ಹೊಸದಿಲ್ಲಿ: ಮಣಿಪುರ ವಿಷಯದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಾಗಿ ತಮ್ಮ ಬೇಡಿಕೆಯ ಕುರಿತು ವಿರೋಧ ಪಕ್ಷ ಇಂಡಿಯಾ ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.
ಹಿಂಸಾಚಾರ ಪೀಡಿತ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿ ಶಾಂತಿಯನ್ನು ಮರುಸ್ಥಾಪಿಸಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದರು.
ರಾಷ್ಟ್ರಪತಿಗಳಿಗೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ, ಪ್ರತಿಪಕ್ಷದ ಬಣದ 31 ನಾಯಕರು ಹರಿಯಾಣದ ನೂಹ್‌ನಲ್ಲಿ ಕೋಮು ಗಲಭೆಯ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಕಚೇರಿಯಿಂದ ಕೇವಲ 100 ಕಿಮೀ ದೂರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರಕಾರ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮಣಿಪುರದಲ್ಲಿ 92 ದಿನಗಳಿಂದ ಹಿಂಸಾಚಾರ ನಡೆಯುತ್ತಿದೆ, ಆದರೆ ಪ್ರಧಾನಿ ಅಲ್ಲಿಗೆ ಹೋಗಿಲ್ಲ, ಸಂಸತ್ತಿನಲ್ಲಿ ಮಾತನಾಡಿಲ್ಲ. ಮೋದಿ ಸರ್ಕಾರವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಂಸದೀಯ ಸಂಪ್ರದಾಯಗಳ ಅಡಿಯಲ್ಲಿ ನಡೆಯಲು ಬಯಸುವುದಿಲ್ಲ.ಇಂಡಿಯಾ ನಿಯೋಗವು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಅವರ ತಕ್ಷಣದ ಮಧ್ಯಸ್ಥಿಕೆಗೆ ವಿನಂತಿಸಿದ್ದೇವೆ. ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ತಕ್ಷಣವೇ ಮಾತನಾಡಲು ಪ್ರಧಾನಿಯವರಿಗೆ ಒತ್ತಡ ಹೇರುವಂತೆ ನಾವು ಗೌರವಾನ್ವಿತ ರಾಷ್ಟ್ರಪತಿಗಳಿಗೆ ವಿನಂತಿಸಿ ವಿವರವಾದ ಮತ್ತು ಸಮಗ್ರ ಚರ್ಚೆಯನ್ನು ನಡೆಸಿದ್ದೇವೆ ಎಂದು ಹೇಳಿದರು.