Advertisement

ಅತಿ ಹೆಚ್ಚು ದುರುಪಯೋಗಕ್ಕೆ ಒಳಗಾದ ನುಡಿ ಐ ಲವ್‌ ಯೂ 

03:45 AM Mar 07, 2017 | Harsha Rao |

ಪ್ರೀತಿ ಜಗತ್ತನ್ನೇ ಆವರಿಸಿದೆ. ಜಗತ್ತಿನ ಎಲ್ಲ ಪ್ರೀತಿಯನ್ನೂ ಪುಟ್ಟ ಹೃದಯದಲ್ಲಿ ಕೂಡಿಟ್ಟು ತನ್ನ ಪ್ರೇಮಿಗೆ ಅದನ್ನು ವ್ಯಕ್ತಪಡಿಸುವಾಗ ಬಳಸುವ ಏಕೈಕ ಪೂಜ್ಯ ಮಂತ್ರ ಈ “ಐ ಲವ್‌ ಯೂ’. ಅದನ್ನು ಅಗ್ನಿಸಾಕ್ಷಿಯಾಗಿ ಕೈಹಿಡಿದ ಜೀವನ ಸಂಗಾತಿಗೆ ಮೀಸಲಿಟ್ಟು ನುಡಿದರೆ ಅದೆಷ್ಟು ರೋಮಾಂಚಕಾರಿ!

Advertisement

“ನಾನು ನಿನ್ನನ್ನು ಪ್ರೀತಿಸುತ್ತೇನೆ – ಐ ಲವ್‌ ಯೂ’ ಎಂಬ ವಾಕ್ಯ ಕಿವಿಗೆ ಬಿದ್ದ ಕೂಡಲೇ ನಮಗೇ ಗೊತ್ತಾಗದಂತೆ ನಮ್ಮ ದೇಹ ಮತ್ತು ಮನಸ್ಸು ಉನ್ಮಾದಗೊಳ್ಳುತ್ತದೆ. ಹಾಗೆ ಆ ವಾಕ್ಯವನ್ನು ನಮ್ಮ ಹೃದಯಕ್ಕೆ ಹತ್ತಿರವಾದವರು ಹೇಳುತ್ತಾ ಇದ್ದರೆ ನೂರು ಬಾರಿ ಬೇಕಾದರೂ ನಮ್ಮ ಕಿವಿ ಅದನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಾಗಿರುತ್ತದೆ. ಅದೊಂದು ವಾಕ್ಯ ಪ್ರೇಮಿಗಳಿಗೆ ಭದ್ರತೆಯ ಭಾವನೆಯನ್ನು ಕೊಡುತ್ತದೆ. ಅದನ್ನು ಕೇಳಿದ ತತ್‌ಕ್ಷಣ ಮನಸ್ಸಿಗೆ ಸಮಾಧಾನ ಕೂಡ ಆಗುತ್ತದೆ. ಆ ವಾಕ್ಯದ ತಾಕತ್ತು ಅಂಥದ್ದು. 

ನೀವೇ ಗಮನಿಸಿರುವ ಹಾಗೆ ಪ್ರತಿಯೊಬ್ಬ ಮನುಷ್ಯ ಯೌವನಕ್ಕೆ ಬಂದಾಗಿನಿಂದ ಹಿಡಿದು ಸಾಯುವವರೆಗೂ ತನ್ನ ಪ್ರೇಮಿಯಿಂದ, ಹೆಂಡತಿ/ಗಂಡನಿಂದ ಬಯಸುವ, ಅಪೇಕ್ಷಿಸುವ, ಆತುರದಿಂದ ಎದುರುನೋಡುವ ವಾಕ್ಯ ಅದು, “ಐ ಲವ್‌ ಯೂ’. ಅದಕ್ಕಿಂತ ಮುನ್ನ ಪುಟ್ಟ ಮಕ್ಕಳು ಕೂಡ ಪ್ರೀತಿಯನ್ನು ಬಯಸುತ್ತಾರೆ. ಅದರ ಸ್ವರೂಪ ಬೇರೆಯದ್ದು. ಅದು ಅಪ್ಪ, ಅಮ್ಮನಿಂದ ಕೇಳಿ ಪಡೆಯುವಂಥದ್ದಲ್ಲ, ತಾನಾಗಿ ಲಭಿಸುವಂಥದ್ದು. 

