“ದೇವರೇ, ಅಂದು ನಾನು ಕೂಡ ಇದೇ ಸ್ಥಿತಿಯಲ್ಲಿದ್ದೆ…’ ಎಂದು ಪ್ರತಿಕ್ರಿಯಿಸಿದವರು ಬೇರೆ ಯಾರೂ ಅಲ್ಲ, ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಲಾಂಗ್‌ಜಂಪರ್ ಅಂಜು ಬಾಬ್ಬಿ ಜಾರ್ಜ್. 2003ರ ಪ್ಯಾರಿಸ್ ಕ್ರೀಡಾಕೂಟದಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.
“ಇಂದು ನೀರಜ್‌ಗೆ ಏನಾಗಿತ್ತೋ, ಅವರು ಯಾವ ಸ್ಥಿತಿಯಲ್ಲಿದ್ದರೋ… 2003ರ ಪ್ಯಾರಿಸ್ ಕೂಟದಲ್ಲಿ ನಾನು ಕೂಡ ಇದೇ ಸ್ಥಿತಿಯಲ್ಲಿದ್ದೆ. ಮೊದಲ 3 ಸುತ್ತುಗಳ ಬಳಿಕ ನಾನು 4ನೇ ಸ್ಥಾನದಲ್ಲಿದ್ದೆ. ಇಂದು ನೀರಜ್ ಕೂಡ ಮೊದಲ 3 ಸುತ್ತುಗಳ ಬಳಿಕ 4ನೇ ಸ್ಥಾನಕ್ಕೆ ಇಳಿದರು. ಆದರೆ ನಾನು ಮೊದಲ ಸುತ್ತಿನಲ್ಲಿ ಟಾಪರ್ ಆಗಿದ್ದೆ. ಆದರೆ ಮೂರರ ಬಳಿಕ ಪದಕ ರೇಸ್‌ನಿಂದ ಹೊರಗುಳಿದೆ. ಸ್ಪರ್ಧೆಗೆ ಮರಳಿ ಪದಕವೊಂದನ್ನು ಗೆಲ್ಲಲೇಬೇಕೆಂಬ ದೃಢ ಸಂಕಲ್ಪ ಮಾಡಿದೆ. ಕಂಚು ಗೆದ್ದೆ. ಇಂದು ನೀರಜ್‌ಗೂ ಇಂಥದೇ ಅನುಭವವಾಯಿತು…’ ಎಂದರು ಅಂಜು ಬಾಬ್ಬಿ ಜಾರ್ಜ್.
“ಯಾವತ್ತೂ ನಿಮ್ಮ ಆತ್ಮವಿಶ್ವಾಸ ಗಟ್ಟಿಯಾಗಿರಬೇಕು. ಇದನ್ನು ಕಳೆದುಕೊಂಡದ್ದೇ ಆದರೆ ನಿಮಗೆ ಪದಕ ಗೆಲ್ಲಲು ಸಾಧ್ಯವಿಲ್ಲ. ನೀವು ವಿಶ್ವಶ್ರೇಷ್ಠ ಆ್ಯತ್ಲೀಟ್ ಆಗಿ ದ್ದರೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಖಂಡಿತ ನಂಬಿಕೆ ಇರಲೇಬೇಕು. ಆಗಷ್ಟೇ ಪದಕ ಗೆಲ್ಲಲು ಸಾಧ್ಯ’ ಎಂದು ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಉಪಾ ಧ್ಯಕ್ಷೆಯೂ ಆಗಿರುವ, 45 ವರ್ಷದ ಅಂಜು ಹೇಳಿದರು.
“ನೀರಜ್ ಮೊದಲ ಎಸೆತವೇ ಫೌಲ್ ಆದಾಗ ಎಲ್ಲರೂ ದಂಗಾದರು. ಸಾಮಾನ್ಯವಾಗಿ ನೀರಜ್ ಮೊದಲ ಅಥವಾ ಎರಡನೇ ಎಸೆತದಲ್ಲೇ ಅತ್ಯುತ್ತಮ ಸಾಧನೆ ದಾಖಲಿಸುತ್ತಾರೆ. ಕಠಿನ ಪರಿಸ್ಥಿತಿಯಲ್ಲೂ ನೀರಜ್ ಒತ್ತಡವನ್ನು ಮೆಟ್ಟಿ ನಿಂತರು. ಇಲ್ಲಿನ ಪದಕಕ್ಕಾಗಿ 19 ವರ್ಷ ಕಾಯಬೇಕಾಯಿತು’ ಎಂದರು.
“ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದು ದೊಡ್ಡ ಸಾಧನೆ. ಅವರು ಹೀಗೆಯೇ ಮತ್ತೆ ಮತ್ತೆ ದೇಶಕ್ಕೆ ಹೆಮ್ಮೆ, ಗೌರವ ಮೂಡಿಸುತ್ತಲೇ ಇರಲಿ…’ ಎಂದು ಅಂಜು ಹಾರೈಸಿದರು.