Advertisement

ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ: ಭಾ.ಮ. ಹರೀಶ್‌

12:49 PM May 30, 2022 | Team Udayavani |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2022-23ನೇ ಸಾಲಿಗೆ 64ನೇ ವಾರ್ಷಿಕ ಚುನಾವಣೆಯಲ್ಲಿ ಹಿರಿಯ ನಿರ್ಮಾಪಕ ಭಾ.ಮ.ಹರೀಶ್‌ ಗೆದ್ದು, ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಭಾ.ಮ.ಹರೀಶ್‌ ಚಿತ್ರರಂಗದ ಅಳ-ಅಗಲವನ್ನು ಅರಿತವರು. ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಗುರಿ ಹೊಂದಿರುವ ಭಾ.ಮ. ಹರೀಶ್‌ ಅವರ ಸಂದರ್ಶನ ಇಲ್ಲಿದೆ…

Advertisement

ಮಂಡಳಿ ಅಧ್ಯಕ್ಷರಾಗುವ ನಿಮ್ಮ ಕನಸು ನನಸಾಗಿದೆ?

– ಕನಸು ಅನ್ನೋದಕ್ಕಿಂತ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಮೂಲಕ ಚಿತ್ರರಂಗಕ್ಕೆ ಒಂದಷ್ಟು ಸೇವೆ ಸಲ್ಲಿಸಬೇಕೆಂಬ ಆಸೆ ಇತ್ತು. ಅಧ್ಯಕ್ಷರಾಗಿ ಇಲ್ಲದಿದ್ದಾಗಲೂ ನನ್ನ ಕೈಯಿಂದ ಆಗುವ ಸೇವೆಯನ್ನು ಚಿತ್ರರಂಗಕ್ಕೆ ಮಾಡುತ್ತಲೇ ಬಂದಿದ್ದೇನೆ. ಈಗ ಅಧ್ಯಕ್ಷನಾಗಿ ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ.

ತೀವ್ರ ಪೈಪೋಟಿಯಲ್ಲಿ ಗೆಲ್ಲುವ ವಿಶ್ವಾಸವಿತ್ತೇ?

– ಖಂಡಿತಾ ಇತ್ತು. ಅದಕ್ಕೆ ಕಾರಣ ನಮ್ಮ ತಂಡ. ತಂಡದ ಪ್ರತಿಯೊಬ್ಬ ಸದಸ್ಯರು ಕೂಡಾ ಗೆಲುವಿಗೆ ಶ್ರಮಿಸಿದ್ದಾರೆ. ಚಿತ್ರರಂಗದ ಅನೇಕ ಮಹನೀಯರು ನಮ್ಮ ತಂಡಕ್ಕೆ ಬೆಂಬಲ ನೀಡುವ ಮೂಲಕ ಗೆಲುವಿನ ವಿಶ್ವಾಸ ಹೆಚ್ಚಿಸಿದ್ದರು. ನಾನು ಕ್ರೀಡಾ ಮನೋಭಾವನೆಯಿಂದ ಚುನಾವಣೆ ಎದುರಿಸಿದ್ದೆ. ಅಧ್ಯಕ್ಷರಾಗಿ ನಿಮ್ಮ ಮುಂದಿರುವ ಸವಾಲುಗಳೇನು?

Advertisement

– ಸವಾಲು ಅನ್ನೋದಕ್ಕಿಂತ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಮುಖ್ಯವಾಗಿ ಇಡೀ ಚಿತ್ರರಂಗವನ್ನು ಒಗ್ಗಟ್ಟಾಗಿ ಮುಂದೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಸಿನಿಮಾ ರಂಗದ ಬೇರೆ ಬೇರೆ ಅಂಗಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸಲು ಪ್ರಾಮಾಣಿಕ ನಮ್ಮ ತಂಡ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.

ಚಿತ್ರರಂಗದಲ್ಲಿ ಅನೇಕ ಗುಂಪುಗಳಿವೆ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಲು ಸಾಧ್ಯವೆ?

– ಖಂಡಿತಾ ಸಾಧ್ಯವಿದೆ. ಒಂದು ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆ ಭಿನ್ನಾಭಿಪ್ರಾಯಗಳನ್ನು ಅಲ್ಲಲ್ಲೇ ಬಗೆಹರಿಸಿಕೊಂಡು ಚಿತ್ರರಂಗದ ಏಳಿಗೆಗೆ ಶ್ರಮಿಸ ಬೇಕಿದೆ. ಎಲ್ಲರ ಜೊತೆಗೆ ಸಾಗುವ ವಿಶ್ವಾಸವಿದೆ.

ನಿಮ್ಮ ಮುಂದಿನ ಯೋಜನೆಗಳೇನು?

– ಸಾಕಷ್ಟು ಕನಸುಗಳಿವೆ. ಈಗಷ್ಟೇ ಅಧ್ಯಕ್ಷನಾಗಿದ್ದೇನೆ. ಮುಂದೆ ಹಿರಿಯರ ಜೊತೆ ಕುಳಿತು ಚಿತ್ರರಂಗಕ್ಕೆ ಒಳ್ಳೆದಾಗುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ.

ಪ್ರತಿ ವಾರ 10ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿ, ನಿರ್ಮಾಪಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತೀರಿ?

– ಆ ಸಮಸ್ಯೆ ಅರಿವು ನಮಗಿದೆ. ಇಲ್ಲಿ ನಿರ್ಮಾಪಕ, ವಿತರಕ, ಪ್ರದರ್ಶಕ ಹಾಗೂ ಮಲ್ಟಿಪ್ಲೆಕ್ಸ್‌… ಎಲ್ಲರ ಜೊತೆ ಚರ್ಚಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next