ಮಂಗಳೂರು: ವೃದ್ಧೆಯ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನೆಯಾಗಿದ್ದರಿಂದ ಪಚ್ಚನಾಡಿ ಶ್ಮಶಾನದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದರಿಂದ ಕಾನೂನು ತೊಡಕು ಉಂಟಾಗಬಾರದೆಂಬ ಕಾರಣಕ್ಕೆ ಅವರನ್ನು ಸಮಧಾನಿಸಿ ಸೂಕ್ತ ಮಾಹಿತಿ ನೀಡಲು ಸ್ಥಳಕ್ಕೆ ಹೋಗಿದ್ದೇನೆಯೇ ಹೊರತು ಅಂತ್ಯಸಂಸ್ಕಾರವನ್ನು ತಡೆಯಲು ಅಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಜಿಲ್ಲಾಡಳಿತ ಮೊದಲೇ ವೃದ್ಧೆಯ ಮೃತ ದೇಹವನ್ನು ಕೊಂಡೊಯ್ದು ಪಚ್ಚನಾಡಿ ಶ್ಮಶಾನದಲ್ಲಿ ಇಡಲಾ ಗಿತ್ತು ಎಂಬ ಮಾಹಿತಿ ಸತ್ಯಕ್ಕೆ ದೂರವಾದುದು. ಅಲ್ಲಿ ಬಹಳಷ್ಟು ಜನ ಸೇರಿದ್ದರಿಂದ ಪರಿಸ್ಥಿತಿ ಕೈ ಮೀರಿದರೆ ಸಮಸ್ಯೆ ಎಂದು ತಿಳಿದು ಸ್ಥಳ ಬದಲಾಯಿಸಲಾಯಿತು.
ಕೋವಿಡ್ ಸೋಂಕಿತರನ್ನು ಚಿತೆಯಲ್ಲಿ ದಹಿಸುವುದರಿಂದ ಸೋಂಕು ಹರಡುವುದಿಲ್ಲ. ಈ ಬಗ್ಗೆ ವೈದ್ಯನಾಗಿ ಮಾಹಿತಿ ತಿಳಿದುಕೊಂಡಿದ್ದೇನೆ. ತಜ್ಞರೂ ಹೇಳಿದ್ದಾರೆ. ಹೀಗಾಗಿ ನಾನು ವಿರೋಧ ವ್ಯಕ್ತಪಡಿಸಿಲ್ಲ. ವೈದ್ಯನಾಗಿ ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಸೋಂಕಿತರ ಅಂತ್ಯಸಂಸ್ಕಾರದಿಂದ ಪರಿಸರದಲ್ಲಿ ದುಷ್ಪರಿಣಾಮವಾಗುವುದಿಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಬೇಕಿದೆ. ಮುಂದೆ ಈ ರೀತಿ ಆಗದಂತೆ ಜಿಲ್ಲಾಡಳಿತ ಸಮರ್ಪಕ ಕ್ರಮ ತೆಗೆದುಕೊಳ್ಳಲಿದೆ ಕೊರೊನಾ ಸೋಂಕಿತರ ಇಡೀ ಕುಟುಂಬವೇ ದೂರವಿದ್ದು ಅಂತ್ಯ ಸಂಸ್ಕಾರಕ್ಕೆ ಬರಲಾಗದೆ ಸಂಕಟ ಪಡು ತ್ತಿರುವಾಗ ಭಾವನಾತ್ಮಕವಾಗಿ ಯೋಚಿಸುವ ಜತೆಗೆ ಮಾನವೀಯತೆಯಿಂದ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಸಂಕಷ್ಟದ ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.