ನವದೆಹಲಿ: ಪ್ರಸ್ ಇನ್ಫರ್ಮೇಶನ್ ಬ್ಯೂರೋದಿಂದ(ಪಿಐಬಿ) ನಕಲಿ ಎಂದು ಪರಿಗಣಿಸಲಾದ ಸುದ್ದಿಗಳನ್ನು ಜಾಲತಾಣಗಳಿಂದ ತೆಗೆದುಹಾಕುವ ನಿಟ್ಟಿನಲ್ಲಿ ಐಟಿ ನಿಯಮಗಳಿಗೆ ತಂದಿರುವ ಕರಡು ತಿದ್ದುಪಡಿಯನ್ನು ಕೈ ಬಿಡುವಂತೆ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಮಂಗಳವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಸರ್ಕಾರದ ನೋಡಲ್ ಏಜೆನ್ಸಿಯಾಗಿರುವ ಪಿಐಬಿ, ಸರ್ಕಾರದ ಯೋಜನೆಗಳು, ಸಾಧನೆಗಳನ್ನು ಪ್ರಕಟಿಸುತ್ತದೆ. ಹೀಗಿರುವಾಗ ಸರ್ಕಾರದ ವಿರುದ್ಧದ ಸುದ್ದಿಗಳನ್ನೂ ಕೂಡ ನಕಲಿ ಎಂದೇ ಪರಿಗಣಸುತ್ತದೆ. ಸರ್ಕಾರದ ವಿರುದ್ಧವಿದ್ದ ಮಾತ್ರಕ್ಕೆ ಸುದ್ದಿ ಸುಳ್ಳು ಎಂದು ಅರ್ಥವಲ್ಲ.
ಹೀಗಾಗಿ ಪಿಐಬಿಗೆ ಸುದ್ದಿಗಳು ನಕಲಿ ಅಥವಾ ಅಸಲಿ ಎಂದು ನಿರ್ಧರಿಸುವ ಅವಕಾಶ ನೀಡುವುದು, ಸರ್ಕಾರದ ಪರ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ ಎಂದು ಐಎನ್‌ಎಸ್, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ತಿಳಿಸಿದೆ.
ತನ್ನದೇ ಸಂಸ್ಥೆಗೆ ಸುದ್ದಿಯ ನಿಖರತೆ ಖಾತರಿಗೆ ಅಧಿಕಾರ ನೀಡುವುದು ಸರ್ಕಾರದಿಂದ ಕಾನೂನು ದುರ್ಬಳಕೆಯಾದಂತೆ ಈ ಹಿನ್ನೆಲೆ ಸರ್ಕಾರ ತಿದ್ದುಪಡಿಯನ್ನು ಹಿಂಪಡೆಯಬೇಕು. ಜತೆಗೆ ಸುದ್ದಿ ನಿಖರ, ವಾಸ್ತವಿಕತೆಯನ್ನು ಖಚಿತ ಪಡಿಸಿಕೊಳ್ಳಲು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿ, ಬಳಿಕ ನಿರ್ಣತ ತೆಗೆದುಕೊಳ್ಳುವಂತೆ ಕೇಳಿದೆ.
ಕಳೆದ ವಾರವಷ್ಟೇ ಐಟಿ ನಿಯಮಗಳಿಗೆ ತಿದ್ದುಪಡಿ ತಂದಿರುವ ಪರಿಷ್ಕೃತ ವರದಿಯನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.ಇದು ಪತ್ರಿಕಾ ಸ್ವಾತಂತ್ರ್ಯದ ವಿರೋಧಿ ನಿಯಮವೆಂದು ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಪ್ರಸ್ ಅಸೋಸಿಯೇಷನ್, ಡಿಜಿಪಬ್ ಫೌಂಡೇಷನ್ ಆಫ್ ಇಂಡಿಯಾದಂಥ ಮಾಧ್ಯಮ ಸಂಸ್ಥೆಗಳು ಆಕ್ಷೇಪಿಸಿ ತಿದ್ದುಪಡಿ ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಿದ್ದವು.