ನವದೆಹಲಿ: ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ ಶುಕ್ರವಾರ (ಫೆ.09) ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಘೋಷಿಸಿರುವುದನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಲೋಕಸಭೆಯ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಸೋನಿಯಾ ಗಾಂಧಿ, ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸುವೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೂವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವ ಬಗ್ಗೆ ಎಕ್ಸ್ ನಲ್ಲಿ ತಿಳಿಸಿದ್ದರು. ಮಾಜಿ ಪ್ರಧಾನಿ ನರಸಿಂಹರಾವ್ ಅವರು ದೇಶದ ರಾಜಕೀಯ ರೂಪಾಂತರಕ್ಕೆ ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿರುವುದಾಗಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದರು. ದೇಶದ ಆರ್ಥಿಕ ತಳಗಟ್ಟನ್ನು ಭದ್ರಗೊಳಿಸುವಲ್ಲಿ ಪಿವಿಎನ್ ಕೊಡುಗೆ ಅಪಾರವಾಗಿದೆ. ಅದೇ ರೀತಿ ಚರಣ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅನುಪಮವಾದದ್ದು. ಎಂಎಸ್ ಸ್ವಾಮಿನಾಥನ್ ಅವರು ದೇಶದ ಕೃಷಿ ಮತ್ತು ರೈತರ ಏಳಿಗೆಗೆ ಅದ್ವಿತೀಯ ಕೊಡುಗೆ ನೀಡಿದ್ದರು ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಶ್ಲಾಘಿಸಿದ್ದಾರೆ.
ಕಳೆದ ವಾರ ಕೇಂದ್ರ ಸರ್ಕಾರ ಎಲ್.ಕೆ.ಅಡ್ವಾಣಿ ಮತ್ತು ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿತ್ತು. ಕೇಂದ್ರ ಸರ್ಕಾರ ಈ ಬಾರಿ ಐದು ಗಣ್ಯರಿಗೆ ಭಾರತ ರತ್ನ ಘೋಷಿಸಿದಂತಾಗಿದೆ.