Advertisement

ನಿನ್ನ ಹೃದಯದಲ್ಲಿ ನನಗಿಷ್ಟು ಜಾಗವಿರಲಿ

03:50 AM Feb 28, 2017 | Harsha Rao |

ಆಫೀಸಿನಲ್ಲಿದ್ದಾಗ ಅವನಿಗೆ ಗೊತ್ತಾಗದ ಹಾಗೆ ಅವನನ್ನೇ ಕದ್ದು ಕದ್ದು ನೋಡುತ್ತಿದ್ದೆ. ಅವನಿಲ್ಲದ ವೇಳೆ ಹುಡುಕಾಟದಲ್ಲಿರುತ್ತಿದ್ದೆ. ಅವನಿಂದ ದೂರವಿರಲು ಸಾಧ್ಯವಾಗದೆ ಗೆಳತಿಯಿಂದ ಅವನ ನಂಬರ್‌ ಪಡೆದುಕೊಂಡೆ. ಅದೇ ರಾತ್ರಿ ಗೆಳತಿ ನನ್ನ ಮೊಬೈಲ್‌ನಿಂದ ಅವನಿಗೆ ಮೆಸೇಜ್‌ ಮಾಡಿದಳು. ನಾನೇ ಮೆಸೇಜ್‌ ಮಾಡುತ್ತಿದ್ದೇನೆಂದು ಅವನು ತಿಳಿದುಕೊಂಡಿದ್ದ. 

Advertisement

ಮುಗ್ಧ ಪ್ರೀತಿ, ಸದಾ ನಗುವಿನಿಂದ ಕೂಡಿದ ಅವನ ಮುಖ ನೋಡಲೆಷ್ಟು ಚೆನ್ನ? ಗಾಂಭೀರ್ಯತೆಯ ಗಾಳಿ ಅವನ ಕಡೆ ಸುಳಿದಿದ್ದೇ ಕಂಡಿಲ್ಲ. ಎಲ್ಲರನ್ನೂ ನಗಿಸುತ್ತಾ, ತಾನೂ ನಗುತ್ತಾ ಅಮ್ಮನ ತೋಳಿನಲ್ಲಿ ಬೆಳೆದವ. ಕಂಡೂ ಕಂಡರಿಯದ ತುಂಟಾಟ ಅವನದು. ಮುಂಜಾನೆಯ ಮುಸುಕಿನಲ್ಲಿ ಬೀಳುವ ಮಂಜಿನಂತೆ ಅವನು. ಜಿಟಿ ಜಿಟಿ ಮಳೆಯಲ್ಲೂ ಹೊಂಗನಸು ತುಂಬಿ ನಲಿದಾಡುವ ಪರಿ ಆಕಾಶಕ್ಕೂ ಮಿಗಿಲು. ಅವನ ಆ ಕಳ್ಳ ನೋಟ, ಗುಂಗುರು ಕೂದಲು, ಮುದ್ದಾದ ಮಾತುಗಳು, ಎಲ್ಲರ ಮನಸೆಳೆಯುವ ಆಕರ್ಷಕ ನೋಟ. ನೋಡಿದರೆ ನೋಡುತ್ತಲೇ ಇರಬೇಕು ಎನ್ನುವ ಚಂಚಲ ಮನಸ್ಸು ನನ್ನದು.

