Advertisement
“ಅಲ್ಲಿ ನೋಡು, ಆ ಹುಡುಗಿ ತುಟಿಗೆ ಪೇಯಿಂಟ್ ಮಾಡ್ಕೊಂಡು ಬಂದಂಗೆ ಕಾಣ್ತಿಲ್ವಾ?’ ಅಂತ ಗೆಳೆಯ, ಹುಡುಗಿಯೊಬ್ಬಳತ್ತ ಬೆರಳು ಮಾಡಿ ತೋರಿದ್ದ. ತುಟಿಯ ಬಣ್ಣ ಸ್ವಲ್ಪ ಹೆಚ್ಚಾಗಿದ್ದರೂ ಹುಡುಗಿ ಮುದ್ದಾಗಿಯೇ ಕಾಣುತ್ತಿದ್ದಳು. ಹುಡುಗಿಯರ ಮೇಕಪ್ ಎಷ್ಟೇ ನವಿರಾಗಿದ್ದರೂ, ಅದರ ಬಗ್ಗೆ ವ್ಯಂಗ್ಯ, ಕಮೆಂಟ್, ಟ್ರೋಲ್‌ಗಳು ಸಾಮಾನ್ಯವೇ ತಾನೆ?.
Related Articles
Advertisement
ನಾನೂ ಮೊದಮೊದಲು ಮೇಕಪ್ ಎಂದರೆ ಮಾರು ದೂರ ಓಡುತ್ತಿದ್ದೆ. “ಸಹಜವೇ ಸುಂದರ’ ಅಂತ ನಂಬಿದ್ದವಳನ್ನು ಬದಲಿಸಿದ್ದು ಮೇಕಪ್ ಆರ್ಟಿಸ್ಟ್ ಆಗಿರುವ ಗೆಳತಿ. ತನ್ನ ಮದುವೆಗೆ ತಾನೇ ಸಿಂಗರಿಸಿಕೊಂಡು, ಅಪ್ಸರೆಯಂತೆ ನನ್ನ ಮುಂದೆ ಬಂದು ನಿಂತಾಗ, ಇವಳೇನಾ ಅವಳು?! ಅನ್ನುವಷ್ಟು ಚಂದ ಕಾಣುತ್ತಿದ್ದಳು. ಲಿಪ್‌ಸ್ಟಿಕ್, ಮಸ್ಕಾರ, ಫೌಂಡೇಶನ್…ಯಾವುದೂ ಅತಿಯಾಗದಿದ್ದರೂ, ನವಿರಾದ ಮೇಕಪ್ ಅವಳ ಅಂದವನ್ನು ಇಮ್ಮಡಿಗೊಳಿಸಿತ್ತು. “ಮೇಕಪ್ ಅಂದ್ರೆ ಬಣ್ಣ ಬಳಿಯುವುದಲ್ಲ, ಅದೊಂದು ಕಲೆ’ ಅಂತ ಅವತ್ತು ಅವಳು ತೋರಿಸಿ ಕೊಟ್ಟಿದ್ದಳು.
