ಐಶಾನಿ ಶೆಟ್ಟಿ – ಈ ಹೆಸರನ್ನು ನೀವು ಕೇಳಿರುತ್ತೀರಿ. ಯೋಗರಾಜ್ ಭಟ್ಟರ “ವಾಸ್ತು ಪ್ರಕಾರ’, ನೀನಾಸಂ ಸತೀಶ್ ನಾಯಕರಾಗಿರುವ “ರಾಕೆಟ್’ ಚಿತ್ರಗಳಲ್ಲಿ ನಟಿಸಿರುವ ಐಶಾನಿ, ಇತ್ತೀಚೆಗೆ ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ತನ್ನ ಪಾಡಿಗಿದ್ದ ಐಶಾನಿ ಶೆಟ್ಟಿ ಈಗ ಮತ್ತೆ ಬಂದಿದ್ದಾರೆ. “ನಡುವೆ ಅಂತರವಿರಲಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿದ್ದು, ಚಿತ್ರ ಈ ವಾರ ತೆರೆಕಾಣುತ್ತಿದೆ.
ಎಲ್ಲಾ ಓಕೆ, ಐಶಾನಿ ಎರಡು ವರ್ಷ ಬ್ರೇಕ್ ತಗೊಂಡಿದ್ದು ಯಾಕೆ ಎಂದರೆ ಕಾಲೇಜ್ ಎನ್ನುತ್ತಾರೆ. ಐಶಾನಿ ಶೆಟ್ಟಿ ಕಾಲೇಜು ಓದುತ್ತಿದ್ದಾಗಲೇ ಸಿನಿಮಾಕ್ಕೆ ಬಂದವರು. ಸಹಜವಾಗಿಯೇ ಓದು, ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡೋದು ಕಷ್ಟವಾದ ಕಾರಣ, ಐಶಾನಿ ಒಪ್ಪಿಕೊಂಡ ಪ್ರಾಜೆಕ್ಟ್ಗಳನ್ನು ಮುಗಿಸಿ ಒಂದು ನಿರ್ಧಾರಕ್ಕೆ ಬಂದು ಬಿಟ್ಟರು. ಅದು ಓದು ಮುಗಿಯುವವರೆಗೆ ಯಾವುದೇ ಸಿನಿಮಾ ಮಾಡಬಾರದು ಎಂದು.
ಅದರಂತೆ ಮಾಸ್ಟರ್ ಡಿಗ್ರಿ ಮುಗಿಸಿರುವ ಐಶಾನಿ ಈಗ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಈ ನಡುವೆಯೇ “ಕಾಜಿ’ ಎಂಬ ಕಿರುಚಿತ್ರ ನಿರ್ದೇಶಿಸಿ, ಮೆಚ್ಚುಗೆಯ ಜೊತೆಗೆ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದರು. ಈ ನಡುವೆಯೇ ಅವರು “ನಡುವೆ ಅಂತರವಿರಲಿ’ ಸಿನಿಮಾ ಒಪ್ಪಿಕೊಂಡಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದಾರೆ. ಹಾಗಾದರೆ ಮುಂದೆ ಐಶಾನಿ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯುತ್ತಾರಾ ಎಂದು ನೀವು ಕೇಳಬಹುದು.
“ಖಂಡಿತಾ ಮುಂದುವರೆಯುತ್ತೇನೆ’ ಎಂಬ ಉತ್ತರ ಐಶಾನಿಯಿಂದ ಬರುತ್ತದೆ. “ನನ್ನ ಎಜುಕೇಶನ್‌ಗೊಸ್ರ ನಾನು ಬ್ರೇಕ್ ತಗೊಂಡಿದ್ದೆ. ಈಗ ನನ್ನ ಮಾಸ್ಟರ್ ಡಿಗ್ರಿ ಮುಗಿಯಿತು. ಮುಂದೆ ಚಿತ್ರರಂಗದಲ್ಲೇ ಕೆರಿಯೆರ್ ಮುಂದುವರೆಸುತ್ತೇನೆ’ ಎನ್ನುತ್ತಾರೆ. ಈಗಾಗಲೇ ಐಶಾನಿ ಒಂದಷ್ಟು ಕಥೆಗಳನ್ನು ಕೇಳಿದ್ದು, ಸದ್ಯದಲ್ಲೇ ಅದರಲ್ಲಿ ಒಂದನ್ನು ಅಂತಿಮ ಮಾಡಲಿದ್ದಾರೆ.
ಅದಕ್ಕೂ ಮುನ್ನ “ನಡುವೆ ಅಂತರವಿರಲಿ’ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ಐಶಾನಿಗಿದೆ. ಹದಿ ಹರೆಯದ ಪ್ರೀತಿ ಪ್ರೇಮದ ಕುರಿತಾಗಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಐಶಾನಿ ಕೂಡಾ ಬೋಲ್ಡ್ ಆಗಿ ನಟಿಸಿದ್ದಾರೆ. “ಕಥೆ, ಪಾತ್ರ ತುಂಬಾ ಚೆನ್ನಾಗಿದೆ. ಹೊಸ ಬಗೆಯ ಪಾತ್ರವದು. ಚಿತ್ರದಲ್ಲಿ ಯೂತ್ಸ್ ಜೊತೆಗೆ ಪೋಷಕರಿಗೂ ಒಂದು ಸಂದೇಶವಿದೆ. ಚಿತ್ರದಲ್ಲಿ ಬೋಲ್ಡ್ ಅನ್ನುವುದಕ್ಕಿಂತ ವಿಭಿನ್ನವಾದ ಪಾತ್ರ ಸಿಕ್ಕಿದೆ’ ಎನ್ನುವುದು ಐಶಾನಿ ಮಾತು.