ಬೆಂಗಳೂರು : ಒಕ್ಕಲಿಗರ ಸಂಘದ ಚುನಾವಣೆಯ ನಿರ್ದೇಶಕರ ಚುನಾವಣೆಯಲ್ಲಿ ಪರಾಜಿತರಾಗಿರುವ ಡಾ. ಕೆ ಮಹದೇವ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ರಾಜಕೀಯ ಪ್ರವೇಶಿಸಿ ಉತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂದು ಪರಾಜಿತ ಅಭ್ಯರ್ಥಿ ಡಾ ಕೆ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಏಳು ಸಾವಿರ ಮತದಾರರ ಬೆಂಬಲ ಇರುವುದನ್ನು ಅರಿತುಕೊಂಡು ಶಾಸಕ ಸಾ. ರಾ. ಮಹೇಶ್ ನಗರಪಾಲಿಕೆ ಸದಸ್ಯ ಶ್ರೀಧರ್ ಗೆ ನನ್ನ ಬೆಂಬಲ ಕೋರಿದರು.ನಮ್ಮ ತಂಡಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಆದರೆ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ವೀಡಿಯೋ ಸಂದೇಶ ಬಿಡುಗಡೆ ಮಾಡಿದರು. ಅದರಲ್ಲಿ ಕೆ.ವಿ. ಶ್ರೀಧರ್, ಡಾ ಮಂಜೇಗೌಡ, ಸತೀಶ್ ಗೌಡ ಪರವಾಗಿ ಮತಯಾಚನೆ ಮಾಡಿದ್ದಾರೆ. ಇದೇ ಕಾರಣದಿಂದ ನಾನು ಸೋತಿದ್ದೇನೆ ಎಂದರು.
ಜೆಡಿಸ್ ನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಜೆಡಿಸ್ ಅಭ್ಯರ್ಥಿಗಳನ್ನೇ ಚುನಾವಣೆಗೆ ನಿಲ್ಲಿಸಬಹುದಿತ್ತು.ಆ ತಾಕತ್ತು ಕುಮಾರಸ್ವಾಮಿ ಅವರಿಗೆ ಇದೆಯಾ? ಇದ್ದರೆ ಈಗಲೂ ಅವನಿಗೆ ರಾಜೀನಾಮೆ ಕೊಡಿಸಿ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲಿಸಿ.ನಂತರ ಅದರ ಪರಿಣಾಮವನ್ನು ನೋಡಿ.
ಈ ರೀತಿ ಕತ್ತು ಕುಯ್ಯುವ ಕೆಲಸವನ್ನು ನಿಲ್ಲಿಸಿ. ಇದು ನಿಮಗೆ ಶೋಭೆ ತರುವುದಿಲ್ಲ.ನಿಮ್ಮನ್ನು ದೇವರು ಕೂಡ ಕ್ಷಮಿಸುವುದಿಲ್ಲ.ನಿಮ್ಮ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಪ್ರಾಮಾಣಿಕ ನಾಯಕರನ್ನು ತುಳಿಯುತ್ತಿಲ್ಲ ಕೊಲೆ ಮಾಡುತ್ತಿದ್ದಾರೆ. ನಾನು ಇದುವರೆಗೂ ರಾಜಕೀಯ ಪ್ರವೇಶಿಸಿರಲಿಲ್ಲ.ಆದರೆ ಇಂದಿನಿಂದ ನಾನು ರಾಜಕೀಯ ಆರಂಭಿಸುತ್ತೇನೆ.ಹೆಚ್ ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯದ ಮೂಲಕವೇ ಉತ್ತರ ಕೊಡುತ್ತೇನೆ. ನನ್ನಂತವರ ಮೇಲೆ ಕುತಂತ್ರ ಮಾಡಿದವರಿಗೆ ಕ್ಷಮೆಯೇ ಇಲ್ಲ. ನಾನು ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸುತ್ತೇನೆ ಎಂದರು.