ಎಲ್ಲಿಂದ ಬಂದವಳು ನಾ ಕಾಣೇ… ಮುಂಗುರುಳನ್ನು ಬೆರಳಲ್ಲಿ ಸರಿಸುತ್ತ, ಪಕ್ಕ ಬಂದು ನಿಂತು “ಹಾಯ್’ ಎನ್ನುವಾಗಿನ ನಿನ್ನ ಗುಳಿಕೆನ್ನೆ, ಎನ್ನೆದೆಗೆ ನಾಟಿ ಎಸೆದಂತಾಗುತ್ತಿದೆ. ನೋಡಿಯೂ ನೋಡದೆ ನನ್ನೆದುರು ಬಂದು ನಿಲ್ಲುವವಳು ನೀನು. ನಿನ್ನ ನೋಡಲೆಂದು ದಿನಂ ಪ್ರತಿ ಕ್ಲಾಸಿಗೆ ಬರುವವ ನಾನು. ಅದೇನೋ ಬೇಸರ.
ಬಂದಹಾಗೇ ಸದ್ದಿಲ್ಲದೆ ಹಾಸ್ಟೆಲಿಗೆ ಹೋಗುತ್ತಿದ್ದ ನನ್ನನ್ನು ಸೆಳೆದಿದ್ದು ನಿನ್ನ ಮುದ್ದು ಮುಖ. ನೀನು, ನಾ ಬರದ ಎಲ್ಲ ಕ್ಲಾಸ್‌ಗಳಿಗೂ ಕುಳಿತಿರುವುದಿಲ್ಲವೆಂದು ಗೊತ್ತಾಯಿತು. ಮೊದ ಮೊದಲು ದೂರವಿದ್ದ ನಾವು ಇದೀಗ ಕೆಲವರ ದೃಷ್ಟಿಯಲ್ಲಿ ಪ್ರೇಮಿಗಳಾಗಿಯೋ?
ಕೆಲವರ ಪ್ರಕಾರ ಸ್ನೇಹಿತರಾಗಿಯೋ ಹತ್ತಿರವಿದ್ದೇವೆ. ಕಾಲೇಜಿನ ಆರಂಭದ ದಿನಗಳು ನನ್ನನ್ನು ಕಾಲೇಜೆಂಬ ಕತ್ತಲೆ ಲೋಕದೊಳು ನೂಕಿದಾಗ ಬೆಳಕಾದವಳು ನೀನಲ್ಲವೇ? ಒಬ್ಬರು ಗೊತ್ತಿಲ್ಲದಿದ್ದಾಗ ಆತ್ಮೀಯಳಾದವಳು ನೀನಲ್ಲವೇ? ನಿನೀಲ್ಲದ ದಿನ ದಿನವಲ್ಲ. ನಿನ್ನ ನೋಡದ ಮನ ನನ್ನೊಳಿರುವುದಿಲ್ಲ. ಬೇರೆಯವರೊಂದಿಗಿನ ನಿನ್ನ ಸಲುಗೆ ನನ್ನೊಳು ಅಸೂಯೆ ಹುಟ್ಟಿಸುತ್ತಿದೆ.
ಇದು ಪ್ರೀತಿಯೋ? ಸ್ನೇಹದ ತುತ್ತ ತುದಿಯೋ? ಒಂದು ಗೊತ್ತಾಗದೇ ಸೊರಗುತಿಹ ಈ ಹೃದಯಕ್ಕೆ ಸ್ನೇಹವೆಂಬ ಹಾಲೆರೆದರೂ ಓಕೆ. ಪ್ರೀತಿಯೆಂಬ ಅಮೃತ ಉಣಬಡಿಸಿದರೂ ಓಕೆ.
ನಾನೇ ಮೊದಲು ನಿನ್ನ ಬಳಿ ಪ್ರೀತಿಯ ವಿಷಯ ಮಾತನಾಡಿ ನಿನ್ನ ಈಗಿನ ಸಲುಗೆ ದೂರ ಮಾಡಿಕೊಳ್ಳಲಾರೆ. ನಿನೇ ಆಹ್ವಾನ ನೀಡುವೆಯಾ ಗೆಳತಿ.. ನೀನೇ ಮನದ ಮಂಟಪಕೆ?
ಬಸನಗೌಡ ಪಾಟೀಲ