಾಟ. ಮನೆಯವರಿಗೂ ತಲುಪಿದ ವಿಷಯ. ಅಮ್ಮನಿಗೆ ನೀನೇ ಸೊಸೆ ಅನ್ನುವಷ್ಟರ ಮಟ್ಟಿಗೆ ಇಷ್ಟವಾದೆ. ಮನೆಯವರು ಯಾರೂ ಚಕಾರವೆತ್ತಲಿಲ್ಲ. ಆದರೆ, ಇದು ತಪ್ಪಾಗಿ ಹೋಗಿದ್ದು, ಕಾರಣವೇ ತಿಳಿಸದೇ ದೂರ ನೀ ಆದಾಗ!
ಅಸಲಿಗೆ ನಿನ್ನ ಮನಸ್ಸಿನಲ್ಲಿ ಏನಿತ್ತು? ಇಷ್ಟೆಲ್ಲಾ ಕನಸುಗಳನ್ನು ಕಾಣುವಂತೆ ಮಾಡಿ ಇದ್ದಕ್ಕಿದ್ದಂತೆ ನೀರು ಎರಚಿ ಹೊರಟಾಗ ನಾನು ನಾನಾಗಿ ಉಳಿಯಲಿಲ್ಲ. ತತ್ತರಿಸಿ ಹೋದೆ. ಹುಡುಕಿ ಹೊರಟೆ ನಿನ್ನೂರಿಗೆ. ನೀನು, ಅಲ್ಲೂ ಸಿಗಲಿಲ್ಲ. ಎಲ್ಲಿ ಹೋದೆಯೆಂದು ತಿಳಿಸುವವರಿಲ್ಲ. ನಾನು ಗಾಢವಾದ ಕತ್ತಲೆಯಲ್ಲಿ ಅಡಗಿಹೋದೆ. ಮನೆಯವರು ತತ್ತರಿಸಿ ಹೋದರು. ನನ್ನ ಪರಿಸ್ಥಿತಿ ಕಂಡು ಮರುಗುತ್ತಾ, ಸಮಾಧಾನ ಹೇಳುತ್ತಾ, ಅವಳಿಲ್ಲವೆಂದರೆ ಇನ್ನೊಬ್ಬಳು ಎಂದರು.
ಅವರಿಗೆ ಗೊತ್ತಿಲ್ಲ, ಅದು ನನ್ನೆದೆಯಲ್ಲಿ ಅರಳಿದ ಮೊದಲ ಹೂವೆಂದು. ಅದು ಕೊಟ್ಟು ಹೋದ ಸುವಾಸನೆ ಸುಮ್ಮನೆ ಹರಡಿಲ್ಲ ಎಂದು. ಹೀಗೇ, ಎಷ್ಟು ದಿನ ಉಳಿಯಲಿ? ಒಮ್ಮೆ ಕುಳಿತು ಯೋಚಿಸಿದೆ. ಒಂದು ಸಕಾರಾತ್ಮಕ ಯೋಚನೆ ಹೊಳೆಯಿತು. ನಾನಿನ್ನು ಏನಾದರೂ ಸಾಧಿಸಲು ನೀನೇ ಮುಖ್ಯ ಆಗಬೇಕು. ಎಂಥ ಸಂದರ್ಭದಲ್ಲೂ ಆತ್ಮವಿಶ್ವಾಸ ಕುಗ್ಗಬಾರದು ಎಂದು ನಿಶ್ಚಯಿಸಿದ ಗಳಿಗೆ ಯಾವುದಾಗಿತ್ತೋ ಗೊತ್ತಿಲ್ಲ.ಆದರೆ, ಇಂದು ಏನೋ ಸಾಧಿಸಿದ್ದೇನೆ.
ಹಣವಿದೆ, ಹೆಸರಿದೆ,ಜನರ ಬೆಂಬಲವಿದೆ. ಆದರೆ ನೀನು…..ಇಲ್ಲದ ಶೂನ್ಯ. ನನ್ನನ್ನೇ ನಾನು ಹುಡುಕಿಕೊಳ್ಳಬೇಕಾಗುತ್ತದೆ ಆಗ ನೀ ಮತ್ತೆ ಬೇಕು ಅನಿಸುತ್ತದೆ. ಹೊರಡುತ್ತೇನೆ. ಒಂಟಿಯಾಗಿ ನೀನು ನಾನು ಕುಳಿತ ಜಾಗಕ್ಕೆ. ಕಂಡ ಕನಸುಗಳು, ಕಳೆದುಕೊಂಡ ಮನಸ್ಸು ಎಲ್ಲ ನೆನಪಾಗಿ ಕಣ್ಣೀರಾಗುತ್ತೇನೆ ಮತ್ತೆ ಮೌನ. ವಾಪಾಸು ಆಗುತ್ತೇನೆ ನನ್ನ ನಾನು ಕಂಡುಕೊಳ್ಳಲು. ನಿನ್ನ ನೆನಪಿನೊಳಗೆ ನುಸುಳಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತೇನೆ ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡು ಮತ್ತೆ ಹೊಸಬನಾಗಲು!!
* ಜಿ.ಲೋಕೇಶ