ಬಳ್ಳಾರಿ : ನಾನು, ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಕ್ಷೇತ್ರ ಬಿಡಬೇಕಾಯಿತು, ಜನಪ್ರಿಯ ಅಭ್ಯರ್ಥಿಗಳಿಗೆ ಇದು ಸಾಮಾನ್ಯ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರು ಎಲ್ಲಿಂದ ಸ್ಪರ್ಧಿಸಬೇಕು ಅನ್ನುವುದು ಅವರ ವೈಯಕ್ತಿಕ ವಿಚಾರ. ಈ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಪಕ್ಷ ನಿರ್ಧರಿಸುತ್ತದೆ. ನಮ್ಮ ಗುರಿ ಬಿಜೆಪಿ ಸರಕಾರ ಬರಬೇಕು ಕಾಂಗ್ರೆಸ್ ಸೋಲಬೇಕು ಎಂದರು.
ಅವರು ವರುಣಾದಲ್ಲೇ ಸ್ಪರ್ಧಿಸಬೇಕಿತ್ತು ಆದರೆ ಮಗನ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಕ್ಷೇತ್ರದತ್ತ ಹೋಗಬೇಕಾಗಿದೆ ಎಂದರು. ಕಳೆದ ಚುನಾವಣೆಯಲ್ಲಿ ನಾನು ಕೂಡ ಸಾಹಸ ಮಾಡಿದ್ದೆ, ಸಿದ್ದರಾಮಯ್ಯ ಅವರು ಕೂಡ ಸಾಹಸ ಮಾಡಿದ್ದರು ಎಂದರು.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಬಾದಾಮಿಯಲ್ಲಿ ಕಣಕ್ಕಿಳಿದಿದ್ದ ಶ್ರೀರಾಮುಲು ಜಿದ್ದಾಜಿದ್ದಿನಲ್ಲಿ ಸೋಲು ಅನುಭವಿಸಿದ್ದರು. ಆದರೆ ಮೊಳಕಾಲ್ಮೂರಿನಲ್ಲಿ ಜಯ ಗಳಿಸಿದ್ದರು. ಈ ಬಾರಿ ಶ್ರೀರಾಮುಲು ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಸ್ಪರ್ಧಿಸುತ್ತಿಲ್ಲ.