ಜಗತ್ತನ್ನೇ ಆವರಿಸಿರುವ ಪ್ರೀತಿ
ಯೌವನದಲ್ಲಿ ಪ್ರೀತಿಯ ಹುಚ್ಚು ಹಿಡಿದಾಗ ಅತಿ ಹೆಚ್ಚು ಬಳಕೆಯಾಗುವ ವಾಕ್ಯವೇ “ಐ ಲವ್‌ ಯೂ’. ಇವತ್ತಿನ ಯುವಕ, ಯುವತಿಯರು ಈ ವಾಕ್ಯದ ಅರ್ಥ ತಿಳಿದು ನಿಜಕ್ಕೂ ಪ್ರೀತಿಸುವುದಕ್ಕೆ ಬದಲಾಗಿ ಅದನ್ನು ಸೀಮಿತ ಅರ್ಥಕ್ಕೆ ಮಿತಿಗೊಳಿಸಿ ದುರುಪಯೋಗಪಡಿಸಿಕೊಳ್ಳುತ್ತಿರುವುದೇ ಹೆಚ್ಚು. ಮನಸ್ಸು ಮತ್ತು ಹೃದಯಗಳ ಸಂಯೋಗವನ್ನು ಸೂಚಿಸುವ ಈ ವಾಕ್ಯ ಇವತ್ತು ಅದಕ್ಕೆ ಬದಲಾಗಿ ದೈಹಿಕ ಕಾಮನೆಯ ಸೀಮಿತ ಅರ್ಥದಲ್ಲಿ ಬಳಕೆಯಾಗುತ್ತಿದೆ. ದೈಹಿಕ ಕಾಮನೆಯೇ ಪ್ರೀತಿ ಎಂಬುದಾಗಿ ಇವತ್ತಿನ ಯುವಕ – ಯುವತಿಯರು ತಿಳಿದುಕೊಂಡಿರುವುದು ದುರದೃಷ್ಟಕರ. ಕೆಲವು ಗೊತ್ತಿದ್ದು ಈ ವಾಕ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ, ಇನ್ನು ಕೆಲವರಿಗೆ ಪ್ರೀತಿಯ ವೈಶಾಲ್ಯದ ಬಗ್ಗೆ ತಿಳಿದೇ ಇರುವುದಿಲ್ಲ.

ಐ ಲವ್‌ ಯೂ ಅಥವಾ ನಾನು ನಿನ್ನನ್ನು ಪ್ರೀತಿಸುತ್ತೇನೆ – ಇದು ಪ್ರೀತಿಯ ಭರವಸೆ, ಸಹಬಾಳ್ವೆ, ಧೋರಣೆಗಳನ್ನು ಮೀರಿದ್ದು. ಪ್ರೀತಿ ಜಗತ್ತನ್ನೇ ಆವರಿಸಿದೆ. ಜಗತ್ತಿನ ಎಲ್ಲ ಪ್ರೀತಿಯನ್ನೂ ಪುಟ್ಟ ಹೃದಯದಲ್ಲಿ ಕೂಡಿಟ್ಟು ತನ್ನ ಪ್ರೇಮಿಗೆ ಅದನ್ನು ವ್ಯಕ್ತಪಡಿಸುವಾಗ ಬಳಸುವ ಏಕೈಕ ಪೂಜ್ಯ ಮಂತ್ರ ಈ ಐ ಲವ್‌ ಯೂ. 

Advertisement

ನಿಜವಾದ ಪ್ರೀತಿಯನ್ನೇ ಮಾಡದೆ, ಪರಸ್ಪರ ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿರುವ ಲಕ್ಷಾಂತರ ಜನರ ಪೋನ್‌ ಕಾಲ್‌ಗ‌ಳಲ್ಲಿ, ಎಸ್‌ಎಂಎಸ್‌ಗಳಲ್ಲಿ, ವಾಟ್ಸಪ್‌ ಸಂದೇಶಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾರಿ “ಐ ಲವ್‌ ಯೂ’ ಪದಗುತ್ಛ ಓಡಾಡುತ್ತಲೇ ಇದೆ. ಕಾಲೇಜು ದಿನಗಳಲ್ಲಂತೂ ಹುಡುಗ ಹುಡುಗಿಯರು ಅದೆಷ್ಟು ಬಾರಿ, ಎಷ್ಟು ಸುಲಭವಾಗಿ ಈ ವಾಕ್ಯವನ್ನು ಹರಿದಾಡಿಸುತ್ತಾರೆ ಅಂದರೆ, ಅದಕ್ಕೆ ಲೆಕ್ಕವೇ ಇರುವುದಿಲ್ಲ. ಅದು ಒಂದು ಹುಡುಗ ಅಥವಾ ಹುಡುಗಿಗೆ ಶಾಶ್ವತವಾಗಿಯೂ ಇರುವುದಿಲ್ಲ. 

