Advertisement
2024ರ ಮೇ ತಿಂಗಳ ಒಳಗೆ ಲೋಕಸಭೆಗೆ ಚುನಾವಣೆ ನಡೆದು ಹೊಸ ಸರಕಾರ ಬರಲಿದೆ. ಹಾಗೆ ನೋಡಿದರೆ ಇನ್ನು ಎಂಟು ತಿಂಗಳು ಮಾತ್ರ ಈಗಿನ ಸಂಸತ್‌ನ ಅವಧಿ ಇದೆ. ಈಗಿನಿಂದಲೇ ಎಲ್ಲ ಪಕ್ಷಗಳು ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿದ್ದು, ಇದಕ್ಕೆ ಪೂರಕವಾಗಿ ವೇದಿಕೆಯನ್ನೂ ನಿರ್ಮಾಣ ಮಾಡಿಕೊಳ್ಳುತ್ತಿವೆ. ಅಂಥದ್ದೊಂದು ವೇದಿಕೆಯಾಗಬಹುದು ಎಂಬ ನಿರೀಕ್ಷೆಯಿಂದಲೇ, ವಿಪಕ್ಷಗಳ ಕೂಟ ಐ.ಎನ್.ಡಿ.ಐ.ಎ. ಈ ಅವಿಶ್ವಾಸದ ಹಾದಿ ಹಿಡಿದಿತ್ತು ಎಂಬುದು ಸುಲಭವಾಗಿ ವಿಶ್ಲೇಷಿಸಬಹುದಾದ ವಿಚಾರ.
Related Articles
Advertisement
ಆದರೆ ಆಡಳಿತ ಪಕ್ಷದ ಸಾಲಿನಲ್ಲಿ ಈ ವಿಚಾರವನ್ನು ಸಂಪೂರ್ಣವಾಗಿ ಮುಟ್ಟಿದ್ದು ಗೃಹ ಸಚಿವ ಅಮಿತ್ ಶಾ ಅವರು ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರೂ ಶಾಂತಿ ಮರುಸ್ಥಾಪನೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಪ್ರಸ್ತಾವಿಸುತ್ತಲೇ, ಈಶಾನ್ಯ ಭಾರತದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸದನದ ಮುಂದಿಡುತ್ತಾ ಹೋ ದರು. ಅಲ್ಲದೆ ಅಮಿತ್ ಶಾ ಅವರ ಶೈಲಿಯಲ್ಲಿ ಪ್ರಧಾನಿಯವರು ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರವನ್ನೇನೂ ಕೊಡಲಿಲ್ಲ. ಆದರೆ ಈಶಾನ್ಯ ಭಾರತದಲ್ಲಿ ಎನ್‌ಡಿಎ ಸರಕಾರ ಬಂದ ಮೇಲೆ ಆದ ಅಭಿವೃದ್ಧಿಗಳು ಮತ್ತು ಈಶಾನ್ಯ ಭಾರತದ ಮೇಲೆ ಸರಕಾರದ ಹೆಚ್ಚಿನ ಗಮನದ ಬಗ್ಗೆ ಒತ್ತಿ ಒತ್ತಿ ಹೇಳಿದರು. ಇದಕ್ಕಿಂತ ಹೆಚ್ಚಿನದಾಗಿ, ಈಶಾನ್ಯ ಭಾರತವನ್ನು ಕಾಂಗ್ರೆಸ್ ಆಡಳಿತದಲ್ಲಿ ಹೇಗೆ ಅವಗಣಿಸಲಾಗಿತ್ತು ಎಂಬ ವಿಷಯವನ್ನು ಹೇಳುವ ಮೂಲಕ ವಿಪಕ್ಷವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರು. ಈ ವಿಚಾರದಲ್ಲಿ ಅವರು ಹೆಚ್ಚೇ ಸಫಲವಾದರು.
ಆ.10ರಂದು ಮೋದಿ ಮಾಡಿದ ಭಾಷಣವನ್ನು ಗಮನಿಸಿದರೆ, ಇದು ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಉತ್ತರಕ್ಕಿಂತ ಹೆಚ್ಚಾಗಿ 2024ರ ಚುನಾವಣೆಯ ಪೂರ್ವ ತಯಾರಿಯಂತೆಯೇ ತೋರುತ್ತಿತ್ತು. ಜತೆಗೆ ಲೋಕಸಭೆಯಲ್ಲಿ ತಾನಾಗಿಯೇ ಸಿಕ್ಕ ಅವಕಾಶವನ್ನು ಮೋದಿಯವರು ಸಂಪೂರ್ಣವಾಗಿಯೇ ಬಳಸಿಕೊಂಡರು. ವಿಶೇಷವೆಂದರೆ ಮೋದಿಯವರ ಭಾಷಣದಲ್ಲಿ ಮುಕ್ಕಾಲು ಭಾಗ ಕಾಂಗ್ರೆಸ್ ಅನ್ನು ತೆಗಳಲು ಬಳಕೆಯಾಗಿತ್ತು.
