ಯಶವಂತಪುರ: ವೃಥಾ ಆರೋಪ ಮಾಡುವ ರಾಜಕೀಯ ವಿರೋಧಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದರು.
ತಾವರೆಕೆರೆ ಹೋಬಳಿ ಮಾರೇನಹಳ್ಳಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚೋಳನಾಯಕನಹಳ್ಳಿ ಹಾಗೂ ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕನಾಗಿ ಮತದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಒಂದೇ ಕಾರಣಕ್ಕಾಗಿ ರಾಜೀನಾಮೆ ನೀಡಿದೆ. ಇದರಿಂದ ಕ್ಷೇತ್ರದ ಜನತೆಗೆ ಅನ್ಯಾಯವಾಗುವುದಿಲ್ಲ. ಬದಲಿಗೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.
“ಬಿಡಿಎ ಸದಸ್ಯನಾಗಿ 200 ಕೋಟಿ ರೂ. ಅನುದಾನ ತಂದಿದ್ದೆ. ಆದರೆ, ಅಧ್ಯಕ್ಷನಾಗಿ ನಯಾ ಪೈಸೆ ತರಲಾಗಲಿಲ್ಲ. ಜತೆಗೆ ಕೆಂಪೆಗೌಡ ಬಡಾವಣೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಟ್ಟ ರೈತರಿಗೆ ನಿವೇಶನ ಹಾಗೂ ಪರಿಹಾರದ ಹಣ ಕೊಡಿಸಲಾಗಲಿಲ್ಲ. ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರೂ ನ್ಯಾಯ ಒದಗಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಚನಬೆಲೆ ಜಲಾಶಯದಿಂದ 32 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಜಮೀನು ಮಂಜೂರು ಮಾಡಿಸಿದರೂ ಕಾಮಗಾರಿ ಶುರುವಾಗಲಿಲ್ಲ. ಈ ರೀತಿಯ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಹಕಾರ ಸಿಗದ ಕಾರಣ, ಸಮ್ಮಿಶ್ರ ಸರ್ಕಾರದಿಂದ ಹೊರ ಬರಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಎಸ್.ಟಿ.ಸೋಮಶೇಖರ್ ಸಚಿವರಾಗುವುದರಿಂದ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮತ್ತೆ ಚಾಲನೆ ದೊರೆಯಲಿದೆ. ಕ್ಷೇತ್ರದ ಅಭಿವೃದ್ಧಿಗೆ ಸಿಕ್ಕಿರುವ ಈ ಸದವಕಾಶವನ್ನು ಮತದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಿ.ಎಂ.ಮಾರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಹನುಮಂತಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.