ಯಾರ್ಯಾರ ಮೇಲೆ ಆಕರ್ಷಣೆ ಉಂಟಾಗುತ್ತ ಹೋಗುತ್ತದೆಯೋ ಅವರನ್ನು ಪಡೆದುಕೊಳ್ಳಬೇಕು ಅನ್ನುವ ಗುಂಗಿನಲ್ಲಿ ತಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತ ಭ್ರಮಿಸುತ್ತಾರೆ. ಆದರೆ ಅದು ನಿಜವಾದ ಪ್ರೀತಿಯಾಗಿದ್ದರೆ ಮಾತ್ರ ಶಾಶ್ವತವಾಗಿರುತ್ತದೆ. 

ನಿಜವಾಗಿಯೂ ಇವತ್ತಿನ ಜನ ಒಂದೇ ವ್ಯಕ್ತಿಗೆ “ಐ ಲವ್‌ ಯೂ’ ಅಥವಾ “ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅನ್ನುವುದನ್ನು ಸೀಮಿತವಾಗಿಟ್ಟಿದ್ದಾರಾ ಅಥವಾ ಆ ವಾಕ್ಯ ಮೂರ್ನಾಲ್ಕು ತಿಂಗಳಿಗೊಮ್ಮೆ ಬೇರೆಯವರಿಗೆ ವರ್ಗಾವಣೆಯಾಗುತ್ತಾ?!

ಅರ್ಥ ಗೊತ್ತಿಲ್ಲದೆ ಆಡುವ ಮಾತುಗಳು
ನಾವು ಪ್ರತಿನಿತ್ಯ ಎಷ್ಟೋ ಅಮೂಲ್ಯವಾದ ವಾಕ್ಯಗಳ ಅಥವಾ ಪದಗಳ ಅರ್ಥಕ್ಕೆ ಬೆಲೆಯನ್ನೇ ಕೊಡದೆ ಬೇಕಾಬಿಟ್ಟಿ ಬಳಸುತ್ತಿರುತ್ತೇವೆ. ಅದರಲ್ಲಿ ಬಹಳ ಮುಖ್ಯವಾದ ವಾಕ್ಯ, ಅದು ಇಲ್ಲದೆ ಯಾವ ಮನುಷ್ಯನ ಜೀವನವೂ ಪರಿಪೂರ್ಣವಾಗುವುದಿಲ್ಲವೋ ಆ ವಾಕ್ಯವನ್ನೇ ಪ್ರತಿನಿತ್ಯ ಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಾನು ಕಂಡಂತೆ ಎಷ್ಟೋ ಜನ ಯುವಕ ಯುವತಿಯರು ಯೌವನದಲ್ಲಿ ತಾವೇ ಜಗತ್ತಿನ ಮಹಾನ್‌ ಪ್ರೇಮಿಗಳು ಎಂದುಕೊಂಡು ಸಾವಿರಾರು ಬಾರಿ “ಐ ಲವ್‌ ಯೂ’ ಹೇಳಿ, ಎಲ್ಲೆಲ್ಲಿಗೋ ಹೋಗಿ ಹೋಗಿ ಮದುವೆಯಾಗಿ, ಜತೆಯಲ್ಲಿ ಮೂರು ದಿನ ಸಂಸಾರ ನಡೆಸುತ್ತಾರೆ. ಮತ್ತೆ ಊರಿಗೆ ವಾಪಸ್ಸು ಬಂದಮೇಲೆ, ಮನೆಯಲ್ಲಿ ಅಪ್ಪ- ಅಮ್ಮನ ವಿರೋಧದ ಕಾರಣ ಕೊಟ್ಟು ಬೇರೆಯವರನ್ನು ಮದುವೆಯಾಗುತ್ತಾರೆ. “ಐ ಲವ್‌ ಯೂ’ ಎಂದು ಹೇಳಿ ಜತೆಯಾಗಿದ್ದು, ಕೆಲವು ತಿಂಗಳುಗಳಲ್ಲಿ ಅಥವಾ 
ಒಂದೆರಡು ವರ್ಷಗಳಲ್ಲಿ ಇನ್ನೊಂದು ಹೂವಿನತ್ತ ಹಾರುವವರೂ ಇದ್ದಾರೆ. ಹಾಗಾದರೆ ನಾವೆಲ್ಲ “ಐ ಲವ್‌ ಯೂ’ಗೆ ಕೊಡುವ ಬೆಲೆ ಅಷ್ಟೇನಾ? ಕೇವಲ ಮೂರು ದಿನದ ಕ್ಷಣಿಕ ಸುಖಕ್ಕಾಗಿ ಆ ಪವಿತ್ರವಾದ ಮಂತ್ರವನ್ನು ದುರ್ಬಳಕೆ ಮಾಡಿಕೊಂಡರೆ ನಾವು ಅದಕ್ಕೆ ಅವಮಾನ ಮಾಡಿದಂತೆ ಆಗುವುದಿಲ್ಲವೇ? 

