Advertisement
ಚುನಾವಣೆಗೂ ಮುನ್ನ ಸರ್ವ ಪಕ್ಷಗಳ ಮುಖಂಡರ ಸಹಕಾರದಿಂದ ತಾವು ಗೆದ್ದಿದ್ದು, ಎಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ಹೇಳುತ್ತಿದ್ದ ಎಸ್.ಮುನಿಸ್ವಾಮಿ, ಗೆದ್ದ ಮಾರನೇ ದಿನವೇ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳನ್ನು ಕಾಂಗ್ರೆಸ್ ಮುಕ್ತ ಮಾಡಿ ಬಿಜೆಪಿ ಗೆಲ್ಲಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಹತ್ತಿದ್ದ ಏಣಿಯನ್ನು ಒದೆಯುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ.
Related Articles
Advertisement
ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಮುಳಬಾಗಿಲು ಶಾಸಕ ಎಚ್.ನಾಗೇಶ್ ನೂತನ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರ ಹೇಳಿಕೆಗೆ ಯಾವುದೇ ರೀತಿಯಿಂದಲೂ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಕೋಲಾರ ಜಿಲ್ಲೆಯ ನಾಗರಿಕರು ಇವರ ಮೌನವನ್ನು ಬಿಜೆಪಿಗೆ ಹೋಗಲು ಸಮ್ಮತಿ ಎಂದೇ ಭಾವಿಸಿಕೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮುಕ್ತವಾಗುವ ಹಾದಿ ಸನಿಹದಲ್ಲಿದೆಯೇ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ.
ಮೌನ ಸಮ್ಮತಿ: ಕೋಲಾರ ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಶಾಸಕರಿಲ್ಲ. ಹೀಗಿದ್ದಾಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮುತುವರ್ಜಿಯಿಂದ ಬಿಜೆಪಿಯಿಂದ ಎಸ್.ಮುನಿಸ್ವಾಮಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಾಗಿನಿಂದಲೂ ಗೆಲ್ಲಿಸುವವರೆಗೂ ಪ್ಯಾಕೇಜ್ ಒಪ್ಪಿಸಿಕೊಂಡು ಅದನ್ನು ಚಾಚೂ ತಪ್ಪದೆ ನೆರವೇರಿಸಿದ್ದಾರೆ. ಹೀಗಿರುವಾಗ ಎಸ್.ಮುನಿಸ್ವಾಮಿಯ ಹೇಳಿಕೆಗೆ ಕೆ.ವೈ.ನಂಜೇಗೌಡರನ್ನು ಹೊರತುಪಡಿಸಿದರೆ ಎಲ್ಲಾ ಏಳು ಮಂದಿ ಶಾಸಕರೂ ಪ್ರತಿಕ್ರಿಯಿಸಿಲ್ಲ. ಕನಿಷ್ಠ ತಮ್ಮ ಬೆಂಬಲಿಗರಿಂದರೂ ಹೇಳಿಕೆ ಕೊಡಿಸಿಲ್ಲ. ಖಂಡಿಸುವ ಮಾತಂತು ಇಲ್ಲವೇ ಇಲ್ಲ. ಈ ಶಾಸಕರ ಮೌನವು ಸಮ್ಮತಿಯೆಂಬಂತೆ ಖಚಿತಪಡುತ್ತಿದೆ.
ಈ ಎಲ್ಲಾ ಶಾಸಕರು ಬಿಜೆಪಿಯ ಹೊಸ್ತಿಲಲ್ಲಿ ಪರೋಕ್ಷವಾಗಿ ನಿಂತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನುವಂತ ವಾತಾವರಣ ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ ಕಂಡು ಬರುತ್ತಿದೆ.
ಕಾಂಗ್ರೆಸ್, ಜೆಡಿಎಸ್ ಜಿಲ್ಲಾಧ್ಯಕ್ಷರ ಮೌನ: ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡಿಸುತ್ತೇನೆ ಎಂಬ ಹೇಳಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟ್ಟದಾದರೂ, ಎಂಟೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುತ್ತೇನೆ ಎಂಬ ಮಾತು ಜೆಡಿಎಸ್‌ಗೆ ಅನ್ವಯಿಸುತ್ತದೆ. ಏಕೆಂದರೆ, ಜಿಲ್ಲೆಯ ಚಿಂತಾಮಣಿ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಆದರೂ, ನೂತನ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಗೌರವಾಧ್ಯಕ್ಷ ಬಣಕನಹಳ್ಳಿ ನಟರಾಜ್, ಅನ್ವರ್ ಪಾಷಾ ಆಗಲಿ ಚಕಾರವೆತ್ತಿಲ್ಲ.
ಕಣ್ಣಿಟ್ಟಿದ್ದವರು ಕಾಣಿಸುತ್ತಿಲ್ಲ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳಿಂದಲೂ ಕಾಂಗ್ರೆಸ್ ಹೈಕಮಾಂಡ್‌ನಂತೆ ವರ್ತಿಸುತ್ತಿದ್ದವರು ಕೆ.ಎಚ್.ಮುನಿಯಪ್ಪ. ಇಂತ ಪ್ರಬಲ ಕೆ.ಎಚ್.ಮುನಿಯಪ್ಪರನ್ನು ಚುನಾವಣೆಯಲ್ಲಿ ಸೋಲಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವ ಅನಾಯಾಸವಾಗಿ ತಮ್ಮ ಪಾಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಲೆಕ್ಕಾಚಾರ ಹಾಕಿದ್ದರು.
ಆದರೆ, ಕೆ.ಎಚ್.ಮುನಿಯಪ್ಪ ಸೋತರೂ ತೆರೆಮರೆಯ ಪ್ರಯತ್ನದಲ್ಲಿಯೇ ತಮ್ಮನ್ನು ಬೆಂಬಲಿಸಿದ ಮಾಲೂರು ಶಾಸಕ ಕೆ.ವೈ.ನಂಜೇಗೌಡರನ್ನು ಎಲ್ಲರ ವಿರೋಧದ ನಡುವೆಯೂ ಕೋಚಿಮುಲ್ ಅಧ್ಯಕ್ಷರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಕೆ.ಎಚ್.ಮುನಿಯಪ್ಪ ಸೋತರೂ ಪಕ್ಷದಲ್ಲಿ ತಮ್ಮ ಬಿಗಿಪಟ್ಟು ಸಡಿಲಿಸುತ್ತಿಲ್ಲವೆಂಬುದನ್ನು ಕೋಲಾರ ಕಾಂಗ್ರೆಸ್ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ನಾಯಕರಿಗೆ ಅರ್ಥವಾಗಿದೆ. ಇದನ್ನು ಅರಗಿಸಿಕೊಳ್ಳದಂತೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದರೆ ಕೆ.ಎಚ್.ಮುನಿಯಪ್ಪರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವುದು ಕಷ್ಟವೆಂಬ ಸತ್ಯವೂ ಕಣ್ಣಿಗೆ ಕಾಣಿಸುವಂತಾಗಿದೆ. ಇವೆಲ್ಲಾ ಕಾರಣಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಧ್ವನಿ ಎತ್ತಲು ಯಾವುದೇ ಕಾಂಗ್ರೆಸ್ ಶಾಸಕರು ಮುಂದಾಗುತ್ತಿಲ್ಲವೆಂದು ಹೇಳಲಾಗುತ್ತಿದೆ.
● ಕೆ.ಎಸ್.ಗಣೇಶ್