Advertisement

100 ದಿನದಲ್ಲಿ ರಾಜ್ಯದ ಚಿತ್ರಣವನ್ನೇ ಬದಲಿಸುವೆ

10:08 AM Nov 07, 2019 | Lakshmi GovindaRaju |

ಬೆಂಗಳೂರು: ಮುಂದಿನ ನೂರು ದಿನಗಳಲ್ಲಿ ರಾಜ್ಯದ ಚಿತ್ರಣವನ್ನು ಬದಲಾಯಿಸುತ್ತೇನೆ. ಇದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ದೃಢನುಡಿ. ಬಿಜೆಪಿ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ “ದಿನ ನೂರು ಸಾಧನೆ ನೂರಾರು’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

Advertisement

ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ, ನೂರು ದಿನದಲ್ಲಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದೇನೆ ಎಂದರು. ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ.ಪಾಟೀಲ್‌, ಪ್ರಭು ಚೌವ್ಹಾನ್‌, ಅನೇಕ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಅನರ್ಹರ ಕ್ಷೇತ್ರಗಳಿಗೆ ಆದ್ಯತೆ ನೀಡುವುದು ಕರ್ತವ್ಯ: ಅನರ್ಹ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿಲ್ಲ. ಮೊದಲು ನೀಡಿದ ಅನುದಾನಕ್ಕಿಂತ ಕಡಿಮೆ ನೀಡಲಾಗಿದೆ. ಅವರ ಕ್ಷೇತ್ರಗಳಲ್ಲಿ ಕೆಲಸ ನೀಡುವುದು ನಮ್ಮ ಧರ್ಮ. ಅದಕ್ಕೆ ಆದ್ಯತೆ ಕೊಟ್ಟಿದ್ದೇವೆ. ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಶಾಸಕರ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದೇನೆ. ಅನರ್ಹರ ಕುರಿತ ಆಡಿಯೊ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ರೇಣುಕಾಚಾರ್ಯ ವಿರುದ್ಧ ಗರಂ: ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಅಭಿನಂದಿಸಲು ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೂಗುಚ್ಚ ನೀಡಿದರು. ಈ ವೇಳೆ, ಗರಂ ಆದ ಯಡಿಯೂರಪ್ಪ, “ಏನಪ್ಪ ಹೋರಿ, ಗೂಳಿಯಿಂದೆಲ್ಲಾ ಗುದ್ದಿಸಿಕೊಳ್ತಿಯಾ. ನಿನಗೆ ಗೊತ್ತಾಗುವುದಿಲ್ವಾ’ ಎಂದರು. ಅವರ ಮಾತಿಗೆ ಏನೂ ಪ್ರತಿಕ್ರಿಯಿ ಸದೇ ರೇಣುಕಾಚಾರ್ಯ ಹೂಗುಚ್ಚ ನೀಡಿ ಅಭಿನಂದಿಸಿದರು. ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಯಾರೂ ಹೂಗುಚ್ಚ ನೀಡುವುದು ಹಾಗೂ ಸನ್ಮಾನ ಮಾಡದಂತೆ ಮುಖ್ಯಮಂತ್ರಿ ಪಕ್ಷದ ಮುಖಂಡರು, ಸಚಿವರು, ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಸಾಧನೆಯ ಮಾತುಗಳು
* ಪ್ರಧಾನಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಮೀನುಗಾ ರರು, ನೇಕಾರರ ಸಾಲ ಮನ್ನಾ ಮಾಡಲಾಗಿದೆ. ಅತಿವೃಷ್ಟಿ ಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಎನ್‌ಡಿಆರ್‌ಎಫ್ ನಿಯಮ ಕ್ಕಿಂತ ಹೆಚ್ಚಿನ ಪರಿಹಾರ ನೀಡಿದ್ದೇವೆ. 7 ಲಕ್ಷ ಸಂತ್ರಸ್ತ ಕುಟುಂಬ ಗಳಿಗೆ ತಲಾ 10 ಸಾವಿರ ರೂ ತಲುಪಿಸಲಾಗಿದೆ. ಮನೆ ಕಳೆದು ಕೊಂಡವರಿಗೆ ಆರಂಭಿಕವಾಗಿ 1 ಲಕ್ಷ ರೂ.ಹಣ ಬಿಡುಗಡೆ ಮಾಡಲಾಗಿದೆ. ದೇಶದ ಯಾವ ರಾಜ್ಯದಲ್ಲಿಯೂ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಇಷ್ಟೊಂದು ಪ್ರಮಾಣದ ಪರಿಹಾರ ನೀಡಿಲ್ಲ.