ಮೊದಲ ದಿನ ಆಫೀಸಿನಲ್ಲಿ ಕಂಡ ಆತ ನನಗೆ ಏನೂ ಅನ್ನಿಸಲಿಲ್ಲ. ಬರೀ ನಗು, ಮಾತು. ಅಷ್ಟಕ್ಕೇ ಸೀಮಿತ ಎಂದೆನಿಸಿಕೊಂಡಿದ್ದೆ. ದಿನ ಕಳೆದ ಹಾಗೆ ಸದ್ದಿಲ್ಲದೇ ನನ್ನಲ್ಲೇ ಮೂಡಿದ ಕನಸು ಪ್ರೀತಿಯಾಗಿ ಬದಲಾಯಿತು. “ಅವನು ಸಿಂಗಲ್‌ ಕಣೇ’ ಎಂದು ಗೆಳತಿ ಹೇಳಿದ ಮಾತುಗಳು ಕಿವಿಗೆ ಇನ್ನಷ್ಟು ಇಂಪನ್ನು ತಂದಿಕ್ಕುತ್ತಿದ್ದವು. ಮನದಾಳದ ಮಾತನ್ನು ಮನಬಿಚ್ಚಿ ಹೇಳಲಾರದೆ, ಅವನಿಗೋಸ್ಕರ ಹಂಬಲಿಸುತ್ತಿದ್ದೆ. ಪ್ರತೀ ದಿನ ಅವನ ಬಗ್ಗೆ ಯೋಚಿಸಿ ಯೋಚಿಸಿ ದಿನ ಕಳೆಯುತ್ತಿದ್ದೆ. ಅವನು ನನ್ನನ್ನು ನೋಡಿ ನಕ್ಕರೆ ಸ್ವರ್ಗಕ್ಕೆ ಎರಡೇ ಹೆಜ್ಜೆ ಅಂದುಕೊಂಡು ಸಂಭ್ರಮಿಸುತ್ತಿದ್ದೆ. 

ನನಗ್ಯಾರೂ ಅಲ್ಲದ ಇವನನ್ನು ಯಾಕೆ ಇಷ್ಟು ಇಷ್ಟಪಟ್ಟೆ? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಅವನು ಯಾರೋ? ನಾನು ಯಾರೋ? ಎಲ್ಲೋ ಹುಟ್ಟಿದವರು, ಆದರೆ ಈಗ… ದೇವರು ಇದ್ದಾನೆ ಎಂದು ಎಲ್ಲೋ ಒಂದು ಬಾರಿ ಅವನಿಗೆ ಥ್ಯಾಂಕ್ಸ್‌ ಹೇಳಿದ್ದೆ. ಅವನು ನನಗೆ ಸಿಕ್ಕೇ ಸಿಗುತ್ತಾನೆ. ಸಿಗಲೇಬೇಕು. ಇದೇ ಹಠ ನನ್ನದಾಗಿತ್ತು. ಅದೆಷ್ಟೋ ದೇವರಿಗೆ ಹರಕೆ ಹೇಳಿದ್ದೆ. ಜಾತಿ ಬೇರೆ, ಆದರೂ ಅವನು ಬೇಕೇ ಬೇಕು. ಮನೆಯಲ್ಲಿ ಹೇಗಾದರೂ ಒಪ್ಪಿಸಬಹುದು. ಅವನು ಒಪ್ಪಿದರೆ ಸಾಕು ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಎಷ್ಟೋ ರಾತ್ರಿ ನಿದ್ದೆಯಿಲ್ಲದೇ ಮುಂಜಾನೆವರೆಗೂ ಅವನ ಬಗ್ಗೆಯೇ ಯೋಚಿಸುತ್ತಿದ್ದೆ. ನನ್ನ ಮುಂದಿನ ನಡೆಯಲ್ಲಿ ಅವನು ಒಂದಾಗಿರುತ್ತಾನೆ, ನನ್ನ ಜೊತೆಗಿರುತ್ತಾನೆ. ಅದೇ ಹಂಬಲ.

ಆಫೀಸಿನಲ್ಲಿದ್ದಾಗ ಅವನಿಗೆ ಗೊತ್ತಾಗದ ಹಾಗೆ ಅವನನ್ನೇ ಕದ್ದು ಕದ್ದು ನೋಡುತ್ತಿದ್ದೆ. ಅವನಿಲ್ಲದ ವೇಳೆ ಹುಡುಕಾಟದಲ್ಲಿರುತ್ತಿದ್ದೆ. ಅವನಿಂದ ದೂರವಿರಲು ಸಾಧ್ಯವಾಗದೆ ಗೆಳತಿಯಿಂದ ಅವನ ನಂಬರ್‌ ಪಡೆದುಕೊಂಡೆ. ಅದೇ ರಾತ್ರಿ ಗೆಳತಿ ನನ್ನ ಮೊಬೈಲ್‌ನಿಂದ ಅವನಿಗೆ ಮೆಸೇಜ್‌ ಮಾಡಿದಳು. ನಾನೇ ಮೆಸೇಜ್‌ ಮಾಡುತ್ತಿದ್ದೇನೆಂದು ಅವನು ತಿಳಿದುಕೊಂಡಿದ್ದ. ಆದರೆ ನನ್ನ ಮನಸ್ಸಿನ ಭಾವನೆಗಳನ್ನು ಗೆಳತಿ ಅವನಿಗೆ ವ್ಯಕ್ತ ಪಡಿಸಿದ್ದಳು. ಆದರೆ ಆ ಕಡೆಯಿಂದ ಅಂತಹ ಪ್ರತಿಕ್ರಿಯೆಯೇನೂ ಬರುತ್ತಿರಲಿಲ್ಲ. ಗುಡ್‌ ಮಾರ್ನಿಂಗ್‌, ಊಟ ಆಯ್ತಾ? ಗುಡ್‌ ನೈಟ್‌. ಇದಷ್ಟೇ ನನಗೆ ಪ್ರಪಂಚವಾಗಿತ್ತು.  

