ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರವಿವಾರ(ಸೆ1) ರಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಸಿಎಂ ಆಗಬೇಕು. ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ” ಎಂದು ಪರೋಕ್ಷವಾಗಿ ಸಿಎಂ ಆಗುವ ಬಯಕೆ ಹೊರ ಹಾಕಿದರು.
ಇದೆ ವೇಳೆ ನಗುತ್ತಲೇ ಪ್ರತಿಕ್ರಿಯಿಸಿ ”ನನಗೆ ಆಸೆ ಇದೆ. ನಿಮ್ಮಂಥವರಿಗೂ ಆಸೆ ಇರುತ್ತದೆ. ಜೀವನದಲ್ಲಿ ಗುರಿ ಮುಖ್ಯ. ನಾನು ಸಿದ್ದರಾಮಯ್ಯ ಅವರಿಗಿಂತ 2 ವರ್ಷ ಹಿರಿಯವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಅವರು ನನಗೆ ಒಳ್ಳೆಯ ಸ್ನೇಹಿತ. ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯನವರೇ ಇರುತ್ತಾರೆ. ಸದ್ಯಕ್ಕೆ ಬದಲಾವಣೆ ಚರ್ಚೆ ನಡೆದಿಲ್ಲ” ಎಂದರು.
ಹಿಂದೆ ಫೋನ್ ಟ್ಯಾಪಿಂಗ್ ಆರೋಪ ಬಂದ ತತ್ ಕ್ಷಣ ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ದಿನನಿತ್ಯ ಫೋನ್ ಟ್ಯಾಪಿಂಗ್ ನಡೆಯುತ್ತಿದೆ. ಹಿಂದಿನ ಹಾಗೆ ಮೌಲ್ಯಾಧಾರಿತ ರಾಜಕಾರಣ ನಡೆಯುತ್ತಿಲ್ಲ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಯಾವ ತಪ್ಪು ಮಾಡಿದ್ದಾರೆ?. ಸಾವಿರಾರು ಕೋಟಿ ರೂ. ಹಗರಣ ಎಂದು ಹೇಳುತ್ತಿದ್ದಾರೆ. ಆರೋಪದ ಬಗ್ಗೆ ದಾಖಲೆ ಕೊಡಿ ಎಂದು ನಾನೇ ಸರಕಾರಕ್ಕೆ ಪತ್ರ ಬರೆಯುತ್ತೇನೆ” ಎಂದರು.
ಸಚಿವರಾದ ಡಾ.ಜಿ. ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆ ಎಂದರು. ಗ್ಯಾರಂಟಿ ಗಳಿಂದ ಸರಕಾರಕ್ಕೆ ಆರ್ಥಿಕ ಹೊರೆ ಬಿದ್ದಿರುವುದು ನಿಜ, ಬೆಲೆ ಏರಿಕೆಗೆ ಅದೇ ಕಾರಣವಲ್ಲ. ದೇಶದೆಲ್ಲೆಡೆ ಬೆಲೆಯೇರಿಕೆಯಾಗಿದೆ ಎಂದರು.