Advertisement

ನನಗೂ ಒಬ್ಬ ಅಣ್ಣ ಬೇಕು…

12:30 AM Jan 18, 2019 | |

ಹಾಡಿನ ಸಾಹಿತ್ಯ ತಪ್ಪಾಗಿಸಿದ್ದೇನಾ? ಅಂತ ಅಂದುಕೊಳ್ಳಬೇಡಿ. ನಾನು ಖಂಡಿತವಾಗಿಯೂ ಹೀಗೆಯೇ ಹಾಡೋದು. ಸಂತೋಷದಿಂದ ಗುನುಗುತ್ತಿದ್ದೇನೆ ಅಂದುಕೊಳ್ಳಬೇಡಿ. ನೋವಿನಿಂದಲೇ ಹಾಡುತ್ತಿದ್ದೇನೆ. ಖಂಡಿತವಾಗಿಯೂ ನನಗೊಬ್ಬ ಅಣ್ಣ ಬೇಕು ಅಂತ ಅನ್ನಿಸುತ್ತ ಇದೆ. ಈ ಅನಿಸಿಕೆಗೆ ಯಾವ ಹೆಸರು ಕೊಡಬೇಕೋ ಗೊತ್ತಾಗ್ತಾ ಇಲ್ಲ. ಆಸೆ ಅನ್ನಲಾ? ಅಸೂಯೆ ಅನ್ನಲಾ? ಇಲ್ಲ, ನೋವು ಅನ್ನಲಾ? ಖಂಡಿತ, ನನ್ನ ನೋವು ನಿಮಗ್ಯಾರಿಗೂ ಅರ್ಥವಾಗಲ್ಲ ಬಿಡಿ. ಆದರೆ, ಅಣ್ಣನಿಲ್ಲದ  ನನ್ನಂಥ ಎಷ್ಟೋ ಹುಡುಗಿಯರಿಗೆ ಬೇಗನೆ ಅರ್ಥವಾಗಿ ಬಿಡುತ್ತದೆ. ಯಾಕೆ ಅಂತ ಕೇಳುತ್ತೀರಾ? ಹೇಳುತ್ತೇನೆ ಕೇಳಿ.

Advertisement

ನನಗೊಬ್ಬ ಅಣ್ಣ ಖಂಡಿತ ಬೇಕು. ಅದರಲ್ಲೂ ನನ್ನ ಈಗಿನ ವಯಸಿನಲ್ಲಿ ಅಣ್ಣನ ಅನುಪಸ್ಥಿತಿ ತುಂಬಾ ಕಾಡುತ್ತಿದೆ. “ಕುದುರೇನ ತಂದೀನಿ ಜೀನವಾ ಬಿಟ್ಟಿವ್ನಿ’ ಅಂತ ಜನಪದದ ಅಣ್ಣ ಹಾಡಿದ. “ಪಂಚಮಿ ಹಬ್ಬಕ್ಕೆ ಅಣ್ಣ ಯಾಕ ಬರಲಿಲ್ಲ ಕರೆಯಾಕ?’ ಅಂತ ಜನಪದದ ತಂಗಿ ಹಾಡಿದಳು. ಆ ತಂಗಿ ನೋವು ಅಣ್ಣನ್ನಿಲ್ಲದ ನನ್ನಂಥ ಹುಡುಗಿಯರಿಗೆ ಮಾತ್ರ ತುಂಬಾ ಚೆನ್ನಾಗಿ ಅರ್ಥವಾಗುತ್ತಿ¤ದೆ. ಯಾಕೆ ಅಂತೀರ ಕೇಳಿ.

