ಮುಂಬೈ: ಟೀಂ ಇಂಡಿಯಾದ ಚೈನಮನ್ ಸ್ಪಿನ್ನರ್ ಕುಲದೀಪ್ ಯಾದವ್ ಸದ್ಯ ತನ್ನ ಕ್ರಿಕೆಟ್ ಜೀವನದ ಕಷ್ಟಕರ ಸಮಯದಲ್ಲಿದ್ದಾರೆ. ಕಳೆದೆರಡು ವರ್ಷಗಳಿಂದ ಕುಲದೀಪ್ ಕ್ರಿಕೆಟ್ ಜೀವನ ಅಷ್ಟೊಂದು ಸುಲಭವಾಗಿಲ್ಲ. ಕೆಲವು ವಿಕೆಟ್ ರಹಿತ ಪಂದ್ಯಗಳ ನಂತರ ಸದ್ಯ ಕುಲದೀಪ್ ಗೆ ಆಡುವ ಅವಕಾಶ ಪಡೆಯುವುದೇ ಕಷ್ಟ ಎಂಬಂತಾಗಿದೆ.
ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾದ ಬಳಿಕ ಕುಲದೀಪ್ ಯಾದವ್ ತನ್ನ ಮ್ಯಾಜಿಕ್ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಕುಲದೀಪ್ ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಯೂನಿವರ್ಸ್ ಬಾಸ್..!
ಸ್ಟಂಪ್ ಹಿಂದಿನಿಂದ ಧೋನಿಯ ಸಲಹೆಗಳನ್ನು ನಾನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಅನುಭವ ಅಗಾಧ. ವಿಕೆಟ್ ಹಿಂದೆ ನಿಂತ ಅವರು ನನಗೆ ಉತ್ತಮ ಸಲಹೆ ನೀಡುತ್ತಿದ್ದರು. ಈಗಿನ ಕೀಪರ್ ರಿಷಭ್ ಪಂತ್ ಇನ್ನೂ ಯುವಕ. ಹೆಚ್ಚು ಅನುಭವವಾದಂತೆ ಇನ್ನಷ್ಟು ಉತ್ತಮ ಸಲಹೆ ನೀಡುತ್ತಾರೆ ಎನ್ನುತ್ತಾರೆ ಕುಲದೀಪ್.
ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿರುವಾಗ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಜತೆಯಾಗಿ ಆಡುತ್ತಿದ್ದರು. ಆದರೆ ಧೋನಿ ನಿವೃತ್ತಿ ಬಳಿಕ ಇಬ್ಬರು ಸ್ಪಿನ್ನರ್ಸ್ ಒಟ್ಟಾಗಿ ಆಡಿಯೇ ಇಲ್ಲ. 2021ರಲ್ಲಿ ಕುಲದೀಪ್ ಯಾದವ್ ಆಡಿದ್ದು ಕೇವಲ ಎರಡು ಏಕದಿನ ಪಂದ್ಯ ಮತ್ತು ಒಂದು ಟೆಸ್ಟ್ ಪಂದ್ಯ ಮಾತ್ರ. ಒಂದು ಕಾಲದಲ್ಲಿ ಕೆಕೆಆರ್ ನ ಪ್ರಮುಖ ಸ್ಪಿನ್ನರ್ ಆಗಿದ್ದ ಕುಲದೀಪ್ ಈ ಬಾರಿಯ ಐಪಿಎಲ್ ನಲ್ಲಿ ಒಂದೂ ಪಂದ್ಯವಾಡುವ ಅವಕಾಶ ಪಡೆದಿಲ್ಲ.
ಇದನ್ನೂ ಓದಿ: ಐಪಿಎಲ್ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?