“ಹೆಂಗೂ ವರ್ಕ್ ಫ್ರಮ್ ಹೋಂ ಅಂತ ಮನೆಗೆ ಬಂದಿದ್ದೀಯಲ್ಲ; ಇನ್ಮುಂದೆ ಇಲ್ಲಿಂದಾನೆ ಕೆಲಸ ಮಾಡು. ನಿನ್ನಂಗೇ ಮನೆಯಿಂದ ಕೆಲಸ ಮಾಡೋ ಯಾರಾದ್ರೂ ಹುಡುಗನ್ನ ನೋಡಿ ಮದುವೆ ಮಾಡೋಣ. ವಾಪಸ್ ಬೆಂಗಳೂರಿಗೆ ಹೋಗೋದೇ ಬೇಡ…’ ಮಾರ್ಚ್‌ನಲ್ಲಿ ಮನೆಗೆ ಹೋದಾಗಿನಿಂದ, ಅಮ್ಮ ಇದನ್ನು ಹೇಳ್ತಾನೇ ಇದ್ದಾಳೆ. ಅಪ್ಪನ ಬಾಯಿಂದಲೂ ಇದೇ ಮಾತು ಬರುವವರೆಗೂ, ನಾನದನ್ನು ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ. “ನೋಡು ಪುಟ್ಟಿ, ಮೂರು ವರ್ಷ ಕೆಲಸ ಮಾಡಿದ್ದೀಯಲ್ಲ; ಇನ್ನು ಸಾಕು. ಹೆಂಗೂ ಈ ವರ್ಷ ಮದುವೆ ಮಾಡಬೇಕು.
ಕೆಲಸ ಬಿಟ್ಟು, ಒಂದಾರು ತಿಂಗಳು ಆರಾಮಾಗಿ ಮನೇಲಿರು…’ ಅಪ್ಪ ಹೀಗೆಂದಾಗ ದಿಗಿ ಲಾಯ್ತು. ಬೆಂಗಳೂರು ಬಿಟ್ಟು ಬರುವುದು, ನನ್ನಿಂದ ಆಗದ ಮಾತು. ನಾನು ಹುಟ್ಟಿ, ಬೆಳೆದಿದ್ದು ಸಣ್ಣ ಪಟ್ಟಣ ದಲ್ಲಿಯೇ ಇರಬಹುದು. ಆದರೆ, ಈಗ ಬೆಂಗಳೂರೇ ನನ್ನ ಮನೆ. ಹೃದಯಕ್ಕೆ ಹತ್ತಿರ ಅನ್ನಿಸುವ ಜಾಗ ಅದು. ಹಾರುವ ಕನಸು ಕಂಡವಳಿಗೆ ರೆಕ್ಕೆ ಪುಕ್ಕ ಹಚ್ಚಿದ, ಕಂಗಳಲ್ಲಿ ಬಣ್ಣ ಬಣ್ಣದ ಕನಸು ತುಂಬಿದ, ನಗರ ಅದು. ಉಸಿರುಗಟ್ಟಿಸುವಷ್ಟು ಒತ್ತೂತ್ತಾದ ಮನೆಗಳ, ಕಿಕ್ಕಿರಿದು ತುಂಬಿದ ಜನಗಳ, ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲಿಸುವ ಟ್ರಾಫಿಕ್ ಬಗ್ಗೆ ಅದೆಷ್ಟೇ ದೂರಿದರೂ, ಬೆಂಗಳೂರು ನೀಡಿದ ಸ್ವಾತಂತ್ರಕ್ಕೆ ಬೆಲೆ ಕಟ್ಟಲು ಆಗದು.
ಸೈಕಲ್ ಹೊಡೆಯುವ ಹುಡುಗಿಯನ್ನೇ ಅಚ್ಚರಿಯಿಂದ ನೋಡುವ ನನ್ನೂರಂಥ ಊರಿಗೂ, ಮೆಟ್ರೋ ರೈಲನ್ನೂ ಹುಡುಗಿಯರೇ ಓಡಿಸುವ ಆ ನಗರಕ್ಕೂ ತುಂಬಾ ವ್ಯತ್ಯಾಸವಿದೆ. ಇಲ್ಲಿ ಅಂಗಡಿಗೆ ಹೋಗುವಾಗಲೂ ತಮ್ಮನನ್ನೋ, ಅಕ್ಕನನ್ನೋ ಜೊತೆಗೆ ಕರೆದೊಯ್ಯಬೇಕು. ಅಲ್ಲಿ ಬಿಂದಾಸಾಗಿ, ಒಬ್ಬೊಬ್ಬಳೇ ಹೋಟೆಲೂ ಹೋಗಬಹುದು, ಸಿನಿಮಾನೂ ನೋಡಬಹುದು. ಇಲ್ಲಿ, ಕತ್ತಲಾಗುವುದರ ಒಳಗೆ ಮನೆ ಸೇರಬೇಕು. ಆದರೆ ಆ ಊರಿಗೆ ಹಗಲು ರಾತ್ರಿಗಳ ಪರಿವೇ ಇಲ್ಲ. ಇಲ್ಲಿ ಪ್ರತಿ ಬಾರಿ ಬಂದಾಗಲೂ- “ಸ್ವಲ್ಪ ದಪ್ಪ ಆಗಿದ್ದೀ ಅನ್ಸುತ್ತೆ’,