ಕಾಲೇಜಿನಲ್ಲಿ ಅದ್ಯಾವುದೋ ಕಾರ್ಯಕ್ರಮಕ್ಕೆ ಅಂತಿಮ ಹಂತದ ತರಬೇತಿ ನಡೆಯುತ್ತಿತ್ತು. ಅದಾಗಲೇ ಕತ್ತಲೆಯೂ ಆಗಿಬಿಟ್ಟಿತ್ತು. ನಮ್ಮ ಅಧ್ಯಾಪಕರು ಕೇಳಿಯೇ ಬಿಟ್ಟರು. “ಹುಡುಗೀರ ಹೇಗೆ ಮನೆಗೆ ಹೋಗ್ತಿàರಾ?’ ಅಂತ. ನಾವು, “ರಿಕ್ಷಾ, ಬಸ್ಸು’ ಅಂತೆಲ್ಲ ತಡವರಿಸುತ್ತಿದ್ದಾಗಲೇ  ಅವಳೊಬ್ಬಳು ಕೂಗಿಯೇ ಬಿಟ್ಟಳು, “ಅಣ್ಣ ಬರ್ತಾನೆ ಸರ್‌’. 

ಆಗ ಅನ್ನಿಸಿತು ಛೆ… ನನಗೂ ಒಬ್ಬ ಅಣ್ಣ ಇದ್ದಿದ್ರೆ ! ನಾವು ತಡಕಾಡುವಷ್ಟರಲ್ಲಿ ಅವಳು ಅಣ್ಣನೊಂದಿಗೆ ಬೈಕ್‌ ಏರಿ ಹೋಗೇಬಿಟ್ಟಳು. ಅವಳು ನಮ್ಮನ್ನ ಅಣಕಿಸಿ ಬಿಟ್ಟು ಹೋದಳಾ? ಆ ಕತ್ತಲಲ್ಲಿ ಗೊತ್ತಾಗಲೇ ಇಲ್ಲ. 

ಹಾಗೆಯೇ ಗಡಿಬಿಡಿಯಿಂದ ಮನೆಗೆ ತಲುಪಿದಾಗ ಅಮ್ಮ ಕೆಂಗಣ್ಣು ಬೀರಿಕೊಂಡು ಏನೂ ಮಾತನಾಡದೆ ಒಳಗೆ ಹೋಗಿಬಿಟ್ಟಳು. ಆಗಲೂ ಅನ್ನಿಸಿತು- ಛೇ, ನನಗೂ ಒಬ್ಬ ಅಣ್ಣ ಇದ್ದಿದ್ರೆ? ಅವಾಗಾವಾಗ ದಾರಿಯಲ್ಲಿ ನಡೆಯಬೇಕಾದರೆ ಹುಡುಗರ ಗುಂಪೊಂದು ಕಣ್ಣುಬಾಯಿ ಬಿಟ್ಟುಕೊಂಡು ಮಿಕಮಿಕ ನೋಡುತ್ತಿತ್ತು. ಆಗಲೂ ನನಗೆ ಅನ್ನಿಸಿದ್ದು ಇದೇ, ಛೇ… ಒಬ್ಬ ಅಣ್ಣ ಬೇಕಿತ್ತು ಅಂತ. ಈ ಮಾತುಗಳು ಮನಸ್ಸಿನಿಂದ ಬಂದು ತುಟಿಯಂಚಿನಲ್ಲಿ ಹಾಗೆಯೇ ನಿಂತು ಬಿಡುತ್ತಿತ್ತು. ಅಪ್ಪನಲ್ಲಿಯೂ ಹೇಳಿಕೊಳ್ಳಲು ಆಗುತ್ತಾ ಇರಲಿಲ್ಲ. ಆಗಲೂ ಅನ್ನಿಸುತ್ತಿದ್ದದ್ದು , ಛೇ… ಅಣ್ಣ ನೀನೊಬ್ಬ ಬೇಕಿತ್ತು ಅಂತ.

