ವಿಜಯಪುರ: ”ಹೆಚ್.ಡಿ. ಕುಮಾರಸ್ವಾಮಿ ಅವರ ಕುರಿತಾಗಿ ಹೆಚ್ಚು ಮಾತಾಡುವುದಿಲ್ಲ. ನಾನು ಕೂಡ ಅವರ ತಂದೆಯವರ ಗರಡಿಯಲ್ಲಿ ಬೆಳೆದವನು” ಎಂದು ಸಚಿವ ವಿ.ಸೋಮಣ್ಣ ಬುಧವಾರ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸೋಮಣ್ಣ , ”ಕುಮಾರಸ್ವಾಮಿ ಅವರಿಗೆ ಇಂದು ಸಂಜೆ ವರೆಗೆ ಫುಲ್ ಫ್ರೀಡಂ ಇದೆ, ಅವರು ಏನೇನು ಹೇಳ್ತಾರೋ ಕೇಳಿಕೊಂಡು ಇರುತ್ತೇವೆ ಏನಾದರೂ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ” ಎಂದು ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.
”ಆಲಮೇಲ ಭಾಗದಲ್ಲಿ 16 ಬೂತ್ , 14 ಸಾವಿರ ಮತದಾರರು ಇದ್ದಾರೆ. ಈ ಬಾರಿ ಅವರೆಲ್ಲರೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಆಶೀರ್ವಾದ ಮಾಡಲಿದ್ದಾರೆ” ಎಂದರು.
”ಆಲಮೇಲ 50 ವರ್ಷ ಆದರೂ ಮೇಲ್ದರ್ಜೆಗೆ ಬರುವುದಿಲ್ಲ. ನಾವು ಮಾಡುತ್ತೇವೆ . ಆಲಮೇಲ ಸೇರಿದಂತೆ ಇಡೀ ಸಿಂದಗಿಯಾ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತೇವೆ. ಚುನಾವಣೆ ಮುಗಿದ ಬಳಿಕ ಕೆಲವು ಸಚಿವರು ಕ್ಷೇತ್ರಕ್ಕೆ ಬಂದು ಅಭಿವೃದ್ಧಿಗೆ ಶ್ರಮಿಸುತ್ತೇವೆ” ಎಂದು ಭರವಸೆ ನೀಡಿದರು.
”ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗುತ್ತಲೇ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಟ್ಟಿದಾರೆ. ವೃದ್ಧರಿಗೆ ಮಾಶಾಸನ ಜಾಸ್ತಿ ಮಾಡಿದ್ದೇವೆ. ಬಿಜೆಪಿ ಗೆಲ್ಲುವುದಕ್ಕೆ ಇವಿಷ್ಟು ಸಾಕು” ಎಂದರು.
”ಜಮೀರ್ ಅಹಮ್ಮದ್ ಬಿಜೆಪಿ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿದ್ದು, ಭಾಷೆ ಅವರ ವ್ಯಕ್ತಿತ್ವ ಹಾಗೂ ಅವರ ನಡುವಳಿಕೆ ತೋರಿಸುತ್ತದೆ. ಈ ರೀತಿಯ ಪದ ಬಳಕೆ ಅವರ ಸಂಸ್ಕಾರ ಏನು ಎಂಬುದನ್ನು ತೋರಿಸುತ್ತದೆ. ಜಮೀರ್ ಅವರಿಗೆ ಇನ್ನು ಚಿಕ್ಕ ವಯಸ್ಸು, ಹಾಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.