ಧಾರವಾಡ: ಕಪ್ಪತಗುಡ್ಡದ ವಿಷಯದಲ್ಲಿ ಮಾತು ಕೊಟ್ಟಂತೆ ಸಿಎಂ ಸಿದ್ದರಾಮಯ್ಯ ನಡೆದುಕೊಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಬಿ.ಸಂಕನೂರ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವನ್ಯಜೀವಿ ಮಂಡಳಿಗಳ ಸಭೆಯಲ್ಲಿ ಇತ್ತೀಚೆಗೆ ಗದಗ ಜಿಲ್ಲೆಯ ಡಂಬಳದಲ್ಲಿ ಸಂಗ್ರಹಿಸಿದ ಸಾರ್ವಜನಿಕರ ಅಭಿಪ್ರಾಯದ ಆಧಾರದ ಹಿನ್ನೆಲೆಯಲ್ಲಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸುವಲ್ಲಿ ಯಾವುದೇ ತೊಂದರೆ ಇರಲಿಲ್ಲ.
ಆದರೆ ಘೋಷಣೆ ಮಾಡುವ ವಿಚಾರದಲ್ಲಿ ಫೆ.20ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ನಿರ್ಧಾರ ಕೈಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜನಪರ ಹೋರಾಟಕ್ಕೆ ಸ್ಪಂದಿಸುವ ಕಳಕಳಿ ಮುಖ್ಯಮಂತ್ರಿಗಳಿಗೆ ಇದ್ದದ್ದು ನಿಜವಾಗಿದ್ದರೆ ವನ್ಯಜೀವಿ ಮಂಡಳಿ ಸಭೆ ನಡೆದ ಮರುದಿನವಾದರೂ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬೇಕಿತ್ತು.
ಆದರೆ ಈ ರೀತಿ ನಿರ್ಣಯ ಕೈಕೊಳ್ಳದೇ ವಿಳಂಬ ಮಾಡಿ ಗಣಿಗಾರಿಕೆ ಮಾಲೀಕರಿಗೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಮಾಡಿಕೊಟ್ಟದ್ದು ಜನರಿಗೆ ಮಾಡಿದ ಅನ್ಯಾಯ ಎಂದಿದ್ದಾರೆ. ಬಲೊªàಟಾ ಹಾಗೂ ಇತರ ಗಣಿ ಕಂಪನಿಯ ಮಾಲೀಕರಿಗೆ ಸಿಎಂ ಮಣೆ ಹಾಕಿದ್ದಾರೆ ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.
ಈಗಲಾದರೂ ಸಿಎಂ ಎಚ್ಚೆತ್ತುಕೊಂಡು ಸರಿಯಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಿ ತಡೆಯಾಜ್ಞೆ ತೆರವುಗೊಳಿಸಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.