ಬೆಂಗಳೂರು : ತೆರಿಗೆ ವಂಚನೆ ಮತ್ತು ಅಪಾರ ಪ್ರಮಾಣದ ಕಾಳಧನ ಬಚ್ಚಿಡಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹನ್ನೆರಡಕ್ಕೂ ಹೆಚ್ಚು ಸ್ಥಳಗಳಲ್ಲಿ ತಾನು ದಾಳಿ ನಡೆಸುತ್ತಿರುವುದಾಗಿ ಆದಾಯ ತೆರಿಗೆ ಇಲಾಖೆ ಇಂದು ಮಂಗಳವಾರ ತಿಳಿಸಿದೆ.
ಬೆಂಗಳೂರು, ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ ನಡೆಯುತ್ತಿದ್ದು ಇದು ತೆರಿಗೆ ವಂಚಕರು ಮತ್ತು ಕಾಳಧನ ಸೃಷ್ಟಿಕರ್ತರ ವಿರುದ್ಧ ನಡೆಯುತ್ತಿರುವ ದಾಳಿಯಾಗಿದೆ ಎಂದು ಇಲಾಖಾಧಿಕಾರಿಗಳು ಹೇಳಿದ್ದಾರೆ.
ದಾಳಿಗೆ ಒಳಗಾಗಿರುವವರು ಪ್ರಕೃತ ನಡೆಯುತ್ತಿರುವ ಲೋಕಸಭಾ ಚುನಾವಣೆಯೊಂದಿಗೆ ನಂಟುಹೊಂದಿದವರಾಗಿದ್ದಾರೆ ಮತ್ತು ಈ ದಾಳಿಯು ತನಿಖಾ ಕಾರ್ಯಾಚರಣೆಯ ಭಾಗವಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ದಾಳಿಗೆ ಒಳಗಾಗಿರುವವರಲ್ಲಿ ಕೆಲವು ಉದ್ಯಮಿಗಳು ಸೇರಿದ್ದು ಇವರು ತಮ್ಮ ಆದಾಯವನ್ನು ಘೋಷಿಸದೆ ಬಚ್ಚಿಟ್ಟಿದ್ದು ಆ ಬಗ್ಗೆ ಖಚಿತ ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗುತ್ತಿದೆ.
ಐಟಿ ದಾಳಿಗೆ ಒಳಗಾಗಿರುವವರು ಕಾಳಧನ ಸೃಷ್ಟಿಗೆ ಕಾರಣವಾಗುವ ರಿಯಲ್ ಎಸ್ಟೇಟ್, ಕ್ವಾರಿ, ಸ್ಟೋನ್ ಕ್ರಶಿಂಗ್, ಪೆಟ್ರೋಲ್ ಬಂಕ್, ಸಾ ಮಿಲ್, ಸಹಕಾರಿ ಬ್ಯಾಂಕ್ ಮೊದಲಾದ ಉದ್ಯಮಗಳನ್ನು ನಡೆಸುತ್ತಿದ್ದು ತಮ್ಮ ನೈಜ ಆದಾಯವನ್ನು ಘೋಷಿಸದೆ ಅಪಾರ ಪ್ರಮಾಣದ ಕಾಳಧನ ಬಚ್ಚಿಟ್ಟಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನದಲ್ಲಿ ಉದ್ಯಮಿಗಳ ಐದು ನಿವಾಸಗಳು, ಬೆಂಗಳೂರು ಮತ್ತು ಮಂಡ್ಯದಲ್ಲಿ ತಲಾ ಒಂದು ಬಂಗಲೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ, ಎ.18 ಮತ್ತು 23ರಂದು ಚುನಾವಣೆ ನಡೆಯಲಿದೆ.