Advertisement
ನವದೆಹಲಿ: ರಾಷ್ಟ್ರಪತಿ ಭವನದ ಮುಂಭಾಗ… ಸರಿಯಾಗಿ ರಾತ್ರಿ 7 ಗಂಟೆ… ದೇಶ ಮತ್ತೊಂದು ಯುಗದಾರಂಭಕ್ಕೆ ಸಿದ್ಧವಾದ ಕ್ಷಣ… ದೇಶ ವಿದೇಶಗಳಿಂದ ಬಂದಿದ್ದ ಗಣ್ಯಾಾತಿಗಣ್ಯರು, ಸರಿಸುಮಾರು 8 ಸಾವಿರ ಅತಿಥಿಗಳ ಮುಂದೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, 16ನೇ ಪ್ರಧಾನಿಯಾಗಿ ನರೇಂದ್ರ ದಾಮೋದರದಾಸ್ ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
Related Articles
Advertisement
ರಾಜ್ಯ ಖಾತೆಯ ಸ್ವತಂತ್ರ ಉಸ್ತುವಾರಿ ಹೊತ್ತು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು ಒಟ್ಟು 9 ಮಂದಿ. ಇವರಲ್ಲಿ ಸಂತೋಷ್ ಕುಮಾರ್ ಗಂಗ್ವಾರ್, ರಾವ್ ಇಂದ್ರಜಿತ್ ಸಿಂಗ್, ಶ್ರೀಪಾದ್ ನಾಯಕ್, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಪ್ರಹ್ಲಾದ್ ಸಿಂಗ್ ಪಟೇಲ್, ರಾಜಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್‌ಸುಖ್ ಎಲ್. ಮಾಂಡವಿಯಾ ಅವರಿಗೆ ರಾಷ್ಟ್ರಪತಿಗಳು ಪ್ರತಿಜ್ಞಾವಿಧಿ ಬೋಧಿಸಿದರು.
ಇನ್ನು ರಾಜ್ಯ ಸಹಾಯಕ ಖಾತೆಯ ಸಚಿವರಾಗಿ 24 ಮಂದಿ ಪ್ರಮಾಣ ಸ್ವೀಕರಿಸಿದರು. ಇದರಲ್ಲಿ ಪ್ರಮುಖರು ಜ. ವಿ.ಕೆ. ಸಿಂಗ್, ರಾಮದಾಸ್ ಅಠಾವಳೆ, ಬಾಬುಲ್ ಸುಪ್ರೀಯೋ, ಅನುರಾಗ್ ಠಾಕೂರ್, ಸುರೇಶ್ ಅಂಗಡಿ, ಪ್ರತಾಪ್ ಚಂದ್ರ ಸಾರಂಗಿ ಪ್ರಮುಖರು.
ಗಣ್ಯಾತಿಗಣ್ಯರ ಉಪಸ್ಥಿತಿ: ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಸುಷ್ಮಾ ಸ್ವರಾಜ್, ಸುಮಿತ್ರಾಾ ಮಹಾಜನ್, ಕಾಂಗ್ರೆಸ್ ನಾಯಕರಾದ ಡಾ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೊಗೋಯ್, ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಕರ್ನಾಟಕ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಎನ್‌ಡಿಎ ನಾಯಕರಾದ ನಿತೀಶ್‌ಕುಮಾರ್, ಉದ್ಧವ್ ಠಾಕ್ರೆ ಇದ್ದರು.
