ಬೆಂಗಳೂರು: “ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಹೇಳಿದ್ದಾರೆ. ಸೋಮವಾರ ಉಪ ಚುನಾವಣೆ ಸಂಬಂಧ ಪಕ್ಷದ ನಾಯಕರ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಮಂಡ್ಯ, ತುಮಕೂರು ಹಾಗೂ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ದರಾಮಯ್ಯ ಹಾಗೂ ಸ್ಥಳೀಯ ನಾಯಕರೇ ಕಾರಣ. ಇವರ ನಾಟಕಗಳು ನನಗೆ ತಿಳಿದಿದೆ’ ಎಂದು ಹೇಳಿದರು.
ಕಾಂಗ್ರೆಸ್ ವರಿಷ್ಠರ ಬಗ್ಗೆ ನಾನು ಯಾವುದೇ ದೋಷ ಹೇಳುವುದಿಲ್ಲ. ಆದರೆ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ಒಳಗೊಂದು ಹೊರಗೊಂದು ಮಾಡಿದರು. ಹೀಗಾಗಿಯೇ ಉಪಚುನಾವಣೆಯಲ್ಲಿ ಯಾರ ಸಹವಾಸವಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇವೆ. ಉಪಚುನಾವಣೆಯಲ್ಲಿ ನಮ್ಮ ಕುಟುಂಬದ ಯಾವ ಸದಸ್ಯರೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉಪಚುನಾವಣೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚಿನ ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ಆರಂಭವಾಗಿರುವುದು ಆಪರೇಷನ್ ಕಮಲದ 2ನೇ ಆವೃತ್ತಿ. 2008ರಲ್ಲಿ ಒಮ್ಮೆ ಆಗಿತ್ತು. ಈಗ 2019ರಲ್ಲಿ ಮತ್ತೆ ನಡೆದಿದೆ. ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ ಎಂದು ತಿಳಿಸಿದರು. ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ನಡೆಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ ಎಂದರು.
ಬಿಜೆಪಿ ಕೆಲಸ ಮಾಡುತ್ತಿಲ್ಲ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರ ಹಾಗೂ ಪ್ರವಾಹ ಪರಿಸ್ಥಿತಿ ಸರಿಯಾಗಿ ನಿಭಾಯಿಸುತ್ತಿಲ್ಲ. ಸಂಪುಟದಲ್ಲಿರುವವರು ಕೇವಲ ಪ್ರಚಾರಕ್ಕೆ ಹಾತೊರೆಯುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತಂದಿ¨ªೆ. ಸಾಲಮನ್ನಾ, ಋಣಮುಕ್ತ ಕಾಯ್ದೆ ಜಾರಿಗೆ ತಂದಿದ್ದೆ, ಆದ್ರೆ ಬಿಜೆಪಿ ಋಣಮುಕ್ತ ಕಾಯ್ದೆ ಜಾರಿ ತರುತ್ತಿಲ್ಲ. ಬಡವರಿಂದ ಬಡ್ಡಿ ತೆಗೆದುಕೊಳ್ಳುವವರಿಗೆ ಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ ಎಂದು ದೂರಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡಲು ಬಡವರ ಬಂಧು ಕಾರ್ಯಕ್ರಮ ಜಾರಿಗೆ ತರಲಾಯಿತು ಆದರೆ, ಬಿಜೆಪಿ ಸರ್ಕಾರ ಅದನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದು ಆಪಾದಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಗೊಂದಲವಿದೆ. ಜೆಡಿಎಸ್ ಎರಡೂ ಸರ್ಕಾರಗಳ ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸಲಿದೆ ಎಂದು ಹೇಳಿದರು.
ಮುಖಂಡರಿಗೆ ಎಚ್‌ಡಿಡಿ ಸೂಚನೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೋಮವಾರ ಪಕ್ಷದ ಕಚೇರಿಯಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಸಿದರು. ಶಿವಾಜಿನಗರ ಕ್ಷೇತ್ರ ಸೇರಿ ಉಪ ಚುನಾವಣೆಯಲ್ಲಿ ಆಲ್ಪಸಂಖ್ಯಾತರ ಸಮುದಾಯದ ನಾಯಕರನ್ನು ಸಂಘಟಿಸಿ ಪಕ್ಷದ ಪರ ಕೆಲಸ ಮಾಡುವಂತೆ ಮುಖಂಡರಿಗೆ ಸೂಚನೆ ನೀಡಿದರು.
ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಕಾರಣ. ಅದು ಕಾಂಗ್ರೆಸ್ ಸೋಲು ಅಂತ ನಾನು ಹೇಳುವುದಿಲ್ಲ. ಸಿದ್ದರಾಮಯ್ಯನವರು ಸ್ವಾಭಿಮಾನದ ಭಾಷಣ ಮಾಡಿದ್ದಾರೆ. ಆದರೆ, ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ಸಿದ್ದರಾಮಯ್ಯನವರ ಸ್ವಾಭಿಮಾನ ಎಲ್ಲಿ ಹೋಗಿದೆ? ಇವರ ನಾಟಕ ಎಲ್ಲ ನನಗೆ ಗೊತ್ತಿದೆ. ಮಂಡ್ಯದಲ್ಲಿ ಬಿಜೆಪಿ ಜತೆ ಸೇರಿಕೊಂಡು ಏನೇನು ಮಾಡ್ತಿದ್ದಾರೆ ಎಲ್ಲವೂ ನನಗೆ ಗೊತ್ತಿದೆ.
-ಎಚ್.ಡಿ .ಕುಮಾರಸ್ವಾಮಿ, ಮಾಜಿ ಸಿಎಂ