Advertisement
ಕೈರಂಗಳ ನನ್ನ ಹುಟ್ಟೂರು. ನನ್ನ ತಂದೆ ಒಳ್ಳೆಯ ಕಲಾವಿದರು. ಕೈರಂಗಳದ ಆಟಗಳಲ್ಲಿ ಚೆಂಡೆವಾದನಕ್ಕೆ ಅವರೇ. ಸಂಗೀತದಲ್ಲಿಯೂ ಅನುಭವಿ. ಅವರಂತೆ ಕಲಾವಿದೆ ಎನಿಸಿಕೊಳ್ಳಲು ನನಗಾಗಲಿಲ್ಲ. ಆದರೆ, ಅಪ್ಪನಿಂದ ದತ್ತವಾದ ಕಲಾಸಂಸ್ಕಾರ ನನ್ನೊಳಗೆ ಜಾಗೃತವಾಗಿದ್ದ ಫಲವೊ ಎಂಬಂತೆ ಕಲಾವಿದರೊಬ್ಬರ ಸೌಭಾಗ್ಯವತಿಯಾಗುವ ಅದೃಷ್ಟ ನನ್ನದಾಯಿತು. ಕಳೆದ ವರ್ಷವಷ್ಟೇ ನಮ್ಮ “ಕಲ್ಯಾಣ ಪ್ರಸಂಗ’ದ ಬೆಳ್ಳಿಹಬ್ಬವನ್ನು ಸಂಭ್ರಮಿಸಿದೆವು!
Related Articles
Advertisement
ಮೊದಲೆಲ್ಲ ತಿರುಗಾಟದ ನಡುವೆ ಮನೆಗೆ ಬರುತ್ತಿದ್ದುದೇ ಅಪರೂಪ. ಈಗಲಾದರೋ ಸಾರಿಗೆ ವ್ಯವಸ್ಥೆ ಇದೆ, ಪ್ರತಿದಿನ ಮನೆಗೆ ಬರುತ್ತಾರೆನ್ನಿ. ಬೆಳಗ್ಗೆ ಮನೆಗೆ ಬರುವಾಗ ನಿದ್ದೆಗಣ್ಣಿನಲ್ಲಿದ್ದರೂ ಅದೇ ಗಾಂಭೀರ್ಯ; ಕಣ್ಣಿನಡಿಯಲ್ಲಿ ಉಳಿದಿರುವ ಕಾಡಿಗೆಯನ್ನು ನೋಡಿದರೆ ಪಾತ್ರದ ಛಾಯೆಯನ್ನು ಇನ್ನೂ ಉಳಿಸಿಕೊಂಡಿದ್ದಾರೋ ಎಂಬಂತೆ ಭಾಸವಾಗುತ್ತದೆ! ಪ್ರತಿದಿನ ಪ್ರಸಾದ ಮತ್ತು ಹೂವನ್ನು ನನ್ನ ಕೈಯಲ್ಲಿಟ್ಟು ಕುರ್ಚಿಯಲ್ಲಿ ಕುಳಿತು ಕೊಂಚ ವಿರಮಿಸುತ್ತಾರೆ. ಕಾಫಿ ಲೋಟ ಕೈಗಿಡುತ್ತೇನೆ. ಕಾಫಿ ಹೀರುತ್ತ ಹೀರುತ್ತ ಲೌಕಿಕಕ್ಕೆ ಮರಳುತ್ತಾರೆ.
ಬೆಳಗಿನ ಉಪಾಹಾರ ಸೇವಿಸಿ, ಮಲಗಿ ಬಿಟ್ಟರೆ ಏಳುವುದು ಮಧ್ಯಾಹ್ನ. ಊಟ ಮಾಡಿ, ಕೊಂಚ ವಿಶ್ರಮಿಸಿ ಮತ್ತೆ ಅಂದಿನ ಆಟಕ್ಕೆ ಹೊರಡುವ ಸನ್ನಾಹ. ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ವೃತ್ತಿಕ್ಷೇತ್ರಕ್ಕೆ ಹೊರಟು ಸಂಜೆ ಮರಳಿ ಬಂದರೆ ಯಕ್ಷಗಾನ ಕಲಾವಿದರದ್ದು ವ್ಯತಿರಿಕ್ತ ಬದುಕು, ಸಂಜೆ ಹೊರಟು ಮರುದಿನ ಬೆಳಗ್ಗೆ ಮರಳುವವರು!