ಮೇಕಪ್ ಅಂದ್ರೆ ಸುಮ್ನೆಯಾ?ಹಿಂದೊಮ್ಮೆ ಅವಳನ್ನು ಕೇಳಿದ್ದೆ- “ನಿಂಗೆ ತುಂಬ ಬೇಜಾರಾದಾಗ, ತಾಳ್ಮೆ ಮೀರಿದಾಗ, ಆತ್ಮವಿಶ್ವಾಸ ಕುಂದಿದಾಗ ಏನ್ ಮಾಡ್ತೀಯಾ?’ ಅಂತ. ಅದಕ್ಕವಳು ಮೇಕಪ್ ಮಾಡ್ತೀನಿ ಅಂದಿದ್ಲು! “ಭಾವನೆಯಲ್ಲಿ ಕಳೆಗುಂದಿದ ಮುಖಕ್ಕೆ ತಿಳಿನೀರು ಚಿಮುಕಿಸಿ, ಹಳೆಯ ಚಿಂತೆಗಳನ್ನೆಲ್ಲ ಒರೆಸಿ ಹಾಕ್ತೀನಿ. ತಂಪಾದ ತ್ವಚೆಗೆ ಭರವಸೆ ಎಂಬ ಫೌಂಡೇಶನ್ ಕ್ರೀಮ್ ಹಾಕಿ, ಬೇಡದ ಕಲೆಗಳನ್ನೆಲ್ಲ ಮುಚ್ಚಿ, ಮೇಲೆ ಪೌಡರ್‌ನ ಹೊದಿಕೆ ಹೊದಿಸಿ, ಹೊಸ ಬಣ್ಣ ಕೊಡ್ತೀನಿ. ನಾಚದಿದ್ದರೂ ಕೆನ್ನೆಯನ್ನು ಗುಲಾಬಿ ಬಣ್ಣಕ್ಕೆ ಕೊಂಡು ಹೋಗಿ, “ಹೀಗೇ ಇರು’ ಅಂತ ಪೂಸಿ ಹೊಡೆದು, ಕೆಲಸ ಮಾಡಿ ಮಾಡಿ ಸುಸ್ತಾಗಿ ಕಪ್ಪಾದ ಕಂಗಳ ಸುತ್ತ ಬಣ್ಣ ಬಳಿದು, ಕಪ್ಪು ತೊಲಗಿಸಿ, “ಫ್ರೆಷ್ ಕಾಣಿಸ್ಬೇಕು’ ಅಂತ ಬುದ್ಧಿ ಹೇಳ್ತೀನಿ. ಆಮೇಲೆ ನಿರಾಸೆಯ ಕಣ್ಣೀರು ಒರೆಸುತ್ತಾ, ಕಣ್ಕಪ್ಪಲ್ಲಿ ಅದನ್ನು ಮರೆಮಾಚಿ, ಕಣ್ರೆಪ್ಪೆಗೆ “ಕನಸು ಕಂಗಳ ಜೋಪಾನ ಮಾಡು’ ಅಂತ ಮಸ್ಕಾರದಿಂದ ಮಸ್ಕಾ ಹೊಡಿತೀನಿ. ನಂತರ ನನಗೆ, ಅಂತ ಕರೆವ ಹುಬ್ಬಿಗೂ ನಿರ್ದಿಷ್ಟ ರೂಪ ಕೊಡುತ್ತಾ, ಒಂದು ಕ್ಷಣ ನನ್ನನ್ನೇ ನಾನು ಕನ್ನಡಿಯಲ್ಲಿ ದಿಟ್ಟಿಸುತ್ತೇನೆ. ಆಗ ನನಗೇ ಅರಿವಿಲ್ಲದೆ ಮೂಡುವ ಮುಗುಳ್ನಗೆಗೆ ಸೋತು, ತುಟಿಗೆ ಬಣ್ಣದ ಉಡುಗೊರೆ ನೀಡುವೆ. ನನಗಾಗಿ ನಾನು ಇಷ್ಟೆಲ್ಲಾ ಮಾಡುವಾಗ ಏನೋ ಒಂಥರಾ ಆತ್ಮವಿಶ್ವಾಸ ಬರುತ್ತೆ. ನನ್ನ ಬಗ್ಗೆ ನನಗೇ ಹೆಮ್ಮೆ ಮೂಡುತ್ತೆ ಕಣೇ’ ಎಂದಿದ್ದಳು! ಅಬ್ಬಬ್ಟಾ, ಇಷ್ಟೆಲ್ಲಾ ವಿಷಯ ಅಡಗಿದೆಯಾ ಈ ಮೇಕಪ್‌ನಲ್ಲಿ? ನಾನೂ ಯಾಕೆ, ಇವನ್ನೆಲ್ಲ ಟ್ರೈ ಮಾಡಬಾರದು ಅನ್ನಿಸಿತು. ಮೊದಲ ಸಂಬಳದಲ್ಲಿ ಕೆಲವು ಅಲಂಕಾರಿಕ ವಸ್ತುಗಳನ್ನು ಖರೀದಿಸಿದೆ. ಸದ್ಯ, ನನ್ನ ಪುಟ್ಟ ಮೇಕಪ್ ಕಿಟ್‌ನಲ್ಲಿ ಫೌಂಡೇಶನ್ ಕ್ರೀಮ್, ನನ್ನ ತ್ವಚೆಗೆ ಹೊಂದುವ ಪೌಡರ್, ನಸುಗೆಂಪು ಲಿಪ್‌ಸ್ಟಿಕ್, ವಾಟರ್‌ಪ್ರೂಫ್ ಐ ಲೈನರ್, ಕಾಡಿಗೆ ಬೆಚ್ಚಗೆ ಕುಳಿತಿವೆ. ದಿನವೂ ಆಫೀಸಿಗೆ ಹೊರಡುವ ಮುನ್ನ, ಅವುಗಳೆಲ್ಲ ಒಂದೊಂದಾಗಿ ಹೊರಗೆ ಬಂದು, ನನ್ನ ಮುಖವನ್ನು ಮುದ್ದಿಸಿ, ಮತ್ತೆ ಒಳ ಸೇರುತ್ತವೆ. ಕೆನ್ನೆ ಕೊಂಚ ಕೆಂಪಾಯಿತೇ, ತುಟಿಯ ರಂಗು ಹೆಚ್ಚೇ ಅಂತ ಗುನುಗುತ್ತಾ, ನನ್ನ ಬಗ್ಗೆ ನಾನೇ ತುಸು ಹೆಚ್ಚು ಕಾಳಜಿ ತೋರಿಸುತ್ತಿದ್ದೇನೆ. ರೆಪ್ಪೆ ಮಿಟುಕಿಸದೆ, ಕೈ ನಡುಗಿಸದೆ ಐ ಲೈನರ್ ಹಚ್ಚುವಾಗಿನ ಧ್ಯಾನಸ್ಥ ಸ್ಥಿತಿ, ಮೊದಲಿಗಿಂತ ಹೆಚ್ಚು ತಾಳ್ಮೆಯನ್ನು ಕಲಿಸಿದೆ. ನಾನಂದ್ರೆ ನಂಗಿಷ್ಟ
ಅಲಂಕಾರ ಮಾಡದೆ ಪೂಜಿಸುವ ದೇವರೇ ಇಲ್ಲ ಅಂದಮೇಲೆ, ನಮ್ಮನ್ನು ನಾವು ಅಲಂಕರಿಸಿಕೊಳ್ಳಲು ಸಂಕೋಚ ಯಾಕೆ? ಮೇಕಪ್‌ನ ಬಣ್ಣ ಚರ್ಮಕ್ಕೆ ಹೊಳಪು ನೀಡಿದರೆ, ಅದು ಕೊಡುವ ಆತ್ಮವಿಶ್ವಾಸ ನಿಮ್ಮ ಕೀಳರಿಮೆಗಳನ್ನು ತೊಲಗಿಸಿ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುತ್ತೆ. ಇನ್ಮುಂದೆ ಯಾರಾದರೂ ನಿಮ್ಮ ಮೇಕಪ್ ಬಗ್ಗೆ ಹಾಸ್ಯ ಮಾಡಿದರೆ- “ನಾನಂದ್ರೆ ನನಗೆ ತುಂಬಾ ಇಷ್ಟ. ಹಾಗಾಗಿ, ನಾನು ಚಂದ ಕಾಣಿಸಬೇಕು ಅಂತ ಸ್ವಲ್ಪ ಜಾಸ್ತಿಯೇ ಅಲಂಕರಿಸಿಕೊಂಡೆ’ ಅನ್ನಿ. ಮುಖವಾಡ ಬೇಡ
