ಪ್ರೀತಿ ಪ್ರೇಮ, ಆಕರ್ಷಣೆ ಈ ಎಲ್ಲಾ ನವಿರುತನಗಳ ಮೀರಿಯೂ, ಬೇಕು ಬೇಡಗಳ ಪ್ರಶ್ನೆಗಳನ್ನು ಮೀರಿಯೂ ಕೇವಲ ಮನಸಿನ ಹಟಮಾರಿತನವನ್ನು ರಮಿಸಲು, ಆಗಾಗ ಸಂತೈಸಲು, ಹೃದಯದ ಪಿಸುಮಾತಿಗೆ ದನಿಯಾಗಲು ಆಪ್ತ ಜೀವವೊಂದು ಬೇಕೆನ್ನಿಸುತ್ತದಲ್ಲ ಅದಕ್ಕಾದರೂ ಗೆಳೆಯ ಬೇಕು..
ಹೌದು.. ತುಂಬಾ ಸಲ ನನಗೂ ಒಬ್ಬ ಗೆಳೆಯ ಬೇಕು ಅನ್ನಿಸುತ್ತೆ. ಎಂತಹ ಗೆಳೆಯ ಬೇಕು? ಹೃದಯವಂತನಾಗಿರಬೇಕಾ, ಹಣವಂತನಾಗಿರಬೇಕಾ? ಪಾಪದವನಾಗಿರಬೇಕಾ, ಒರಟನಾಗಿರಬೇಕಾ?
ಸದಾ ಕಾಡುವವನಾಗಿರಬೇಕಾ, ಕಾಡಿಸಿಕೊಳ್ಳುವವನಾಗಿರಬೇಕಾ? ಗಂಭೀರವಾಗಿರಬೇಕಾ, ತುಂಟನಾಗಿರಬೇಕಾ? ಉಹೂಂ.. ಇಂತಹ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರವಿಲ್ಲ. ಆದರೂ,
ನನಗೊಬ್ಬ ಗೆಳೆಯ ಬೇಕು. ಗೆಳತಿಯರ ಹಿಂಡಿನೊಳಗೆ ಹರಟೆ ಹೊಡೆಯುತ್ತಾ ಕುಳಿತಾಗ, ಹೃದಯದ ಯಾವುದೋ ಮೂಲೆಯ ಕೋಣೆ ಈಗಲೂ ಖಾಲಿ ಇದೆ ಎಂಬ ಕಸಿವಿಸಿ ಮೂಡುತ್ತದಲ್ಲ? ಆಗ. ಕಾಲೇಜಿನ ಕಾರಿಡಾರಿನಲ್ಲಿ ಎರಡು ಜೀವಗಳು ಲೋಕ ಮರೆತಂತೆ ಮಾತಿಗಿಳಿದದ್ದು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ಒಮ್ಮೆ ಜೀವ ಸಣ್ಣಗೆ ತುಯ್ಯುತದಲ್ಲ? ಆಗ.
ಸೋನೆ ಮಳೆಯೊಳಗೆ ನಡೆಯುತ್ತಿರುವಾಗ ಕೊಡೆಯ ಮೇಲೆ ಬೀಳುವ ಹನಿಗಳ ಟಪಗುಟ್ಟುವಿಕೆಗೆ ಎದೆಯ ಯಾವುದೋ ತಂತಿ ಮೀಟಿದಂತಾಗುತ್ತದಲ್ಲ? ಆಗ. ಪ್ರತಿ ವರ್ಷ ಬರುವ ಪ್ರೇಮಿಗಳ ದಿನದಂದು ಕಾರಣವಿಲ್ಲದೇ ನನ್ನೊಳಗೆ ವಿಷಾದ ಮೂಡುತ್ತದಲ್ಲ? ಆಗ.
ಪರಿಚಿತರ ಮುಖಗಳೆಲ್ಲ ಬೇಸರವೆನ್ನಿಸಿ ಅನಾಮಿಕನೊಬ್ಬನ ಸಾಂಗತ್ಯ ಬೇಕೆನ್ನಿಸುತ್ತದಲ್ಲ? ಆಗ. ಹಾಡುತ್ತಿರುವ ಹಾಡು ಇದ್ದಕ್ಕಿದ್ದಂತೆ ಮರೆತು ಕಂಗಾಲಾಗುವಾಗ ಮುಂದಿನ ಸಾಲನ್ನು ನೆನಪಿಸಲು, ಇದುವರೆಗೆ ಯಾರಿಗೂ ಹೇಳದೇ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡ ಗುಟ್ಟುಗಳಿಗೆಲ್ಲ ಕಿವಿಯಾಗಲು ಯಾರಾದರೂ ಬೇಕು ಎನ್ನಿಸುತ್ತದಲ್ಲ? ಆಗ.. ನನಗೂ ಒಬ್ಬ ಗೆಳೆಯ ಬೇಕೇ ಬೇಕೆನ್ನಿಸುತ್ತೆ.
ಪ್ರೀತಿ ಪ್ರೇಮ, ಆಕರ್ಷಣೆ ಈ ಎಲ್ಲಾ ನವಿರುತನಗಳ ಮೀರಿಯೂ, ಬೇಕು ಬೇಡಗಳ ಪ್ರಶ್ನೆಗಳನ್ನು ಮೀರಿಯೂ ಕೇವಲ ಮನಸಿನ ಹಟಮಾರಿತನವನ್ನು ರಮಿಸಲು, ಆಗಾಗ ಸಂತೈಸಲು, ಹೃದಯದ ಪಿಸುಮಾತಿಗೆ ದನಿಯಾಗಲು ಆಪ್ತ ಜೀವವೊಂದು ಬೇಕೆನ್ನಿಸುತ್ತದಲ್ಲ ಅದಕ್ಕಾದರೂ ಗೆಳೆಯ ಬೇಕು..
– ವೀಚೀ