ಸುಣ್ಣಂಬಳದ ಮನೆಯಲ್ಲಿ…ನಾನು ಮದುಮಗಳಾಗಿ ಪ್ರವೇಶಿಸಿದ್ದು ಇವರ ಪೆರುವಾಯಿಯ ಸುಣ್ಣಂಬಳ ಮನೆಯನ್ನು. ಅದು ಕಾಸರಗೋಡು ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನ ಗಡಿ ಪ್ರದೇಶದ ಹಳ್ಳಿ. ನಮ್ಮದು ಸಣ್ಣ ಮನೆ. ಆವಾಗ ಬಡತನವೇ ಇತ್ತೆನ್ನಿ. ಇವರು ಆಟಕ್ಕೆಂದು ಹೋದರೆ ಬರುವುದು ವಾರದ ಬಳಿಕ, ಕೆಲವೊಮ್ಮೆ ಹದಿನೈದು ದಿನಗಳ ಬಳಿಕ, ಇನ್ನು ಕೆಲವೊಮ್ಮೆ ತಿಂಗಳು ಕಳೆದು. ಬಿಡಾರದಿಂದ ಮನೆಗೆ ಬರುವಾಗ ಮಧ್ಯಾಹ್ನವಾಗಿಬಿಡುತ್ತದೆ. ಅದೂ ನಮ್ಮ ಹಳ್ಳಿಮನೆಗೆ ಎರಡೂವರೆ ಕಿ.ಮೀ. ಕಾಲ್ನಡಿಗೆಯಲ್ಲಿ ಬರಬೇಕು. ಮನೆಗೆ ಮುಟ್ಟಿದವರೇ ನನ್ನ ಮತ್ತು ಮಗಳ ಯೋಗಕ್ಷೇಮ ವಿಚಾರಿಸಿ ಊಟ ಮಾಡಿ ಹೊರಟುಬಿಡುವುದೇ! ಆಟದ ಬಿಡಾರಕ್ಕೆ ಬೇಗ ತಲುಪಬೇಕಲ್ಲ! ಅಂದ ಹಾಗೆ, ಇವರು ಮೇಳ ಸೇರಿದ ಎಷ್ಟೋ ವರ್ಷಗಳವರೆಗೆ ಒಂದೇ ಒಂದು ದಿನ ರಜೆ ಹಾಕಿದವರಲ್ಲ. ಸುಣ್ಣಂಬಳದ ಮನೆಯಲ್ಲಿದ್ದಾಗ ಇವರು ಆಟಕ್ಕೆ ಹೋದ ಬಳಿಕ ನಾನು ಮತ್ತು ಅತ್ತೆ ಇಬ್ಬರೇ. ಅಡಿಕೆ ಕೃಷಿ, ದನ ಸಾಕಣೆ, ಮನೆಗೆಲಸಗಳಲ್ಲಿ ಸಮಯ ಹೇಗೆ ಸಾಗುತ್ತದೆ ಎಂದೇ ತಿಳಿಯುತ್ತಿರಲಿಲ್ಲ. ಮಗಳು ಪ್ರಜ್ಞಾ ಹುಟ್ಟಿದ ಮೇಲೆ ಬದುಕಿನಲ್ಲಿ ಸಂತಸ ಹೆಚ್ಚಿತು. ಅವಳನ್ನು ಅಲ್ಲಿಯೇ ಕೊಲ್ಲತ್ತಡ್ಕ ಶಾಲೆಗೆ ಸೇರಿಸಿದೆವು. ಇವರು ಅಲ್ಲಿಯೇ ಓದಿದ್ದು. ಮಗಳೊಬ್ಬಳನ್ನೇ ಶಾಲೆಗೆ ಕಳುಹಿಸಲು ಕಷ್ಟ. ಹಾಗಾಗಿ, ಆರಂಭದ ವರ್ಷಗಳಲ್ಲಿ ಅವಳನ್ನು ನಾನೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆ. ಆಮೇಲೆ ಪಕ್ಕದ ಮನೆಯ ಮಕ್ಕಳೊಂದಿಗೆ ಹೋಗಲು ಅಭ್ಯಾಸ ಮಾಡಿಸಿದೆ. ಬುದ್ಧಿ ತಿಳಿಯುತ್ತಲೇ ಪ್ರಜ್ಞಾ “ಅಪ್ಪ ಯಾವಾಗ ಬರುತ್ತಾರೆ?’ ಎಂದು ಕೇಳಲಾರಂಭಿಸಿದ್ದಳು. ಕೆಲವು ಸಮಯದ ಬಳಿಕ ಮನೆಗೆ ಲ್ಯಾಂಡ್‌ಲೈನ್ ಫೋನ್ ಬಂತು. ಬೆಳಿಗ್ಗೆ ಫೋನ್ ರಿಂಗಾದ ಕೂಡಲೇ ಪುಟಾಣಿ ಪ್ರಜ್ಞಾಳೇ ಓಡಿಕೊಂಡು ಬಂದು, “ಆಟದ ಅಜ್ಜನ ಫೋನ್’ ಎನ್ನುತ್ತ ಫೋನ್ ಎತ್ತಿಕೊಳ್ಳುತ್ತಿದ್ದಳು. ತೊದಲು°ಡಿಯಲ್ಲಿ “ಅಲೊ’ ಎನ್ನುತ್ತಿದ್ದಳು.
ನಾನು ಸಣ್ಣಂದಿನಲ್ಲಿ ತುಂಬ ಯಕ್ಷಗಾನಗಳನ್ನು ನೋಡುತ್ತಿದ್ದೆ. ಹಾಗೆಂದು, ಯಕ್ಷಗಾನ ಕಲಾವಿದರೊಬ್ಬರನ್ನು ಮದುವೆಯಾಗುತ್ತೇನೆಂದು ಎಣಿಸಿರಲಿಲ್ಲ. ಇವರ ಕಡೆಯಿಂದ ನೆಂಟಸ್ತಿಕೆಯ ಪ್ರಸ್ತಾವವಾದಾಗ ನಮ್ಮ ಮನೆಯಲ್ಲಿ ಕೊಂಚ ಹಿಂದೇಟು ಹಾಕಿದ್ದೂ ಇದೆ. ನಮ್ಮ ಬಂಧುಗಳು ಕೆಲವರು “ಒಳ್ಳೆಯ ಸಂಬಂಧ’ ಎಂದು ಶಿಫಾರಸು ಮಾಡಿದರು. ಮದುವೆಯೂ ಆಯಿತು. ಮದುವೆಯಾಗಿ ಒಂದೇ ವಾರದಲ್ಲಿ ಕಟೀಲು ಮೇಳಗಳ ತಿರುಗಾಟ ಆರಂಭ ! ಇವರು, “ಮನೆ ಕಡೆ ಜಾಗ್ರತೆ’ ಎಂದವರೇ ಹೊರಟೇಬಿಟ್ಟಿದ್ದರು. ಆಮೇಲೆ ಮರಳಿ ಬಂದದ್ದು ತಿಂಗಳು ಕಳೆದ ಬಳಿಕ. 2004ರ ಸುಮಾರಿಗೆ ಸುಣ್ಣಂಬಳದ ಮನೆಯಿಂದ ಕಬಕಕ್ಕೆ ಬಂದು ಅಲ್ಲಿ ಮನೆ ಮಾಡಿದೆವು. ಅಲ್ಲಿಂದ ಈಗ ಮುರದ ಬಳಿಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದೇವೆ. ಇವರು ಒಳ್ಳೆಯ ವೇಷಧಾರಿಗಳೆಂದು