ಸುಮಾರು ಎರಡು ವರ್ಷಗಳ ಬಳಿಕ ಉಪೇಂದ್ರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ “ಐ ಲವ್ ಯು’ ಚಿತ್ರದ ಹಾಡುಗಳು ಇತ್ತೀಚೆಗೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು, ಸಿನಿರಸಿಕರು ನೆರೆದಿದ್ದು, ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಕಂಠದಲ್ಲಿ ಒಂದೊಂದೆ ಗೀತೆಗಳು ಹೊರಬರುತ್ತಿದ್ದಂತೆ, ವೇದಿಕೆಯ ಮುಂಭಾಗ ನೆರೆದಿದ್ದ ಅಭಿಮಾನಿಗಳು ಕೂಡ ಆ ಹಾಡುಗಳಿಗೆ ಹೆಜ್ಜೆ ಹಾಕಿದರು. ಮೋಹನ್ ಸಂಯೋಜಿಸಿದ ನೃತ್ಯಕ್ಕೆ ಹೆಜ್ಜೆ ಹಾಕಿದ ಕಲಾವಿದರು, ನೋಡುಗರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ಇವರೊಂದಿಗೆ ನಟ ಉಪೇಂದ್ರ, ನಟಿ ರಚಿತಾ ರಾಮ್, ಸೋನುಗೌಡ, ಮಯೂರಿ ಸೇರಿದಂತೆ ಅನೇಕರು ವೇದಿಕೆಯಲ್ಲೇ ಹಾಡುಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇದೇ ವೇಳೆ ಮಾತನಾಡಿದ “ಐ ಲವ್ ಯು’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಆರ್. ಚಂದ್ರು, “ಬಹಳ ಸಮಯದ ನಂತರ ಉಪೇಂದ್ರ ಅವರೊಂದಿಗೆ ಕೆಲಸ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಉಪೇಂದ್ರ ಅವರನ್ನು ಇಲ್ಲಿಯವರೆಗೆ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು ಈ ಸಿನಿಮಾದಲ್ಲಿ ಹೊಸ ಗೆಟಪ್‌ನಲ್ಲಿ ಉಪ್ಪಿ ಅವರನ್ನು ನೋಡಿ ಖುಷಿಪಡುತ್ತಾರೆ. ದಾವಣಗೆರೆಯ ಬೆಣ್ಣೆ ಮನಸ್ಸಿನ ಜನರ ಮುಂದೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಖುಷಿ ಆಗುತ್ತದೆ. ಚಿತ್ರಕ್ಕೆ ಎಲ್ಲರ ಸಹಕಾರವಿರಲಿ’ ಎಂದರು.
ನಟ ಉಪೇಂದ್ರ ಮಾತನಾಡಿ, “”ಎ’ ಸಿನಿಮಾದ ನೂರನೇ ದಿನದ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಮಾಡಿದ್ದೆವು. ಆಗಲೂ ಸಾವಿರಾರು ಜನ ಸೇರಿ ನಮ್ಮನ್ನು ಹರಸಿದ್ದರು. ಬಹಳ ವರ್ಷದ ನಂತರ ಮತ್ತೆ ಇಲ್ಲೇ ನಮ್ಮ ಸಿನಿಮಾದ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು.
ಸಮಾರಂಭದಲ್ಲಿ “ಐ ಲವ್ ಯು’ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಿತ್ರರಂಗದ ಅನೇಕ ಗಣ್ಯರು, ಜನಪ್ರತಿನಿಧಿಗಳು ಹಾಜರಿದ್ದು “ಐ ಲವ್ ಯು’ ಚಿತ್ರದ ಹಾಡುಗಳನ್ನು ಹೊರತಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇನ್ನು “ಐ ಲವ್ ಯು’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ದಾವಣಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಕೇವಲ ಮೂರು ಹಾಡುಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದ್ದು, ಬಾಕಿ ಇರುವ ಮೂರು ಹಾಡುಗಳನ್ನು ಮಂಡ್ಯ ಅಥವಾ ಹಳೇ ಮೈಸೂರು ಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಮತ್ತೂಂದು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಉದ್ದೇಶಿಸಿದೆ.
ಸದ್ಯ ಬಿಡುಗಡೆಯಾಗಿರುವ “ಐ ಲವ್ ಯು’ ಹಾಡುಗಳು ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ನಿಧಾನವಾಗಿ ಜನಪ್ರಿಯವಾಗುತ್ತಿದೆ. ಚಿತ್ರದ ಹಾಡುಗಳಿಗೆ ಡಾ.ಕಿರಣ್ ತೋಟಂಬೈಲು ಸಂಗೀತವಿದೆ. ಚಿತ್ರದ ಒಂದು ವಿಶೇಷ ಹಾಡಿಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ರಾಗ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ್ದು, ಧ್ವನಿ ಸಾಂದ್ರಿಕೆಯನ್ನು ಮಾರುಕಟ್ಟೆಗೆ ತಂದಿದೆ.
ಜಿ. ಎಸ್. ಕಾರ್ತಿಕ ಸುಧನ್