Advertisement

ಅದೊಂದು ದಿನ ಧೈರ್ಯ ಮಾಡಿ ನನ್ನ ಪ್ರೀತಿಯನ್ನು ಅವನ ಬಳಿ ವ್ಯಕ್ತಪಡಿಸಿದ್ದೆ. ಅವನಿಂದ ಬರುವ ಉತ್ತರಗಳ ಬಗ್ಗೆ ಯೋಚಿಸುತ್ತಾ ಹಲವಾರು ಕನಸುಗಳ ಗೋಪುರವನ್ನೇ ಕಟ್ಟಿಕೊಂಡಿದ್ದ ನನಗೆ ಸಿಕ್ಕಿದ್ದು, ನಿರಾಸೆ. ಆಕಾಶ ಕಳಚಿ ತಲೆಯ ಮೇಲೆ ಬಿದ್ದ ಪರಿಸ್ಥಿತಿ ನನ್ನದು. ಯಾರಿಗೂ ಹೇಳಲಾಗದೆ ನನ್ನೊಳಗೆ ಚಡಪಡಿಸುತ್ತಿದ್ದೆ. ಬಿಕ್ಕಿ ಬಿಕ್ಕಿ ಅತ್ತೆ. ನನ್ನ ಗೋಳನ್ನು ಕೇಳುವವರು ಯಾರೂ ಇಲ್ಲ. ಪ್ರತೀ ದಿನ ಅಮ್ಮನಿಗೆ ಫೋನ್‌ ಮಾಡುತ್ತಿದ್ದ ನನಗೆ ಅಂದೇಕೋ ಯಾರೂ ಬೇಡವೆನಿಸಿತ್ತು. ಈ ಪ್ರಪಂಚದಲ್ಲಿ ನಾನು ಒಬ್ಬಂಟಿ. ನಂಗಾಗಿ ಯಾರೂ ಇಲ್ಲ. ಅವನಿಗೂ ನಾನು ಬೇಡವಾದೆ. ಇಷ್ಟಾದ ಮೇಲೆ ಬದುಕಿ ಪ್ರಯೋಜನವೇನು? ಎಲ್ಲಾದರೂ ಹೋಗಿ ಸಾಯೋಣ ಎಂದೆನಿಸಿತ್ತು. ಸಾಯೋದು ಹೇಡಿಗಳ ಲಕ್ಷಣ, ನಾನು ಹೇಡಿಯಲ್ಲ. ಅವನ ಪ್ರೀತಿಗೋಸ್ಕರ, ಅವನಿಗೋಸ್ಕರ ಜೀವನ ಪೂರ್ತಿ ಕಾಯುತ್ತೇನೆ ಎಂಬ ಭಾವನೆಯನ್ನು ನನ್ನಲ್ಲೇ ಮೂಡಿಸಿಕೊಂಡೆ.  

