ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಯ್ಕೆಯಾದರೆ, ಅಮೆರಿಕವನ್ನು ದ್ವೇಷಿಸುವವರಿಗೆ ಯಾವುದೇ ರೀತಿಯಲ್ಲೂ ನೆರವು ನೀಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ವಿಶೇಷವಾಗಿ ಪಾಕಿಸ್ಥಾನ, ಚೀನ ಸಹಿತ ಪ್ರಮುಖ ರಾಷ್ಟ್ರಗಳಿಗೆ ನೇರವಾಗಿ ಈ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
“ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆದ್ದರೆ ನಮ್ಮ ದೇಶವನ್ನು ವಿರೋಧಿಸುವವರಿಗೆ ಯಾವುದೇ ನೆರವು ನೀಡಲಾಗುವುದಿಲ್ಲ. ಬಲಶಾಲಿಯಾಗಿರುವ ಅಮೆರಿಕ ಕೆಟ್ಟವರಿಗೆ ಬಾಗುವುದಿಲ್ಲ. ನಮ್ಮ ದೇಶದ ಜನರು ಕಷ್ಟಪಟ್ಟು ದುಡಿದ ಹಣವನ್ನು ಪೋಲು ಮಾಡುವುದಿಲ್ಲ. ನಮ್ಮ ನಿಲುವಿನ ಜತೆಗೆ ಯಾರು ಇರುತ್ತಾರೆಯೋ ನಮ್ಮ ಮಿತ್ರ ರಾಷ್ಟ್ರಗಳ ಜತೆಗೆ ಯಾರು ಕೈಜೋಡಿಸುತ್ತಾರೆಯೋ ಅವರು ನಮ್ಮ ನಂಬಿಕೆಗೆ ಅರ್ಹರು’ ಎಂದು “ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗೆ ಬರೆದ ಲೇಖನದಲ್ಲಿ ಹೇಳಿಕೊಂಡಿದ್ದಾರೆ.
ಹ್ಯಾಲೆ ಲೇಖನದಲ್ಲಿ ಬರೆದುಕೊಂಡಿರುವ ಪ್ರಕಾರ ಕಳೆದ ವರ್ಷ 46 ಬಿಲಿಯನ್ ಡಾಲರ್ ಮೊತ್ತವನ್ನು ನೆರವು ನೀಡಲು ಅಮೆರಿಕ ಸರಕಾರ ಬಳಕೆ ಮಾಡಿದೆ. ದೇಶದ ತೆರಿಗೆ ಪಾವತಿ ಮಾಡುವವರಿಗೆ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅರ್ಹತೆ ಇದೆ ಎಂದು ಅವರು ಹೇಳಿದ್ದಾರೆ.