ಹೆಣ್ಣಿನ ಅಂದವನ್ನು ಅಳೆಯುವ ಮಾನದಂಡಗಳಲ್ಲಿ ತಲೆಗೂದಲೂ ಒಂದು. ಈ ಮಾತನ್ನು ನಾವೆಲ್ಲಾ ಬಹಳ ಹಿಂದಿನಿಂದ ನಂಬಿಕೊಂಡು ಬಂದಿದ್ದೇವೆ. ಸುಂದರವಾದ ಹೆಣ್ಣಿನ ವರ್ಣನೆಯಲ್ಲಿ ಆಕೆಯ ನೀಳ, ದಟ್ಟ, ಕಪ್ಪುಗೂದಲಿನ ಉಲ್ಲೇಖ ಇದ್ದೇ ಇರುತ್ತದೆ. ಆದರೆ, ಸೌಂದರ್ಯ ಮತ್ತು ಹೆಣ್ತನಕ್ಕೆ ಕೂದಲನ್ನು ನಂಟು ಹಾಕುವವರಿಗೆ ತನ್ನದೇ ರೀತಿಯಲ್ಲಿ ದಿಟ್ಟ ಉತ್ತರ ಕೊಟ್ಟಿದ್ದಾಳೆ ಬಾಲಿವುಡ್ ನಿರ್ದೇಶಕಿ ತಾಹಿರಾ ಕಶ್ಯಪ್ ಖುರಾನ.
ಇತ್ತೀಚೆಗೆ ತಾಹಿರಾ, ಪತಿ ಆಯುಷ್‌ಮಾನ್ ಖುರಾನ ಜೊತೆಗಿನ ಸೆಲ್ಫಿಯೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ತಾಹಿರಾಗೆ ಗಿಡ್ಡ ಕೂದಲಿತ್ತು. ಆ ಫೋಟೋಗೆ ಬಂದ ಕಮೆಂಟ್‌ಗಳು ಮಾತ್ರ ಕೀಳುಮಟ್ಟದ್ದಾಗಿದ್ದವು. “ತಾಹಿರಾ, ನೀವು ಆಯುಷ್‌ಮಾನ್‌ರ ಹೆಂಡತಿಯಲ್ಲ, ಸೋದರನಂತೆ ಕಾಣುತ್ತಿದ್ದೀರಿ’ ಅಂತ ಒಬ್ಬ ಕಮೆಂಟ್ ಮಾಡಿದರೆ, ಇನ್ನೊಬ್ಬ “ಸೋದರ ಅಲ್ಲ, ಇಬ್ಬರೂ ಅವಳಿ-ಜವಳಿಯಂತೆ ಕಾಣಿಸುತ್ತಿದ್ದಾರೆ’ ಎಂದು ಕುಹಕವಾಡಿದ್ದ. ಇಂಥ ಕಮೆಂಟ್‌ಗಳಿಗೆ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಲಕ್ಷ್ಯ ನೀಡುವುದಿಲ್ಲವಾದರೂ, ತಾಹಿರಾ ಆ ಕಮೆಂಟ್‌ಗಳನ್ನು ಕೇಳಿ ಸುಮ್ಮನಾಗಿಲ್ಲ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕಮೆಂಟ್ ಮಾಡಿದವರ ಸಣ್ಣ ಬುದ್ಧಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ.
“ಉದ್ದ ಕೂದಲಿರುವ ಹುಡುಗಿಯರು ಮಾತ್ರ ಸುಂದರಿಯರು ಅಂತ ನಾವು ಮೊದಲಿನಿಂದಲೂ ನಂಬಿಕೊಂಡು ಬಂದಿದ್ದೇವೆ. ಹೆಣ್ಣಿನ ಸೌಂದರ್ಯವನ್ನು ಆಕೆಯ ಕೂದಲಿನ ಜೊತೆಗೆ ನಂಟು ಹಾಕುತ್ತೇವೆ. ಈ ಕಲ್ಪನೆಯನ್ನು ಬದಲಿಸುವ ಕಾಲ ಈಗ ಬಂದಿದೆ. ಗಿಡ್ಡ ಕೂದಲು ಕೂಡಾ ಸುಂದರ, ಮೋಜಿನ ಮತ್ತು ಹೆಣ್ತನದ ಸಂಕೇತವೇ. ನನ್ನ ಹೆಣ್ತನವನ್ನು ನಿರ್ಧರಿಸುವ ಹಕ್ಕನ್ನು ಜನರಿಗೆ ಮತ್ತು ಸೌಂದರ್ಯದ ಬಗ್ಗೆ ಅವರು ನಂಬಿರುವ ವ್ಯಾಖ್ಯಾನಗಳಿಗೆ ಬಿಟ್ಟು ಕೊಡುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಕಳೆದ ವರ್ಷವಷ್ಟೇ ಸ್ತನ ಕ್ಯಾನ್ಸರ್‌ಗೆ ತುತ್ತಾಗಿ, ಚೇತರಿಸಿಕೊಳ್ಳುತ್ತಿರುವ ತಾಹಿರಾ, ಸಾಮಾಜಿಕ ಜಾಲತಾಣಗಳ ಮೂಲಕ ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು, ಕೀಮೋಥೆರಪಿಯ ನಂತರ ಕೂದಲು ಉದುರಿ ಬೋಳಾದ ತಲೆಯ ಫೋಟೊವನ್ನು ಹಂಚಿಕೊಂಡಿದ್ದರು. ಸರ್ಜರಿಯ ನಂತರ, ಕ್ಯಾನ್ಸರ್ ದಿನದಂದು ಟಾಪ್‌ಲೆಸ್ ಫೋಟೊವನ್ನು ಶೇರ್ ಮಾಡುವ ದಿಟ್ಟತನವನ್ನೂ ಅವರು ತೋರಿದ್ದರು. ಆಗ ಸೆಲೆಬ್ರಿಟಿಗಳು ಕೂಡಾ ತಾಹಿರಾ ಅವರ ಧೈರ್ಯವನ್ನು ಮೆಚ್ಚಿ, ಬೆನ್ನಿಗೆ ನಿಂತಿದ್ದರು. ಈಗಲೂ ಅಷ್ಟೆ, ಕುಹಕದ ಕಮೆಂಟ್‌ಗಳ ಮಧ್ಯೆಯೂ ಬಹಳಷ್ಟು ಜನ ಅವರನ್ನು ಮೆಚ್ಚಿ, ಕೊಂಡಾಡಿದ್ದಾರೆ.