ಅಷ್ಟಕ್ಕೂ ನನ್ನಲ್ಲಿ ಮೂಡಿದ ಪ್ರಶ್ನೆ: ಅವನ ಪ್ರೇಯಸಿ ಯಾರು? ಅವನು ಒಬ್ಬಂಟಿ ಎಂದು ಯಾಕೆ ಸುಳ್ಳು ಹೇಳಿದ. ಅವನು ಪ್ರೀತಿಸಿ ವಂಚಿಸುವವನೇ? ಎಂಬ ಯೋಚನೆಗಳು ಮನದಲ್ಲಿ ಸುಳಿದಾಡಿದವು. ಅವನ ಪ್ರೀತಿಯ ವಿಚಾರ ಯಾರಲ್ಲೂ ಹೇಳಿರಲಿಲ್ಲ ಎಂದು ಆಮೇಲೆ ತಿಳಿದ ಸಂಗತಿ. ನಿಜಕ್ಕೂ ಅವನು ನನ್ನಲ್ಲಿ ದೈವಸ್ವರೂಪಿಯಾಗಿದ್ದ. ಅವನ ಹಿನ್ನೆಲೆ ತಿಳಿಯದೆ ನಾನು ದುಡುಕಿದೆ ಎಂದು ಅನ್ನಿಸಿತು. ಆದರೂ, ಪ್ರೀತಿ ಪ್ರೀತಿನೇ, ಪ್ರೀತಿಯನ್ನು ಕಿತ್ತೆಸೆಯಲು ಅದು ಧರಿಸುವ ವಸ್ತುವಲ್ಲ. ಅವನಿಗೂ ಇದೇ ಪರಿಸ್ಥಿತಿ ಇರಬಹುದು.  

ಆಫೀಸಿನ ಕೊನೆಯ ದಿನ. ಅವನ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಾರದೆ ಗುಡ್‌ ಬೈ ಎಂದಿದ್ದೆ. ಅವನು ನನ್ನ ಕೆನ್ನೆ ತಟ್ಟಿದ್ದ. ನನಗೆ ಅಷ್ಟೇ ಸಾಕು. ಅವನಿಗಾಗೇ ಬದುಕುತ್ತೇನೆ ಎಂದುಕೊಂಡೆ. ಮರುದಿನ ನಾನು ಮನೆಗೆ ಹೊರಡಲು ಸಿದ್ಧಳಾದೆ. ಅಂದೇ ಮುಂಜಾನೆ ಅವನು ಅವನ ಪ್ರೇಯಸಿಯ ಜೊತೆ ಕಣ್ಣೆದುರಲ್ಲೇ ನಿಂತಿದ್ದ. ಏನೂ ಹೇಳುವ ಹಾಗಿಲ್ಲ. ಅವನು ನನ್ನವನು, ನನಗೇ ಸೇರಿದವನು ಎಂಬಂತೆ ಅವನ ಪಕ್ಕದಲ್ಲೇ ಕುಳಿತಿದ್ದಳು. ಅದು ನಾನಿರಬೇಕಾದ ಜಾಗ ಎಂದು ಒಮ್ಮೆ ಅನ್ನಿಸಿದರೂ ಕಾಲ ಎಲ್ಲವನ್ನೂ ಮೀರಿ ಮುಂದೆ ಹೋಗಿತ್ತು. ಅಳಲಾರದೇ ದುಃಖವನ್ನು ಸಹಿಸಿಕೊಂಡೆ. ಎರಡು ಮಾತು, ಒಂದು ಸೆಲ್ಫಿ  ಕ್ಲಿಕ್ಕಿಸಿ ಅವನು ಹೊರಟೇ ಹೋದ. ಆದರೆ, ನನ್ನೊಳಗಿರುವ ಭಾವನೆಗಳಿಗೆ ಬೆಲೆಯೇ ಇಲ್ಲದಾಯಿತು.      

ನೀನೆಲ್ಲೇ ಇರು, ನನ್ನ ನೆನಪಿರಲಿ… ನಿನ್ನ ಪುಟ್ಟ ಹೃದಯದಲ್ಲಿ ನನಗೊಂದು ಚಿಕ್ಕ ಜಾಗವಿರಲಿ. ನಿನ್ನ ನೆನಪಲ್ಲೇ ನಿನಗಾಗಿ ಸದಾ ಕಾಯುತ್ತಿರುತ್ತೇನೆ.               
                                      
ಇತೀ ನಿನ್ನ ಪ್ರೀತಿಯ ಗೆಳತಿ

 – ವೇದಾವತಿ ಗೌಡ, ಉಜಿರೆ  

Advertisement

Udayavani is now on Telegram. Click here to join our channel and stay updated with the latest news.

Next