Advertisement

* ಪ್ರವಾಹ ಪೀಡಿತ ಜನರು ವಲಸೆ ಹೋಗುವುದನ್ನು ತಡೆಯಲು 50 ಮಾನವ ದಿನಗಳನ್ನು ಹೆಚ್ಚಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿಗೆ ಆದ್ಯತೆ, ನಗರಾಭಿವೃದ್ಧಿಗೆ ಒತ್ತು ನೀಡಲಾಗಿದೆ.

* ಪ್ರವಾಹ ಪೀಡಿತ ಪ್ರದೇಶದಲ್ಲಿ ಎಲ್ಲ ಸಚಿವರು ನಿಂತು ಕೆಲಸ ಮಾಡಿದ್ದಾರೆ. ಇದು ನಮ್ಮ ಸಾಧನೆ ಅಂದುಕೊಂಡಿದ್ದೇನೆ. ಅತಿವೃಷ್ಠಿ ಕಡಿಮೆಯಾಗಿ ಒಳ್ಳೆಯ ಕಾಲ ಬರುವ ವಿಶ್ವಾಸ ಇದೆ. ನನ್ನ ಕೆಲಸಕ್ಕೆ ಜನರು ಅಂಕ ಕೊಡಬೇಕು. ಸಿದ್ದರಾಮಯ್ಯನ ಹೆಸರು ಇಲ್ಲಿ ಪ್ರಸ್ತಾಪ ಮಾಡಬೇಡಿ. ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ.

* 100 ದಿನದಲ್ಲಿ ಕೇಂದ್ರ ಸರ್ಕಾರ ಉತ್ತಮವಾಗಿ ಸ್ಪಂದಿ ಸಿದೆ. ಪ್ರವಾಹ ಉಂಟಾದಾಗ ದೇಶದಲ್ಲಿ ಇಷ್ಟು ಬೇಗ ಪರಿಹಾರ ನೀಡಿದ ಉದಾಹರಣೆ ಎಲ್ಲಿಯೂ ಇಲ್ಲ.

ಬೆಂಗಳೂರು ಅಭಿವೃದ್ಧಿಗೆ ಒತ್ತು
* ಬೆಂಗಳೂರಿನಲ್ಲಿ ಮೆಟ್ರೋ 2ನೇ ಹಂತದ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಇನ್ಫೋಸಿಸ್‌ ಪೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ತಜ್ಞರ ಸಭೆ ಕರೆಯಲಾಗಿದ್ದು, ನೂರು ದಿನದಲ್ಲಿ ಬೆಂಗಳೂರಿನ ಚಿತ್ರಣ ಬದಲು ಯೋಜನೆ ರೂಪಿಸಲಾಗುವುದು. ಸಬ್‌ ಅರ್ಬನ್‌ ರೈಲು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.

* ಬೆಂಗಳೂರಿನಲ್ಲಿ 1 ಲಕ್ಷ ಬಹುಮಹಡಿ ಕಟ್ಟಡ ಯೋಜನೆ ಅಡಿಯಲ್ಲಿ 28 ಸಾವಿರ ಮನೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ.

ಮದ್ಯ ನಿಷೇಧವಿಲ್ಲ
* ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಆ ರೀತಿಯ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ.