ಅದರಲ್ಲೂ ರಾಹುಲ್ ಗಾಂಧಿಯವರ ಭಾರತಾಂಬೆಯ ಸಾವು ಉಲ್ಲೇಖವನ್ನು ತೆಗೆದುಕೊಂಡು, ಈ ಹಿಂದೆ ದೇಶದಲ್ಲಿ ಆಗಿದ್ದ ಘಟನಾವಳಿಗಳನ್ನು ನೆನಪಿಸಿಕೊಂಡರು. ಚೀನ ಯುದ್ಧ, ಶ್ರೀಲಂಕಾಗೆ ಕಚ್ಚೇತೀವು ದ್ವೀಪ ಬಿಟ್ಟುಕೊಟ್ಟದ್ದು, ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಪ್ರಸ್ತಾವಿಸಿದರು. ಈ ಎಲ್ಲವೂ ಆಗಿದ್ದು ಯಾರ ಕಾಲದಲ್ಲಿ ಎಂದು ಪ್ರಶ್ನಿಸುತ್ತಲೇ ನೆಹರೂ ಮತ್ತು ಇಂದಿರಾ ಗಾಂಧಿಯವರ ಮೇಲೂ ಆರೋಪ ಮಾಡಿದರು. ತಮ್ಮ ಅಧಿಕಾರಾವಧಿಯಲ್ಲಿ ಭಾರತದ ಕೀರ್ತಿ ವಿದೇಶಗಳಲ್ಲೂ ಹೆಚ್ಚಿದ ಬಗ್ಗೆ ವಿವರಿಸುತ್ತಲೇ, 2024ರಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದೇ ಗೆಲ್ಲುತ್ತೆ ಎಂದರು. ಐಎನ್‌ಡಿಐಎಯಲ್ಲಿರುವ ಪಕ್ಷಗಳ ನಡುವಿನ ಸಂಬಂಧದ ಬಗ್ಗೆಯೂ ಟೀಕಿಸಿದರು.ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು 2 ಗಂಟೆಗಳ ಕಾಲ ಲೋಕಸಭೆಯಲ್ಲಿ ನೀಡಿದ ಚರ್ಚೆ ಮೇಲಿನ ಉತ್ತರ, ಲೋಕಸಭೆ ಚುನಾವಣ ಪ್ರಚಾರಕ್ಕೆ ವೇದಿಕೆ ಸೃಷ್ಟಿಸಿದಂತಾಯಿತು. ಮೋದಿ ಅವಿಶ್ವಾಸ ಗೊತ್ತುವಳಿಯನ್ನು ಸಮರ್ಥವಾಗಿ ಬಳಸಿಕೊಂಡರು ಎಂಬ ವಿಶ್ಲೇಷಣೆ ಜೋರಾಗಿಯೇ ಸಾಗಿದೆ. ಸದ್ಯದಲ್ಲಿ ಮಣಿಪುರ ಹಿಂಸಾಚಾರ ವಿಚಾರ ಲೋಕಸಭೆ ಚುನಾವಣೆ ಮೇಲೆ ಪ್ರಮುಖ ಪಾತ್ರ ಬೀರುವ ಸಾಧ್ಯತೆಗಳು ಕಡಿಮೆ. ಇದಕ್ಕೆ ಹೊರತಾಗಿಯೇ ವಿಪಕ್ಷಗಳು ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಇದೆ. ಇದು ನೇರವಾಗಿ ತಮ್ಮ ಮತ್ತು ವಿಪಕ್ಷಗಳ ಸಮೂಹದ ನಡುವಿನ ಹಣಾಹಣಿಯಾಗಿರುವುದರಿಂದ ಮೋದಿಯವರು ತಮಗೆ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಮಾತುಗಳೂ ಇವೆ. ಸದ್ಯದಲ್ಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಸೆಮಿಫೈನಲ್ ರೀತಿಯ ಚುನಾವಣೆಗಳಿವು. ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಗೆದ್ದಿರುವ ವಿಶ್ವಾಸವಿದೆ. ಈ ವಿಶ್ವಾಸ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೆಲಸ ಮಾಡಬಹುದು. ಆದರೆ ಲೋಕಸಭೆ ಚುನಾವಣೆಯಲ್ಲಿ ಮೋದಿ ವರ್ಸಸ್ ಯಾರು ಎಂಬ ಪ್ರಶ್ನೆ ಎದುರಾದಾಗ ಅಲ್ಲಿ ಒಬ್ಬರನ್ನು ನಿಲ್ಲಿಸಲೇಬೇಕಾಗುತ್ತದೆ. ಈ ವಿಚಾರದಲ್ಲಿ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಹೋಮ್‌ವರ್ಕ್ ನಡೆಸುತ್ತಿದ್ದಾರೆ ಎಂಬುದಕ್ಕೆ ಲೋಕಸಭೆಯಲ್ಲಿನ ಅವರ ಭಾಷಣವೇ ಸಾಕ್ಷಿ. ಹೀಗಾಗಿ ಮುಂದಿನ ದಿನಗಳಲ್ಲಿ ಎನ್‌ಡಿಎ ವರ್ಸಸ್ ಐಎನ್‌ಡಿಐಎ ಸಮರ ಬೇರೊಂದು ಮಟ್ಟಕ್ಕೆ ತಲುಪಲೂಬಹುದು. ಸೋಮಶೇಖರ ಸಿ.ಜೆ.