ಜೀವನ ಸಂಗಾತಿಗೆ ಮೀಸಲಿರಲಿ 
ಎಷ್ಟೋ ಜನ ಈ ವಾಕ್ಯವನ್ನು ತಮಾಷೆಗಾಗಿಯೂ ಬಳಸುತ್ತಾರೆ. ಆದರೆ ಅದರ ಪರಿಣಾಮ ಮಾತ್ರ ಗಂಭೀರ. ಅದು ಇನ್ನೊಬ್ಬರ ಮಾನಸಿಕ ಸ್ಥಿತಿಯ ಜತೆ ಆಟ ಆಡಿ, ಅವರ ಜೀವನವನ್ನೇ ಕೊನೆಗೊಳಿಸಿದ ನಿದರ್ಶನಗಳಿವೆ. ಕೆಲವು ಹುಡುಗ ಹುಡುಗಿಯರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದನ್ನು ನೀವೂ ಕಂಡಿರುತ್ತೀರಿ ಅಥವಾ ಕೇಳಿರುತ್ತೀರಿ. ನಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿಯುಳ್ಳ ಆ ಪವಿತ್ರ ವಾಕ್ಯವನ್ನು; ನಮಗೆ ಇನ್ನೆಲ್ಲೂ ಸಿಗದಂತಹ ಸುಖವನ್ನು ಹೊತ್ತು ತರುವ ಸಾಮರ್ಥ್ಯವುಳ್ಳ ಆ ಸಾಲನ್ನು, ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿ ನಮಗೆ ಜೀವನದ ಬಗ್ಗೆ ಆಸೆ ಮೂಡಿಸುವ ಆ ಪ್ರೀತಿಯ ಪಾವಿತ್ರ್ಯವನ್ನು ನಮ್ಮ ಜೀವನ ಸಂಗಾತಿಗಾಗಿ ಮುಡಿಪಾಗಿಟ್ಟರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ! 

ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಸಿಕ್ಕಸಿಕ್ಕವರಿಗೆಲ್ಲ “ಐ ಲವ್‌ ಯೂ’ ಹೇಳುವುದಕ್ಕಿಂತ ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ ಎಂದು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು, ಸುಂದರವಾದ ಸಂಸಾರಕ್ಕೆ ಕಾಲಿಡುವ ಕ್ಷಣದಲ್ಲಿ ನಿಮ್ಮ ಜೀವನ ಸಂಗಾತಿಯ ಕಿವಿಯಲ್ಲಿ “ಐ ಲವ್‌ ಯೂ’ ಎಂದು ಪಿಸುಗುಟ್ಟಿದರೆ ಅದೆಷ್ಟು ರೊಮ್ಯಾಂಟಿಕ್‌ ಆಗಿರುತ್ತದೆ ಅಲ್ಲವೇ! “ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅನ್ನುವುದರ ಅರ್ಥವೂ ನಿಜವಾಗಿ ಧರ್ಮ, ಅರ್ಥ, ಕಾಮಗಳಲ್ಲಿ ನಾನು ನಿನ್ನನ್ನು ಅನುಸರಿಸುತ್ತೇನೆ ಎನ್ನುವುದೇ ಅಲ್ಲವೇ! ಆಗ ಜಗತ್ತಿನ ಎಲ್ಲ ಸುಖ ನಿಮ್ಮಿಬ್ಬರ ಮಡಿಲಲ್ಲಿ ಇರುತ್ತದೆ. ಹಾಗೆ ಆ ಪವಿತ್ರ ಸಂಬಂಧಕ್ಕೆ “ಐ ಲವ್‌ ಯೂ’ ಹೇಳಿದ ನಿಮ್ಮ ಪ್ರೀತಿಯೂ ಸಾರ್ಥಕವಾಗುತ್ತದೆ.

– ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next