ಚೆನ್ನೈ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ವಿ. ಶಶಿಕಲಾಗೆ ಬೇನಾಮಿ ಕಾಯ್ದೆಯ ಅಂಕುಶ ಬೀಳುವುದು ಖಾತ್ರಿಯಾಗಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ಶಶಿಕಲಾ ಮತ್ತು ಅವರ ಸಂಬಂಧಿಗಳ 40 ಸ್ಥಳಗಳಲ್ಲಿನ 187 ನಿವಾಸ, ಕಚೇರಿ, ತೋಟದ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ 1800 ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಭಾರಿ ಮೊತ್ತದ ಆಸ್ತಿ ಪಾಸ್ತಿ ಪತ್ತೆಯಾಗಿದೆ.ಐಟಿ ಅಧಿಕಾರಿಗಳ ಈ ಬೃಹತ್ ದಾಳಿಯಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ಐಟಿ ಮೂಲಗಳು ಹೇಳಿವೆ.
ಅಂದರೆ, ಎಂಟು ಕೆಜಿ ಬಂಗಾರ, ಕೋಟ್ಯಂತರ ರೂ. ಬೆಲೆ ಬಾಳುವ ವಜ್ರ, ಬೇನಾಮಿ ಆಸ್ತಿ ದಾಖಲೆಗಳು, 20 ನಕಲಿ ಕಂಪನಿಗಳು, ಐದು ಕೋಟಿ ನಗದು ಸೇರಿ ಒಟ್ಟು 140 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 20 ನಕಲಿ ಕಂಪನಿಗಳನ್ನು ಶಶಿಕಲಾ ಅವರು ಆಸ್ತಿ ಖರೀದಿ ಮಾಡುವ ಸಲುವಾಗಿಯೇ ಸೃಷ್ಟಿಸಿದ್ದರು ಎಂದು ಐಟಿ ಮೂಲಗಳು ಹೇಳಿವೆ.
ಮೂರು ದಿನಗಳ ನಂತರ ಶನಿವಾರ ಸಂಜೆ ಕೆಲವು ಕಡೆಗಳಲ್ಲಿ ಐಟಿ ದಾಳಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಮುಂದುವರಿಸಲಾಗಿದೆ. ನಕಲಿ ಕಂಪನಿಗಳ ಮೂಲಕ 100 ಕೋಟಿ ಮೌಲ್ಯದ ಆಸ್ತಿ ಖರೀದಿಸಲಾಗಿದ್ದು, ಈ ಬಗ್ಗೆ ಶಶಿಕಲಾ ಅವರ ಸಂಬಂಧಿಗಳನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗಿದೆ. ಈ ಎಲ್ಲಾ ದಾಳಿಯನ್ನು ನೋಟು ಅಮಾನ್ಯ ಮಾಡಿದ ನಂತರ, ಈ ಕಂಪನಿಗಳ ಮೂಲಕ ನಡೆಸಲಾಗಿರುವ ಭಾರಿ ವಹಿವಾಟನ್ನು ಗಮನದಲ್ಲಿರಿಸಿಕೊಂಡು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಯಲ್ಲಿ ಒಟ್ಟು 1800 ಅಧಿಕಾರಿಗಳು ಭಾಗಿಯಾಗಿದ್ದಾರೆ. 40 ಸ್ಥಳಗಳಲ್ಲಿನ 187 ನಿವಾಸ, ಕಚೇರಿ, ತೋಟದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಶಶಿಕಲಾ ಪತಿ ನಟರಾಜನ್, ದಿ.ಜಯಲಲಿತಾ ಅವರಿಗೆ ಸೇರಿದ ಕೊಡನಾಡ್ ಟೀ ಎಸ್ಟೇಟ್, ಜಾಜ್ ಸಿನಿಮಾಸ್, ಮಿದಾಸ್ ಡಿಸ್ಟಿಲರೀಸ್, ಶಾರದಾ ಪೇಪರ್ ಮತ್ತು ಬೋರ್ಡ್, ಸೆಂಥಿಲ್ ಗ್ರೂಪ್ ಆಫ್ ಕಂಪನಿಗಳು, ನೀಲಗಿರಿ ಫನೀìಚರ್ಸ್, ಜಯಾ ಟಿವಿ, ನಮಾಡು ಎಂಜಿಆರ್ ಸೇರಿ ಕೆಲವೆಡೆ ದಾಳಿ ನಡೆಸಲಾಗಿದೆ.
ಐಟಿ ದಾಳಿ ಬಗ್ಗೆ ಮಾತನಾಡಿರುವ ಎಐಎಡಿಎಂಕೆ ಶಶಿಕಲಾ ಬಣದ ದಿನಕರನ್ ಅವರು, ಇದೊಂದು ರಾಜಕೀಯ ದುರುದ್ದೇಶ ಹೊಂದಿರುವ ದಾಳಿ ಎಂದು ಆರೋಪಿಸಿದ್ದಾರೆ.