ಮುಂಬಯಿ: ಇಂದಿನ ಸ್ಟಾರ್ ಆಟಗಾರ, ರನ್ ಮೆಶಿನ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು 2008ರಲ್ಲಿ ಮೊದಲ ಸಲ ಭಾರತ ತಂಡಕ್ಕೆ ಸೇರಿಸಿಕೊಂಡಾಗ ಎಷ್ಟೆಲ್ಲ ರಗಳೆ ಆಗಿತ್ತು, ಇದಕ್ಕೆ ಯಾರೆಲ್ಲ ವಿರೋಧಿಸಿದ್ದರು, ಇದು ಯಾರ ಹುದ್ದೆಗೆ ಕುತ್ತು ತಂದಿತ್ತು… ಇಂಥದೊಂದು ಸ್ವಾರಸ್ಯಕರ ಘಟನೆಯನ್ನು ಅಂದಿನ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕಾರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಂಡಿದ್ದರಿಂದ ತಾನು ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಾಯಿತು ಎಂಬ ಸ್ಫೋಟಕ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ 2008ರ ಅಂಡರ್-19 ವಿಶ್ವಕಪ್ ಕ್ರಿಕೆಟ್ ಸಾಧನೆಯಿಂದ ಪ್ರಭಾವಿತರಾದ ವೆಂಗ್‌ಸರ್ಕಾರ್, ಕೊಹ್ಲಿಯನ್ನು ಆಸ್ಟ್ರೇಲಿಯದಲ್ಲಿ ನಡೆದ “ಎಮರ್ಜಿಂಗ್ ಪ್ಲೇಯರ್ ಟೂರ್ನಮೆಂಟ್’ಗಾಗಿ ಆಯ್ಕೆ ಮಾಡಿದರು. ಅಲ್ಲಿ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ, ವೆಸ್ಟ್ ಇಂಡೀಸ್ 123 ರನ್ ಬಾರಿಸಿ ಮಿಂಚು ಹರಿಸಿದರು. ಹತ್ತಿರವಿದ್ದುಕೊಂಡೇ ಕೊಹ್ಲಿ ಆಟ ವೀಕ್ಷಿಸಿದ ವೆಂಗ್‌ಸರ್ಕಾರ್ ಈ ಯುವ ಬ್ಯಾಟ್ಸ್‌ಮನ್‌ನಿಂದ ಇನ್ನಷ್ಟು ಪ್ರಭಾವಿತರಾದರು. ಕೊಹ್ಲಿಯ ಬ್ಯಾಟಿಂಗ್ ಕೌಶಲ, ಆತ್ಮವಿಶ್ವಾಸವನ್ನೆಲ್ಲ ಕಂಡು ಈತ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಬಲ್ಲ ಯೋಗ್ಯತೆಯುಳ್ಳ ಆಟಗಾರ ಎಂಬ ತೀರ್ಮಾನಕ್ಕೆ ಬಂದರು.
ಆದರೆ ಭಾರತ ತಂಡವನ್ನು ಆರಿಸುವಾಗ ವಿರಾಟ್ ಕೊಹ್ಲಿ ಹೆಸರನ್ನು ವೆಂಗ್‌ಸರ್ಕಾರ್ ಪ್ರಸ್ತಾವಿಸಿದಾಗ ಇದಕ್ಕೆ ನಾಯಕ ಧೋನಿ ಮತ್ತು ಕೋಚ್ ಕರ್ಸ್ಟನ್ ವಿರೋಧ ವ್ಯಕ್ತಪಡಿಸಿದರು. ತಾವು ಈವರೆಗೆ ಕೊಹ್ಲಿ ಬ್ಯಾಟಿಂಗ್ ನೋಡಿಲ್ಲ ಎಂಬ ವಾದವನ್ನು ಮುಂದಿಟ್ಟರು. ಆದರೆ ತಾನು ಸ್ವತಃ ನೋಡಿದ್ದೇನೆ ಎಂದು ವೆಂಗ್‌ಸರ್ಕಾರ್ ಪಟ್ಟು ಹಿಡಿದರು. ತಂಡಕ್ಕೂ ಸೇರಿಸಿದರು.
ಬದರೀನಾಥ್ ಬೇಕಿತ್ತು…
ಕೊಹ್ಲಿ ಬದಲು ತಮಿಳುನಾಡಿನ ಎಸ್. ಬದರೀನಾಥ್ ತಂಡದಲ್ಲಿರಬೇಕಿತ್ತು ಎಂಬುದೇ ಈ ವಿರೋಧಕ್ಕೆ ಕಾರಣ. ಅವರಾಗ ಧೋನಿ ನಾಯಕತ್ವದ, ಎನ್. ಶ್ರೀನಿವಾಸನ್ ಮಾಲಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯನೂ ಆಗಿದ್ದರು. ಸಹಜವಾಗಿಯೇ ಬಿಸಿಸಿಐ ಖಜಾಂಚಿ ಶ್ರೀನಿವಾಸನ್ ಮಧ್ಯ ಪ್ರವೇಶಿಸಿದರು.
“ಬದರೀನಾಥ್ ಅವರನ್ನು ಕೈಬಿಡಲು ಕಾರಣವೇನು, ಅವರು ದೇಶಿ ಕ್ರಿಕೆಟ್‌ನಲ್ಲಿ 800ರಷ್ಟು ರನ್ ಬಾರಿಸಿದ್ದಾರೆ ಎಂದು ಶ್ರೀನಿ ನನ್ನಲ್ಲಿ ಕೇಳಿದರು. ಬದರೀನಾಥ್ ಅವರನ್ನು ಉಳಿಸಿಕೊಳ್ಳಿ ಎಂದು ಅಂದಿನ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಮೇಲೆ ಒತ್ತಡ ತಂದರು. ನಾನೂ ಕೊಹ್ಲಿ ಸಾಧನೆಯನ್ನು ವಿವರಿಸಿದೆ. ಆದರೆ ಇದು ಫಲ ನೀಡಲಿಲ್ಲ. ಮರುದಿನವೇ ನನ್ನನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಕೆ. ಶ್ರೀಕಾಂತ್ ಆಯ್ಕೆ ಸಮಿತಿಯ ನೂತನ ಆಧ್ಯಕ್ಷರಾಗಿ ಆಯ್ಕೆಯಾದರು…’ ಎಂದು ವೆಂಗ್‌ಸರ್ಕಾರ್ ಅಂದಿನ ಘಟನೆಯನ್ನು ತೆರೆದಿಟ್ಟಿದ್ದಾರೆ.