ನನಗೆ ಗೊತ್ತು, ಆದರೆ, ಮದುವೆಯಾಗಿ ಬಹಳ ಕಾಲ ಇವರ ವೇಷವನ್ನೇ ನೋಡಿರಲಿಲ್ಲ. ಒಮ್ಮೆ ನಮ್ಮೂರ ಬಳಿಗೆ ಅವರ ಆಟ ಬಂದಾಗ ನನಗೆ ಅವರ ವೇಷ ನೋಡುವ ಅವಕಾಶವಾಯಿತು. ಆವತ್ತು, ಕುಮಾರ ವಿಜಯ ಪ್ರಸಂಗ. ಇವರದ್ದು ದುರ್ವಾಸ! ಪುಣ್ಯಕ್ಕೆ ಅದು ಶೃಂಗಾರ ದುರ್ವಾಸ ! ಬದುಕಿನಲ್ಲಿ ಇವರೇನೂ ಕೋಪಿಷ್ಟರಲ್ಲ. ಅಪರೂಪಕ್ಕೆ ಸಿಡುಕಿ ಬಿಡುತ್ತಾರಷ್ಟೆ. ಊಟದಲ್ಲಿ ಇವರಿಗೆ ಖಾರ ಇಷ್ಟವೇ. ಆದರೆ, ತುಂಬ ಖಾರವಲ್ಲ. ಖಾರ ಕಡಿಮೆಯಾದರೂ ಇವರಿಗೆ ರುಚಿಸುವುದಿಲ್ಲ. ಮುಖಭಾವದಲ್ಲಿಯೇ ಅದು ತಿಳಿಯುತ್ತದೆ. ಹದವಾದ ಸ್ವಾದ ಇವರಿಗೆ ಪ್ರಿಯ. ಹದವರಿತು ವ್ಯವಹರಿಸುವುದು ಇವರ ಬದುಕಿನ ಧೋರಣೆಯೂ ಹೌದು. ಹಾಗಾಗಿ, ಇವರ ಬಗ್ಗೆ ನನಗೆ ಪ್ರೀತಿಯಷ್ಟೇ ಅಭಿಮಾನವೂ. ಕುಂಭಕರ್ಣ ನಿದ್ದೆ !
ಇವರು ನಿದ್ದೆ ಮಾಡಿದರೆ ಕುಂಭಕರ್ಣನೇ. ಒಮ್ಮೆ ಏನಾಯಿತೆಂದರೆ, ಕಟೀಲಿನಲ್ಲಿ ಹತ್ತನಾಜೆಗೆ ತಿರುಗಾಟ ಮುಗಿಸಿ, ಕಲಾವಿದರ ಬಟವಾಡೆ ಲೆಕ್ಕಾಚಾರ ಮಾಡಿ, ಯಜಮಾನರ ಕಾರಿನಲ್ಲಿ ಮನೆಗೆ ಬಂದವರೇ ಈಸಿಚೇರ್‌ನಲ್ಲಿ ಕುಳಿತುಬಿಟ್ಟರು. “ಐದು ನಿಮಿಷ ತಲೆ ಅಡ್ಡ ಹಾಕುತ್ತೆ ಮಿನಿಯಾ’ ಎಂದು ಕಣ್ಣು ಮುಚ್ಚಿದರು. ಊಟ ಇಲ್ಲ, ತಿಂಡಿ ಇಲ್ಲ, ಹನಿ ನೀರೂ ಇಲ್ಲ. ನಾನು ಕೈಹಿಡಿದೆಳೆದರೂ ಏಳಲೊಲ್ಲರು. ಹತ್ತಿರ ಚಾಪೆ ಹಾಸಿದರೂ ಎದ್ದು ಮಲಗುವಷ್ಟು ತ್ರಾಣವಿರಲಿಲ್ಲ. ರಾತ್ರಿ 9 ಗಂಟೆಗೆ ಮಲಗಿದವರು ಎದ್ದದ್ದು ಮರುದಿನ ಮಧ್ಯಾಹ್ನ 2 ಗಂಟೆಗೆ. ನಿದ್ದೆಯಂತೆ ಓದಲು ಕುಳಿತುಕೊಳ್ಳುವುದೂ ಧ್ಯಾನವೇ. ಆಗ ಇವರಿಗೆ ಯಾರೂ ತೊಂದರೆ ಕೊಡಬಾರದು. ಸರಳ ಊಟವೇ ಇವರಿಗಿಷ್ಟ. ಉದ್ದು ಬಳಸಿ ತಯಾರಿಸಿದ ತಿಂಡಿಗಳನ್ನು ಇವರು ಸೇವಿಸುವುದಿಲ್ಲ. ಇವರಿಗೆ ಬೇಡವಾದದ್ದು ನಮಗೆ ಹೇಗೆ ಇಷ್ಟವಾದೀತು! ಹಾಗಾಗಿ, ನಮ್ಮಲ್ಲಿ ಉದ್ದಿನ ಇಡ್ಲಿ, ದೋಸೆ ಮಾಡುವುದು ಕಡಿಮೆಯೇ. ಬಿಡಾರದಲ್ಲಿ ಎಂಥ ಮೃಷ್ಟಾನ್ನ ಭೋಜನವಿದ್ದರೂ ನನ್ನ ಕೈಯಡುಗೆಯೇ ಇವರಿಗಿಷ್ಟ. ಮೇಳದಲ್ಲಿ ಗಂಟೆಗೊಮ್ಮೆ ಚಹಾ ಕುಡಿಯುತ್ತಾರೆ, ಆದರೆ, ನಾನು ಮಾಡಿಕೊಟ್ಟ ಕಾಫಿ ಕುಡಿದರೇ ಅವರಿಗೆ ಸಂತೃಪ್ತಿ. ವೀಳ್ಯ ತಿನ್ನುವುದೊಂದೇ ಇವರಿಗಂಟಿದ್ದ ವ್ಯಸನ. ದಿನಕ್ಕೆ ಒಂದು ಕವಳೆ ವೀಳ್ಯದೆಲೆ, ಎರಡು ಅಡಿಕೆ ಖರ್ಚಾಗುತ್ತಿದ್ದವು. ಆರು ತಿಂಗಳಿಗೆ ಬೇಕಾಗುವಷ್ಟು ಅಡಿಕೆಯನ್ನು ಮೊದಲೇ ಸಿದ್ಧ ಮಾಡುತ್ತಿ¤ದ್ದೆ. ಎಲೆಯನ್ನು ನೀಟಾಗಿ ಜೋಡಿಸಿ, ಅಡಿಕೆ ಹೋಳು ಮಾಡಿ, ಸುಣ್ಣವನ್ನೂ ತಂಬಾಕನ್ನೂ ಡಬ್ಬಕ್ಕೆ ಹಾಕಿ ಸಿದ್ಧಮಾಡಿಡುತ್ತಿದ್ದೆ. ಇದೊಂದು ಕಡಿಮೆ ಅಪಾಯದ ಚಟ ಎಂದು ನನ್ನ ಭಾವನೆ. ತಾಂಬೂಲ ಚರ್ವಣದಲ್ಲಿ ಇವರಿಗೆ 30 ವರ್ಷಗಳನ್ನು ಮಿಕ್ಕಿದ ಅನುಭವ! ಆದರೆ, ಇತ್ತೀಚೆಗೆ ಯಾವುದೋ ಕಾರಣಕ್ಕೆ ಅದನ್ನು ಕೈಬಿಟ್ಟರು. “ಬಿಡಿ ಅಪ್ಪ’ ಎಂದು ಮಗಳೂ ಒತ್ತಾಯಿಸಿದಳು. ಹಾಗೆ ಬಿಟ್ಟವರು ಬಿಟ್ಟರೇ. ಈಗ, ಎಲೆಪೆಟ್ಟಿಗೆ ಸಿದ್ಧಪಡಿಸುವ ಕೆಲಸ ನನ್ನ ಪಾಲಿಗಿಲ್ಲ.
-ಕಮಲಾಕ್ಷಿ ವಿಶ್ವೇಶ್ವರ ಭಟ್ (ನಿರೂಪಣೆ : ಟೀಮ್ ಮಹಿಳಾಸಂಪದ)