ಸಂಪುಟ ತಪ್ಪಿಸಿಕೊಂಡವರು: ಕಳೆದ ಬಾರಿ ಸಚಿವರಾಗಿ, ಈ ಬಾರಿ ಸಚಿವ ಸ್ಥಾನ ತಪ್ಪಿಸಿಕೊಂಡವರ ಪಟ್ಟಿ ದೊಡ್ಡದೇ ಇದೆ. ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಜಯಂತ್ ಸಿನ್ಹಾ, ಮನೇಕಾ ಗಾಂಧಿ, ಸುರೇಶ್ ಪ್ರಭು, ರಮೇಶ್ ಜಿಗಜಿಣಗಿ, ಅನಂತ್‌ಕುಮಾರ್ ಹೆಗಡೆ, ಜೆ.ಪಿ.ನಡ್ಡಾ, ರಾಜ್ಯವರ್ಧನ್ ರಾಥೋರ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಅರುಣ್ ಜೇಟ್ಲಿ ಅವರೇ ಸ್ವಯಂ ಪ್ರೇರಿತವಾಗಿ ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದರೆ, ಅನಾರೋಗ್ಯದ ಕಾರಣದಿಂದಾಗಿ ಸುಷ್ಮಾ ಅವರು ಸಂಪುಟಕ್ಕೆ ಸೇರ್ಪಡೆಯಾಗಿಲ್ಲ. ಉಳಿದವರನ್ನು ಹೊಸಬರಿಗೆ ಸ್ಥಾನ ನೀಡುವ ಸಲುವಾಗಿ ಕೈಬಿಡಲಾಗಿದೆ.
ಹೊರಗುಳಿದ ಜೆಡಿಯು: ಸಂಪುಟದಲ್ಲಿ ಹೆಚ್ಚುವರಿ ಸ್ಥಾನ ಕೇಳಿರುವ ಬಿಹಾರದ ನಿತೀಶ್‌ಕುಮಾರ್ ನೇತೃತ್ವದ ಜೆಡಿಯುನ ಯಾವುದೇ ಸಂಸದರು ಗುರುವಾರ ರಾತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿಲ್ಲ. ಕೇವಲ ಒಂದೇ ಒಂದು ಸ್ಥಾಾನ ನೀಡಲಾಗಿದೆ ಎಂಬ ಕಾರಣಕ್ಕಾಾಗಿ ಕಡೇ ಕ್ಷಣದಲ್ಲಿ ಪ್ರಮಾಣ ವಚನ ಸ್ವೀಕಾರದಿಂದ ದೂರ ಉಳಿಯಿತು. ಆದರೆ, ನಿತೀಶ್‌ಕುಮಾರ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮೂಲಗಳ ಪ್ರಕಾರ ನಿತೀಶ್ ಪಕ್ಷ ಎರಡು ಕ್ಯಾಬಿನೆಟ್ ದರ್ಜೆಯ ಸ್ಥಾಾನಗಳನ್ನು ಕೇಳಿತ್ತು ಎನ್ನಲಾಗಿದೆ.
ಡಿವಿಎಸ್‌ಗೆ ಬಡ್ತಿ: ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಡಿ.ವಿ.ಸದಾನಂದಗೌಡ ಅವರು, ಸಂಪುಟದ ನಾಲ್ಕನೇ ಹಿರಿಯ ಸಚಿವರಾಗಿ ಮತ್ತು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಾರೆ. ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಬಳಿಕ ಸದಾನಂದಗೌಡ ಅವರ ಸರದಿ ಬಂದಿದೆ. ಕಳೆದ ಬಾರಿ ಸಾಂಖ್ಯಿಕ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಸದಾನಂದಗೌಡ ಅವರು, ಸತತ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದಂತಾಗಿದೆ.
ರಾಜ್ಯದಿಂದ ನಾಲ್ವರು ಪ್ರಮಾಣ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕರ್ನಾಟಕದ ನಾಲ್ವರು ಅವಕಾಶ ಪಡೆದಿದ್ದಾರೆ. ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಿರುವ ನಿರ್ಮಲಾ ಸೀತಾರಾಮನ್, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ.ಸದಾನಂದಗೌಡ, ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಪ್ರಹ್ಲಾದ್ ಜೋಷಿ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕಿದ್ದರೆ, ಸುರೇಶ್ ಅಂಗಡಿ ಅವರಿಗೆ ರಾಜ್ಯ ಸಹಾಯಕ ಖಾತೆ ಲಭಿಸಿದೆ.