“ಎಷ್ಟು ಕೊಡ್ತಾರೆ ನಿಮ್ಗೆಲ್ಲ ಸ್ಯಾಲರಿ?’, “ಬೆಂಗ್ಳೂರಿಗೆ ಹೋಗಿ ಭಾರೀ ಬದಲಾಗಿದ್ದೀ’… ಅಂತೆಲ್ಲ ಹತ್ತು ಜನರ ಹತ್ತು ಪ್ರಶ್ನೆಗಳಿಗೆ, ಸೌಜನ್ಯದಿಂದ ಉತ್ತರಿಸಬೇಕಾಗುತ್ತೆ. ಆದರೆ ಆ ಊರಿನಲ್ಲಿ, ಜನರು ಮತ್ತೂಬ್ಬರ ಬದುಕಿನಲ್ಲಿ ಮೂಗು ತೂರಿಸುವುದಿಲ್ಲ. ಹತ್ತಿರ ಬಂದು ಅಸಹನೀಯ ಅನ್ನಿಸುವವರಿಗಿಂತ, ಅಕ್ಕಪಕ್ಕವೇ ಬದುಕುತ್ತಿದ್ದರೂ ಅಪರಿಚಿತರಂತೆ ಇರುವ ಜನರೇ ಎಷ್ಟೋ ಲು ಅನ್ನಿಸುವುದಿಲ್ಲವೇ? “ಹುಡ್ಗಿàರಿಗೆಲ್ಲ ಎಂಜಿನಿಯರ್ ನೌಕರಿ ಸಿಗುತ್ತಾ?’ ಅಂತ ತಾತ್ಸಾರದಿಂದ ನೋಡುವ ಇಲ್ಲಿಗೂ, “ಯು ಹ್ಯಾವ್ ಡನ್ ಎ ಗ್ರೇಟ್ ಜಾಬ್.
ವಿ ವಿಲ್ ಕನ್ಸಿಡರ್ ಯುವರ್ ನೇಮ್ ಫಾರ್ ಆನ್ ಸೈಟ್ ಪ್ರಾಜೆಕ್ಟ್’ ಅಂತ ಬೆನ್ನು ತಟ್ಟುವ ಆ ಊರನ್ನು ನಾನು ಇಷ್ಟಪಟ್ಟರೆ ಅದರಲ್ಲಿ ತಪ್ಪೇನಿದೆ? “ಕಾಲೇಜಲ್ಲಿ ಹುಡ್ಗರ ಜೊತೆ ಎಲ್ಲಾ ಮಾತಾಡಬೇಡ. ಕ್ಲಾಸ್ ಮುಗಿಸಿಕೊಂಡು ಸೀದಾ ಮನೆಗೇ ಬರಬೇಕು’ ಅನ್ನುವ ಅಮ್ಮನ ಕಾಳಜಿ, “ಬಸ್‌ಸ್ಟಾಪ್ ಹತ್ರ ಅದ್ಯಾರ ಜೊತೆ ಮಾತಾಡ್ತಿದ್ದೆ ಅವತ್ತು?’ ಅಂತ ವಿಚಾರಣೆಗೆ ಬರುವ ಪಕ್ಕದ ಮನೆ ಆಂಟಿಯ ಕೆಟ್ಟ ಕುತೂಹಲ, ಬೆಂಗಳೂರಿಗಿಲ್ಲ. ಜಾತಿ ಭೇದಗಳಿಲ್ಲದ, ಲಿಂಗ ತಾರತಮ್ಯ ಮಾಡದ ಊರು ಬೆಂಗಳೂರು.
ಪುಟ್ಟ ಊರಿನಿಂದ ಬಂದ, ವಾಹನಗಳಿಗೆ ಹೆದರುತ್ತ ಹೆದರುತ್ತ ರಸ್ತೆ ದಾಟುತ್ತಿದ್ದ ನನ್ನಂಥ ಹೆದರುಪುಕ್ಕಿಯನ್ನು, ಗಟ್ಟಿಗಿತ್ತಿಯಾಗಿಸಿದ ನಗರವಿದು. ಈಗ, ಬೆಂಗಳೂರನ್ನು ಬಿಟ್ಟು ಬಾ ಅಂದರೆ? ಮೊನ್ನೆಮೊನ್ನೆಯವರೆಗೂ, ನಿಂಗೆ ಅಮೆರಿಕದ ಹುಡುಗನ್ನ ಹುಡುಕ್ತೀನಿ ಅಂತಿದ್ದ ಅಪ್ಪ, “ಎಲ್ಲಾ ಕಡೆ ಕೊರೊನಾ. ಅಮೆರಿಕವೂ ಬೇಡ, ಬೆಂಗಳೂರೂ ಬೇಡ. ಇಲ್ಲೇ ಹತ್ತಿರದ ಊರಿನ ಹುಡುಗನನ್ನೇ ಹುಡುಕೋಣ’ ಅಂದರೆ? ಬೆಂಗಳೂರು ಕೇವಲ ಊರಷ್ಟೇ ಅಲ್ಲ. ಅದು ಮಾಯೆ. ಅವಕಾಶಗಳ ಆಗರ. ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡುವ ಜಾಗ. ಹೇಗೆ ಬಿಟ್ಟು ಬರಲಿ ಈ ಊರನ್ನು? ಈ ಊರಿನ ಸೆಳೆತವನ್ನು?
* ದರ್ಶಿನಿ ಆರ್.