Advertisement

ನಾನು ಸತ್ತಮೇಲಾದರೂ ವಂಚಕನ ಬಂಧಿಸಿ

12:06 PM Aug 04, 2018 | Team Udayavani |

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಇರುವುದಕ್ಕೆ  ನೊಂದ ಯುವತಿ ಪೊಲೀಸರ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಚಂದ್ರಲೇಔಟ್‌ನಲ್ಲಿ ನಡೆದಿದೆ.

Advertisement

“ನಾನು ಬದುಕಿರುವಾಗ ರವಿಕಿರಣ್‌ನನ್ನು ನೀವು ಬಂಧಿಸಲಿಲ್ಲ. ನಾನು ಸತ್ತ ಮೇಲಾದರೂ ಆತನನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ಕೊಡಿಸಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ. ನನ್ನ ಸಾವಿಗೆ ದಯವಿಟ್ಟು ನ್ಯಾಯ ಕೊಡಿಸಿ ನಿಮ್ಮ ಕಾಲಿಗೆ ಬೀಳುತ್ತೇನೆ’ ಎಂದು ಡೆತ್‌ನೋಟ್‌ನಲ್ಲಿ ಯುವತಿ ಕೋರಿದ್ದಾಳೆ.

ಭೈರವೇಶ್ವರನಗರ ನಿವಾಸಿ ಮಂಜುಳಾ (23) ಮೃತ ಯುವತಿ. ಮನೆಯಲ್ಲಿಯೇ ಮಂಜುಳಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಗಡಿ ಮೂಲದ ಮಂಜುಳಾ ರಾಜರಾಜೇಶ್ವರಿನಗರದ ಮಳಿಗೆಯೊಂದರಲ್ಲಿ  ಕೆಲಸ ಮಾಡುತ್ತಿದ್ದು, ಭೈರವೇಶ್ವರನಗರದ ತಮ್ಮ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಆರು ವರ್ಷಗಳ ಹಿಂದೆ ಮಂಜುಳಾಗೆ ಸಂಬಂಧಿಕ ಯುವಕನ ಜತೆ ಮದುವೆ ಆಗಿತ್ತು. ಕೆಲ ತಿಂಗಳ ಬಳಿಕ ಕೌಟುಂಬಿಕ ವಿಚಾರವಾಗಿ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು.

ನಂತರ  ಮಂಜುಳಾಗೆ ದೊರೆಸ್ವಾಮಿಪಾಳ್ಯ ನಿವಾಸಿ, ಖಾಸಗಿ ಕಂಪನಿ ಉದ್ಯೋಗಿ ರವಿಕಿರಣ್‌ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿದ ರವಿಕಿರಣ್‌, ಮಂಜುಳಾ ಜತೆ ದೈಹಿಕ ಸಂಬಂಧ ಬೆಳೆಸಿದ್ದಾನೆ.

Advertisement

ಈ ಮಧ್ಯೆ ಕೆಲ ತಿಂಗಳ ಹಿಂದೆ ರವಿಕಿರಣ್‌ ಕರೆ ಮಾಡಿ ತಮ್ಮಿಬ್ಬರ ಮುದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂದು ದೂರವಾಗಿದ್ದª. ಇದರಿಂದ ಬೇಸರಗೊಂಡ ಮಂಜುಳಾ ಮನವೊಲಿಸಲು ಯತ್ನಿಸಿದರೂ ರವಿಕಿರಣ್‌ ಒಪ್ಪಿಲ್ಲ. ಈ ಸಂಬಂಧ ಚಂದ್ರಾಲೇಔಟ್‌ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದರು.

ಬಳಿಕ ಮಂಜುಳಾ ನಿರಂತರವಾಗಿ ಪೊಲೀಸ್‌ ಠಾಣೆಗೆ ಕರೆ ಮಾಡಿ ಪ್ರಕರಣ ಕುರಿತು ಮಾಹಿತಿ ಪಡೆಯುತ್ತಿದ್ದರು. ಶುಕ್ರವಾರ ಕೂಡ ನೇರವಾಗಿ ಠಾಣೆಗೆ ಹೋಗಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಠಾಣಾಧಿಕಾರಿಗಳು ಪ್ರಕರಣ ತನಿಖೆಯಲ್ಲಿದೆ ಎಂದು ಹೇಳಿ ಕಳುಹಿಸಿದ್ದರು. ಇದರಿಂದ ನೊಂದಿದ್ದ ಮಂಜುಳಾ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ ಸದಸ್ಯರು ಆರೋಪಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?: “ಪ್ರೀತಿಸಿ ವಂಚಿಸಿದ ರವಿಕಿರಣ್‌ ಹಾಗೂ ಆತನ ಸಂಬಂಧಿಕರು ಕರೆ ಮಾಡಿ ಬೆದರಿಕೆ ಹಾಕಿದ್ದರು. ನಿನ್ನಂಥವಳು ಭೂಮಿ ಮೇಲೆ ಬದುಕಬಾರದು ಎಂದೆಲ್ಲ ನಿಂದಿಸಿದ್ದರು. ರವಿಕಿರಣ್‌ ಕೂಡ ಬದುಕಬೇಡ ಸಾಯಿ ಎಂದಿದ್ದ. ಇಲ್ಲವಾದರೆ ಎಷ್ಟು ಬೇಕು ಅಷ್ಟು ಹಣ ಕೊಡುತ್ತೇನೆ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ವಂಚಿಸಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಂಜುಳಾ ಮನವಿ ಮಾಡಿದ್ದಾರೆ.

ಠಾಣೆ ಎದುರು ಪ್ರತಿಭಟನೆ: ನಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸರೇ ನೇರ ಹೊಣೆ ಎಂದು ಮಂಜುಳಾ ಪೋಷಕರು ಠಾಣೆ ಎದುರು ಪ್ರತಿಭಟನೆ ನಡೆಸಿದರು. ರಾಜಕೀಯ ಮತ್ತು ಹಣ ಬಲದಿಂದ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಮಂಜುಳಾ ದೂರಿನ ಸಂಬಂಧ ಆರೋಪಿ ಪತ್ತೆಗೆ ತಂಡ ರಚಿಸಲಾಗಿತ್ತು. ಆದರೆ, ಆತ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ರವಿಕಿರಣ್‌ ಹಾಗೂ ಸಂಬಂಧಿಕರು ಮಂಜುಳಾಗೆ ಕರೆ ಮಾಡಿ  ನಿಂದಿಸಿದ್ದಾರೆ. ಇದರಿಂದ ನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ ವ್ಯಕ್ತಿಗಳ ವಿರುದ್ಧ ಮತ್ತೂಂದು ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತೇವೆ.
-ರವಿ ಡಿ. ಚನ್ನಣ್ಣನವರ್‌, ಡಿಸಿಪಿ, ಪಶ್ಚಿಮ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next