ಮನೇಕಾ ಗಾಂಧಿ ಮಧ್ಯಂತರ ಸ್ಪೀಕರ್: ಉತ್ತರ ಪ್ರದೇಶದ ಸುಲ್ತಾನ್‌ಪುರದಿಂದ ಆಯ್ಕೆಯಾಗಿರುವ ಮನೇಕಾ ಗಾಂಧಿ ಅವರು ಮಧ್ಯಂತರ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾಾರೆ. ಮೊದಲಿಗೆ ಸಂತೋಷ್ ಕುಮಾರ್ ಗಂಗ್ವಾರ್ ಅವರು ಮಧ್ಯಂತರ ಸ್ಪೀಕರ್ ಆಗಿ ಎಲ್ಲ ಸಂಸದರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕಡೇ ಕ್ಷಣದಲ್ಲಿ ಮನೇಕಾ ಗಾಂಧಿ ಅವರನ್ನು ಕೈಬಿಟ್ಟು, ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಕಾಣಿಸದ ಅನಂತ ಪ್ರತಿಭೆ: ಹಿಂದಿನ ಎಲ್ಲಾ ಎನ್‌ಡಿಎ ಸರ್ಕಾರಗಳಲ್ಲೂ, ಹಿರಿಯ ಸಚಿವರಾಗಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಅನಂತ್‌ಕುಮಾರ್ ಅವರ ನೆನಪು ಈ ಬಾರಿ ಕನ್ನಡಿಗರಲ್ಲಿ ಬಹುವಾಗಿಯೇ ಕಾಡಿತು. ಅನಂತ್‌ಕುಮಾರ್ ಅವರ ಸಾಲಿನಲ್ಲಿ ಹಿರಿಯರಾಗಿಯೇ ಸದಾನಂದಗೌಡರು ಪ್ರಮಾಣ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು. ಆದರೆ, ಹೊಸ ಸರ್ಕಾರದಲ್ಲಿ ಅನಂತ್ ಅವರ ಜಾಗವನ್ನು ಯಾರು ತುಂಬುತ್ತಾರೆ ಎಂಬುದನ್ನು ನೋಡಬೇಕು.
ಜೈಶಂಕರ್, ಪ್ರತಾಪ್ ಅಚ್ಚರಿಯ ಆಯ್ಕೆ: ಮೋದಿ ಸಂಪುಟಕ್ಕೆ ಅಚ್ಚರಿಯೆಂಬಂತೆ ಆಯ್ಕೆಯಾದವರು ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್. ಹಿಂದಿನ ಸರ್ಕಾರದಲ್ಲಿ ಹಲವರು ಯಶಸ್ವಿ ವಿದೇಶಾಂಗ ಸಂಬಂಧಗಳನ್ನು ಕುದುರಿಸಿರುವ ಜೈಶಂಕರ್ ಅವರಿಗೆ ಕ್ಯಾಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿರುವ ಮೋದಿ ಮತ್ತು ಶಾ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮೂಲಗಳ ಪ್ರಕಾರ ಇವರೇ ವಿದೇಶಾಂಗ ಖಾತೆ ಸಚಿವರಾಗಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ, ಪ್ರತಾಪ್ ಚಂದ್ರ ಸಾರಂಗಿ ಕೂಡ ಸಂಪುಟಕ್ಕೆ ಸೇರಿದ್ದು ಅಚ್ಚರಿ ಮೂಡಿಸಿದೆ. ಈ ಬಾರಿಯ ಅತ್ಯಂತ ಬಡ ಸಂಸದ ಎಂದೇ ಖ್ಯಾತರಾಗಿರುವ ಇವರು ಒಡಿಶಾದಿಂದ ಗೆದ್ದಿದ್ದಾರೆ.