ನವದೆಹಲಿ/ಪಾಟ್ನಾ: ಬಜೆಟ್ ಅಧಿವೇಶನದಲ್ಲಿ ಅಂಗೀಕಾರ ಪಡೆದ ಬೇನಾಮಿ ವ್ಯವಹಾರಗಳ (ನಿಷೇಧ) ಕಾಯ್ದೆಯಡಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ 1 ಸಾವಿರ ಕೋಟಿ ರೂ.ಮೊತ್ತದ ಹಗರಣದಲ್ಲಿ ಮಾಜಿ ಸಿಎಂ ಮತ್ತು ಪತ್ನಿ ರಾಬ್ಡಿ ದೇವಿ, ಹಾಲಿ ಡಿಸಿಎಂ ಮತ್ತು ಪುತ್ರ ತೇಜಸ್ವಿ ಯಾದವ್, ಲೋಕಸಭಾ ಸದಸ್ಯೆ ಮಿಸ್ಸಾ ಭಾರತಿ, ಅವರ ಪತಿ ಶೈಲೇಶ್ ಯಾದವ್, ಪುತ್ರಿಯರಾದ ಚಂದನಾ ಮತ್ತು ರಾಗಿಣಿ ಯಾದವ್ ವಿರುದ್ಧ ಆದಾಯ ತೆರಿಗೆ ಇಲಾಖೆ ಅಕ್ರಮ ಭೂ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪ ಹೊರಿಸಿ ನೋಟಿಸ್ ಜಾರಿ ಮಾಡಿದೆ. ಇಷ್ಟು ಮಾತ್ರವಲ್ಲದೆ ಐ.ಟಿ. ಇಲಾಖೆ ಪಾಟ್ನಾ ಮತ್ತು ನವದೆಹಲಿಯಲ್ಲಿ ಬಿಹಾರ ರಾಜಕೀಯದ ಮೊದಲ ಕುಟುಂಬಕ್ಕೆ ಸೇರಿದ 12 ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಜತೆಗೆ ಪಾಟ್ನಾದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಮಾಲ್ ಮಾಲೀಕತ್ವ ಯಾರಿಗೆ ಸೇರ ಬೇಕು ಎಂಬ ಚರ್ಚೆ ಶುರುವಾಗಿದೆ.
ಬಿಹಾರದ ರಾಜಕೀಯದ ಮೊದಲ ಕುಟುಂಬದ ವಿರುದ್ಧ ತೆರಿಗೆ ವಂಚನೆ ಮತ್ತು ಅಕ್ರಮ ಭೂವ್ಯವಹಾರ ನಡೆಸಿದ ಆರೋಪದ ಅನ್ವಯ ಕೇಸು ದಾಖಲಿಸಲಾಗಿದೆ. ತೆರಿಗೆ ಇಲಾಖೆ ಮಾಡಿದ ಆರೋಪ ಪ್ರಕಾರ ಲಾಲು ಕುಟುಂಬದ ಸದಸ್ಯರು ತಮ್ಮ ಪ್ರಭಾವ ಬಳಸಿ ಜಮೀನು ಹೊಂದಿರುವ ಕಂಪನಿಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಮೊತ್ತದಲ್ಲಿ ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತೆರಿಗೆ ಇಲಾಖೆಯಿಂದ ತಮಗೆ ನೋಟಿಸ್ ಸಿಕ್ಕಿದೆ. ಈ ಕ್ರಮ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಬಣ್ಣಿಸಿದ್ದಾರೆ.
ಶಿಕ್ಷೆಯೇನು?: ಒಂದು ವೇಳೆ ಲಾಲು ಕುಟುಂಬ ಸದಸ್ಯರ ವಿರುದ್ಧ ಆರೋಪ ಸಾಬೀತಾದರೆ ಏಳು ವರ್ಷಗಳ ಕಾಲ ಕಠಿಣ ಕಾರಾಗೃಹವಾಸ ಮತ್ತು ವಶಪಡಿಸಿಕೊಳ್ಳಲಾಗಿರುವ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.25ರಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ.
ಎರಡು ನಗರಗಳಲ್ಲಿ ಕಾರ್ಯಾಚರಣೆ: ನವದೆಹಲಿ ಮತ್ತು ಪಾಟ್ನಾಗಳಲ್ಲಿ ಲಾಲು ಕುಟುಂಬಕ್ಕೆ ಸೇರಿದ ಜಮೀನು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ 170 – 180 ಕೋಟಿ ರೂ.ಗಳಷ್ಟು ಮೌಲ್ಯ ಇರುವ ಆಸ್ತಿಗೆ ದಾಖಲೆಯಲ್ಲಿ ಕೇವಲ 9.32 ಕೋಟಿ ರೂ. ಎಂದು ನಮೂದಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಮೆಸರ್ಸ್ ಮಿಶೈಲ್ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್‌ಪ್ರೈ.ಲಿ, ಎ.ಬಿ.ಎಕ್ಸ್‌ಪೋರ್ಟ್ಸ್ ಲಿ. ಡಿಲೈಟ್ ಮಾರ್ಕೆಟಿಂಗ್ ಪ್ರೈ.ಲಿ ಮತ್ತು ಎ.ಕೆ. ಇನ್ಫೋಸಿಸ್ಟಮ್ಸ್ ಪ್ರೈ.ಲಿ. ವಿರುದ್ಧವೂ ಕೇಸು ದಾಖಲಿಸಲಾಗಿದೆ.
ಲೋಕಸಭೆ ಸದಸ್ಯರಾಗಿರುವ ಮಿಸಾ ಭಾರ್ತಿ ಮತ್ತು ಅವರ ಪತಿ ವಿರುದ್ಧ ಮೇ 23ರಂದು ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಮತ್ತೂಮ್ಮೆ ಅವರ ವಿರುದ್ಧ ಸಮನ್ಸ್ ಜಾರಿ ಸಾಧ್ಯತೆ ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲದೆ ಸಂಸತ್‌ನಲ್ಲಿ ಅಂಗೀಕಾರಗೊಂಡ ಕಾಯ್ದೆ ಪ್ರಕಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿ ವಶಕ್ಕೆ ಕೂಡ ಇಲಾಖೆ ಮುಂದಾಗಲಿದೆ.
ಇದೊಂದು ರಾಜಕೀಯ ಷಡ್ಯಂತ್ರ ಮತ್ತು ಪ್ರತೀಕಾರ. ಯಾವುದೇ ವಿಚಾರದ ಬಗ್ಗೆ ಅಡಗಿಸಿ ಇಡುವಂಥದ್ದೇನೂ ಇಲ್ಲ. ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಂದ ಕರೆ ಬಂದ ತಕ್ಷಣ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದೇವೆ.
– ತೇಜಸ್ವಿ ಯಾದವ್, ಲಾಲು ಪುತ್ರ