ಹಾಗಂತ ಮುಖವಾಡ ಧರಿಸಿ ಅಂತ ಹೇಳ್ತಾ ಇಲ್ಲ. ನಿಮ್ಮ ನಿಜ ಬಣ್ಣ, ಆಕಾರವನ್ನು, ನಿಮ್ಮತನವನ್ನು ಮರೆಮಾಚಲು ಮೇಕಪ್ ಮಾಡುವುದರಲ್ಲಿ ಅರ್ಥವಿಲ್ಲ. ಸೌಂದರ್ಯದ ಬಗ್ಗೆ ಕೀಳರಿಮೆ ಪಟ್ಟು, ಅದನ್ನು ಮರೆಮಾಚಲು ಪ್ರಯತ್ನಪಟ್ಟಾಗ ಅಲಂಕಾರ ಹೋಗಿ ಅವಾಂತರ ಆಗುತ್ತೆ. ಸಹಜ ಸೌಂದರ್ಯಕ್ಕೆ ಚೂರು ಮೆರುಗು ಕೊಡುವುದು ಅಲಂಕಾರವೇ ಹೊರತು, ನೈಜ ಬಣ್ಣವನ್ನು ಹುದುಗಿಸಲು ಕೃತಕತೆಯನ್ನು ಲೇಪಿಸಿಕೊಳ್ಳುವುದಲ್ಲ. ಕ್ರೀಂ ಹಚ್ಚಿದ್ದು ಜಾಸ್ತಿ ಆಯ್ತಾ, ಮುಖ ಬೂದಿ ಬೂದಿ ಥರ ಕಾಣಿಸ್ತಿದೆಯಾ, ತುಟಿಯ ಬಣ್ಣ ಮುಖಕ್ಕೆ ಹೊಂದುತ್ತಿದೆಯಾ, ಅಂತೆಲ್ಲಾ ಪ್ರಶ್ನೆಗಳು ಮೂಡುವಷ್ಟು ಮೇಕಪ್ ಮಾಡಿಕೊಂಡರೆ, ಕೀಳರಿಮೆ ಮತ್ತಷ್ಟು ಹೆಚ್ಚಬಹುದು. ಮೇಕಪ್ ನಮ್ಮ ಬಲವೇ ಹೊರತು, ದೌರ್ಬಲ್ಯವಲ್ಲ ಅನ್ನೋದನ್ನು ಮರೆಯಬೇಡಿ. ಮೇಕಪ್ ಹೊಸತಲ್ಲ
ಅಲಂಕಾರಗೊಂಡ ತನ್ನ ಅಂದ-ಚಂದವನ್ನು ನೋಡುತ್ತಾ ಮೈಮರೆತಿರುವ ಶಿಲಾಬಾಲಿಕೆಯನ್ನು ಬೇಲೂರಿನಲ್ಲಿ ನೋಡಬಹುದು. ಆ ಶಿಲಾಬಾಲಿಕೆಗೆ “ದರ್ಪಣ ಸುಂದರಿ’ ಎಂದೇ ಹೆಸರಿಟ್ಟಿದ್ದಾರೆ. ಮಹಿಳೆಯರಿಗೆ ಅಲಂಕಾರದ ಮೇಲಿರುವ ಮೋಹ ಇಂದು ನಿನ್ನೆಯ ವಿಷಯವಲ್ಲ ಎಂಬುದನ್ನು ಹನ್ನೆರಡನೆ ಶತಮಾನದ ಆ ಶಿಲ್ಪವೇ ಸಾರಿ ಹೇಳುತ್ತದೆ. ಹಿಂದಿನ ಕಾಲದ ಮಹಾರಾಣಿಯರೇನು ಕಡಿಮೆಯೇ? ಅವರನ್ನು ಅಲಂಕರಿಸಲೆಂದೇ ಅಂತಃಪುರದಲ್ಲಿ ಪ್ರತ್ಯೇಕ ದಾಸಿಯರು ಇರುತ್ತಿದ್ದುದು ನಿಮಗೂ ಗೊತ್ತೇ ಇದೆ. – ಸಹನಾ ಕಾರಂತ್