ಮೈಸೂರು: ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಅಚ್ಚರಿಯ ಹೇಳಿಕೆ ನೀಡಿ ಸಿದ್ದರಾಮಯ್ಯ, ಮತ್ತು ಜಿ.ಟಿ.ದೇವೇಗೌಡ ಅವರಿಗೆ ಶಾಕ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಸ್ಪರ್ಧೆ ಬೇಡ ಎಂದು ನಾನು, ಅವರು ಚರ್ಚೆ ಮಾಡಿದ್ದೇವೆ. ಕುಟುಂಬ ರಾಜಕಾರಣದ ಹೆಸರಿನಲ್ಲಿ ನಮ್ಮ ಮೇಲೆ ಅಪಪ್ರಚಾರ ನಡೆಯುತ್ತಿದೆ.ಈ ಅಪಪ್ರಚಾರದಿಂದ ದೂರವಾಗಲು ಇಂತಹ ಚರ್ಚೆಯನ್ನ ನಾನು ಅನಿತಾ ಮಾಡಿದ್ದೇವೆ. ಈ ಬಗ್ಗೆ ಅಂತಿಮ ತೀರ್ಮಾನ ಚುನಾವಣೆ ಘೋಷಣೆ ನಂತರ ಮಾಡುತ್ತೇವೆ ಎಂದರು.
ನಿಖಿಲ್ ನನ್ನ ರಾಜಕಾರಣಕ್ಕೆ ತರುವುದಕ್ಕೆ ನನಗೆ ಇಷ್ಟವಿರಲಿಲ್ಲ.ಮುಖಂಡರ ಒತ್ತಡದ ಮೇರೆಗೆ ಅವರನ್ನ ರಾಜಕಾರಣಕ್ಕೆ ತಂದೆ.
ಕುಟುಂಬ ರಾಜಕಾರಣದ ವಿಚಾರದಲ್ಲಿ ನಾನು ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತ್ನಾಡುತ್ತೇನೆ.ನಾನು ನಮ್ಮ ಸಹೋದರರು ಬೇರೆಯಾಗಿದ್ದೇವೆ.ಹಾಗಾಗಿ ನಾನು, ನನ್ನ ಪತ್ನಿ, ನನ್ನ ಮಗನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೇನೆ.ಒಟ್ಟಾರೆ ಹೆಚ್.ಡಿ ದೇವೇಗೌಡರ ಕುಟುಂಬದ ಬಗ್ಗೆ ನಾನು ಮಾತ್ನಾಡುತ್ತಿಲ್ಲ.ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಚಾಮುಂಡೇಶ್ವರಿಗೆ ಯಾರು ಬರ್ತಾರೆ ಎಂದು ಕಾರ್ಯಕರ್ತರು ಕೇಳಿದಾಗ, ನಾನೇ ಬರುತ್ತೇನೆ ಎಂದು ಹೊಸ ಟ್ವಿಸ್ಟ್ ನೀಡಿದ್ದಾರೆ.
ಹಿಜಾಬ್, ಕೇಸರಿ ಶಾಲು ವಿವಾದ ದೊಡ್ಡದಾಗಬೇಕು ಎಂಬುದು ಸರ್ಕಾರದ ಇಚ್ಚೆ.ಕಿಡಿಯಂತಿದ್ದ ವಿವಾದ ಬೆಂಕಿಯಾಗಿ ರಾಜ್ಯ ಹಬ್ಬಲು ಸರ್ಕಾರವೇ ಕಾರಣ.ಸರ್ಕಾರ ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ವಿಚಾರವನ್ನು ದೊಡ್ಡದು ಮಾಡುತ್ತಿದೆ.ಕಾಂಗ್ರೆಸ್ ಮುಸ್ಲಿಂಮರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ಅಂಗ ಸಂಸ್ಥೆಗಳು ಹಿಂದೂಗಳನ್ನ ಎತ್ತಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಈ ಎರಡೂ ಪಕ್ಷಗಳ ಉದ್ದೇಶಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಈಗ ಗಲಾಟೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮುಂದೆ ಕೇಸ್ ಬೀಳುವುದು ನಿಶ್ಚಿತ. ಈಗ ಬಂಧನವಾಗಿರುವ ವಿದ್ಯಾರ್ಥಿಗಳಲ್ಲಿ ಯಾರು ಬಿಜೆಪಿ, ಕಾಂಗ್ರೆಸ್ ಮುಖಂಡರ ಮಕ್ಳಳಿಲ್ಲ.ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.