Advertisement

ಅನೇಕ ಸಲ ಯಾವುದೋ ಕಾರ್ಯಕ್ರಮಗಳಿಗೆ, ಯಾವುದೋ ಸಿನಿಮಾಗೆ ಹೋಗಬೇಕೆಂದು ಅಮ್ಮನ ಒಪ್ಪಿಗೆ ಕೇಳಿದರೆ, “ಹುಡುಗೀರು ಹಾಗೆಲ್ಲ ಒಬ್ಬೊಬ್ಬಳೇ ಹೊರಗೆ ಹೋಗಬಾರದು’ ಅಂತಾರೆ. ಆಗಲೂ ಅನ್ನಿಸುತ್ತಿತ್ತು- ಅಣ್ಣ ಬೇಕು ಅಂತ. ಇಂತಹದ್ದೇ ನೂರು ಸಂದರ್ಭಗಳನ್ನು ನಾನು ವಿವರಿಸಬಲ್ಲೆ. ಅಣ್ಣ ಎಂಬ ಶಬ್ದ ಕೊಡೋ ಕಾನ್ಫಿಡೆನ್ಸೇ ಅಂಥಾದ್ದು. ಅವನ ಸ್ಥಾನವನ್ನು ಯಾವ ಗೆಳಯ, ಗೆಳತಿ, ಬಾಯ್‌ಫ್ರೆಂಡೂ ತುಂಬಲಾರ. ಅದಕ್ಕೇ ಹೇಳಿದ್ದು, ನನಗೂ ಒಬ್ಬ ಅಣ್ಣ ಬೇಕಿತ್ತು ಅಂತ. ಕೇವಲ ರಕ್ಷಾಬಂಧನದಂದು ಅವನಿಂದ ಉಡುಗೊರೆ ತೆಗೆದುಕೊಳ್ಳಲು, ಪಂಚಮಿ ಹಬ್ಬಕ್ಕೆ ಕರೆಯೋಕೆ ಮಾತ್ರ ನನಗೆ ಅಣ್ಣ ಬೇಕಾಗಿಲ್ಲ. ಬದಲಾಗಿ, ನಾನೀಗ ಜೀವನದ ಅನೇಕ ತಿರುವುಗಳನ್ನು ಪಡೆದುಕೊಳ್ಳುವ ಹಂತದಲ್ಲಿ ಬಂದು ನಿಂತಿದ್ದೇನೆ. ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವ ಕವಲು ದಾರಿಯಲ್ಲಿ ನಿಂತಿದ್ದೇನೆ. ಈ ಹಂತದಲ್ಲಿ ಖಂಡಿತ ಅಣ್ಣನೊಬ್ಬ ಬೇಕಿದ್ದ ಅಂತ ಅನ್ನಿಸುತ್ತಾ ಇದೆ.

ಅಣ್ಣನಿಲ್ಲವೆಂಬ ನೋವು ಆಗಾಗ ನನ್ನನ್ನು ಕಾಡ್ತಾನೆ ಇರುತ್ತದೆ, ಪ್ರತಿವರ್ಷ ರಕ್ಷಾಬಂಧನ ಬಂದಾಗಲೆಲ್ಲ ಗೆಳತಿಯರು ರಾಖೀ ಕೊಂಡುಕೊಳ್ಳುವ ಗಡಿಬಿಡಿಯಲ್ಲಿರುವಾಗ ನನ್ನ ಮನಸ್ಸು ಅದೇಕೋ ಸಪ್ಪೆಯಾಗಿ ಬಿಡುತ್ತದೆ. “ಅವರು ನನ್ನ ಅಣ್ಣನ ಹಾಗೆ. ಇವರು ನನ್ನ ಅಣ್ಣನ ಹಾಗೆ’ ಅಂತ ಅಂದುಕೊಳ್ಳುವುದಕ್ಕೂ ಅವನೇ ನನ್ನ ಅಣ್ಣ ಅಂತ ಅನ್ನುವುದಕ್ಕೂ ತುಂಬಾ ವ್ಯತ್ಯಾಸ ಇದೆ.    
ಅದಕ್ಕೆ ಗುನುಗುತ್ತಿದ್ದೇನೆ- “ನನಗೂ ಒಬ್ಬ ಅಣ್ಣ ಬೇಕು’.

ಪಿನಾಕಿನಿ ಪಿ. ಶೆಟ್ಟಿ
ಸ್ನಾತಕೋತರ ಪದವಿ ಕೆನರಾ ಕಾಲೇಜು, ಮಂಗಳೂರು  

Advertisement

Udayavani is now on Telegram. Click here to join our channel and stay updated with the latest news.

Next