* ಕಳಸಾ-ಬಂಡೂರಿ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಕೊಡಿಸುವಲ್ಲಿ ಯಶಸ್ವಿಯಾಗಿ ದ್ದೇವೆ. ಕೃಷ್ಣಾ ನದಿ ನೀರು ಬಳಕೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಅಂತಾರಾಜ್ಯ ನದಿ ನೀರು ವಿವಾದ ಕುರಿತು ಸುಪ್ರೀಂಕೋರ್ಟ…ನಲ್ಲಿ ವಾದ ಮಂಡಿಸಲು ಆಗಾಗ ನ್ಯಾಯವಾದಿಗಳನ್ನು ಬದಲಾಯಿಸಲಾಗುತ್ತದೆ. ಹಿರಿಯ ವಕೀಲರನ್ನು ಸೇರ್ಪಡೆ ಮಾಡಿಕೊಳ್ಳುವುದು ಆಡಳಿತಾತ್ಮಕ ವಿಷಯ.

* ಕರ್ನಾಟಕ ವಿದ್ಯುತ್‌ ಸ್ವಾವಲಂಬಿ ರಾಜ್ಯವಾಗಿದೆ. ನವೀಕರಣ ಇಂಧನ ಯೋಜನೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.

* ಕಲಬುರಗಿ ವಿಮಾನ ನಿಲ್ದಾಣವನ್ನು ಶೀಘ್ರವೆ ಪ್ರಧಾನಿಯಿಂದ ಉದ್ಘಾಟಿಸಲಾಗುವುದು. ಶಿವಮೊಗ್ಗ ಮಿನಿ ವಿಮಾನ ಪ್ರಾರಂಭಿಸಲು ಟೆಂಡರ್‌ ಕರೆಯಲಾಗಿದೆ.

* 34 ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 8 ಸಾವಿರ ಉದ್ಯೋಗ ನೀಡಲು ಗುರಿ ಹೊಂದಲಾಗಿದೆ.

ರಾಜ್ಯದ ಹಣಕಾಸು ಸ್ಥಿತಿ ಸುಭದ್ರ
* ರಾಜ್ಯದ ಹಣಕಾಸು ಪರಿಸ್ಥಿತಿ ಸುಭದ್ರವಾಗಿದೆ. ಸಾರಿಗೆ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಿಂದ ತೆರಿಗೆ ಹೆಚ್ಚಿಗೆ ಸಂಗ್ರಹವಾಗಿದೆ.

* ಮಧ್ಯಾಹ್ನದ ಬಿಸಿಯೂಟದಲ್ಲಿ ಸಮತೋಲನ ಆಹಾರ ನೀಡಲು ತೀರ್ಮಾನಿಸಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 1 ಲಕ್ಷ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ.

* ಚಿಕ್ಕಮಗಳೂರು, ಯಾದಗಿರಿ, ಹಾವೇರಿ, ಚಿಕ್ಕಬಳ್ಳಾಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಆರಂಭಿಸಲು ಕೇಂದ್ರದಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹಣ ನೀಡಲಾಗುವುದು.

* ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್‌ ಕೇಂದ್ರ ತೆರೆಯಲು ತೀರ್ಮಾನ ಮಾಡಿದ್ದೇವೆ. ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಹಣ ನೀಡಿದ್ದೇವೆ. ಎಲ್ಲರಿಗೂ ಸೂರು ಯೋಜನೆಯಡಿಯಲ್ಲಿ ಈ ವರ್ಷ 1.5 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 38 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ.

* ಆದಿಚುಂಚನಗಿರಿ ಸ್ವಾಮೀಜಿ ಹಾಗೂ ತುಮಕೂರು ಸಿದ್ದಗಂಗಾ ಸ್ವಾಮೀಜಿ ಹೆಸರಿನಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಕೇಂದ್ರ ತೆರೆಯಲು ತಲಾ 25 ಕೋಟಿ ರೂ. ನೀಡಲಾಗಿದೆ.

* ರಾಜ್ಯದಲ್ಲಿ 51 ಸಾವಿರ ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next