ಅವಸರವಸರವಾಗಿ ಹೊರಟು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅವತ್ಯಾಕೋ ನಾನು ಮಾಮೂಲಿಯಾಗಿ ಹೋಗುವ ಬಸ್ಸು ತಪ್ಪಿದ್ದರಿಂದ ಬೇರೊಂದು ಬಸ್ಸಿನಲ್ಲಿ ಹೋಗಬೇಕಾಯಿತು. ಕಂಡಕ್ಟರ್‌ಗೆ ಬಸ್ ಪಾಸ್ ತೋರಿಸಿ ಮೊಬೈಲ್ ತೆಗೆದು ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಫೇವರೆಟ್ ಸಾಂಗ್ ಹಾಕಿಕೊಂಡು ಕೇಳುತ್ತಿದ್ದೆ. ಆಗಲೇ ಬಸ್‌ಗೆ ಒಬ್ಬಳು ಸುಂದರಿ ಹತ್ತಿ, ಬೇರೆ ಯಾವುದೇ ಸೀಟ್ ಇಲ್ಲದ ಕಾರಣ ನನ್ನ ಪಕ್ಕದಲ್ಲಿಯೇ ಕುಳಿತಳು.
ಇಂದಿನ ನನ್ನ ಪೂರ್ತಿ ದಿನಚರಿ ಬದಲಾಗಿತ್ತು. ಮೊಬೈಲ್ ಹಾಗೂ ಇಯರ್ ಫೋನ್ ಜೇಬಿನಲ್ಲಿಟ್ಟು ಅವಳನ್ನೇ ನೋಡುತ್ತಾ ಕುಳಿತೆ. ಬಸ್ಸು ಸ್ವಲ್ಪ ದೂರ ಹೋಗುತ್ತಿದ್ದಂತೆ ಅವಳೊಂದಿಗೆ ಮಾತನಾಡಬೇಕೆನ್ನಿಸಿತು. ಧೈರ್ಯ ಮಾಡಿ “ನಿಮ್ಮ ಹೆಸರೇನು?’ ಎಂದು ಕೇಳಿಯೆ ಬಿಟ್ಟೆ. ಅವಳೂ ಅಷ್ಟೇ ಸಂಕೋಚದಿಂದ “ಸಹನಾ…’ ಎಂದು ಹೇಳುತ್ತಲೇ ನನ್ನ ಮನಸ್ಸಿನಲ್ಲಿದ್ದ ಭಯ ದೂರವಾಯಿತು. ಹೀಗೆ ನಮ್ಮ ಮಾತುಕತೆ ದಾರಿಯುದ್ದಕ್ಕೂ ಬೆಳೆಯುತ್ತ ಅವಳ ಪರಿಚಯ ನನ್ನಲ್ಲಿ ಏನೋ ಉತ್ಸಾಹ ತುಂಬಿತು.
ಹೀಗೇ ಮಾತು ಮುಂದುವರೆಸಿದೆವು. ಅದುವರೆಗೂ ಯಾವ ಹುಡುಗಿಯ ಬಳಿಯೂ ಮಾತನಾಡದ ನಾನು ಅಂದು ನನಗೆ ಗೊತ್ತಿಲ್ಲದಂತೆ ಅವಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದೆ ಅವಳು ನನ್ನ ಮನಸನ್ನು ಆವರಿಸಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಎದೆಯಲ್ಲಿ ಢವ ಢವ ಸದ್ದು ಹೆಚ್ಚಾಗತೊಡಗಿತು. ಕೊನೆಗೂ ಐ LOVE YOU ಎಂದು ಹೇಳಿಯೇಬಿಟ್ಟೆ. ಅವಳ ಮರು ಉತ್ತರಕ್ಕಾಗಿ ಕಾಯುತ್ತ ಕುಳಿತಾಗ ಬಸ್ಸಿನಲ್ಲಿ ಏನೋ ಗದ್ದಲ ಪ್ರಾರಂಭವಾಯಿತು. ಅದೇನೆಂದು ಗಮನಿಸುವಷ್ಟರಲ್ಲಿ ನಾನು ಇಳಿಯಬೇಕಿದ್ದ ಬಸ್ ಸ್ಟಾಂಡ್ ಬಂದಿತ್ತು. ನನ್ನ ಪಕ್ಕದಲ್ಲಿದ್ದ ಹುಡುಗಿ ನನಗಿಂತ ಮೊದಲೇ ಇಳಿದಾಗಿತ್ತು. ನಾನು ಸ್ವಲ್ಪ$ಸುಧಾರಿಸಿ ಯೋಚಿಸಿದೆ. ಬಸ್ಸಿನಲ್ಲಿ ಆ ಸುಂದರಿ ಬಂದು ಕೂತಿದ್ದೇನೊ ನಿಜ, ಆದರೆ ನಾನು ಅವಳೊಂದಿಗೆ ಮಾತನಾಡಿದ್ದೆಲ್ಲಾ ಕನಸಿನಲ್ಲಿ ಎಂದು ತಿಳಿದಾಗ ನನ್ನ ಅವಿವೇಕಿತನಕ್ಕೆ ನಾನೊಬ್ಬನೇ ಸಾಕ್ಷಿಯಾಗಿದ್ದೆ. ಇಂದಿಗೂ ಕಾಲೇಜಿನಲ್ಲಿ ಅವಳನ್ನು ನೋಡಿದಾಗಲೆಲ್ಲ ನನ್ನ ಕನಸು ನೆನಪಾಗಿ ನಾನೊಬ್ಬನೇ ನಸುನಗುತ್ತೇನೆ.
– ಜೈದೀಪ್ ಪೂಜಾರಿ