Advertisement

ನಾನು ಗಂಡ, ಅವಳು ಗುಂಡು

05:07 PM Apr 18, 2018 | |

ಪ್ರತಿ ಯಶಸ್ವೀ ಪುರುಷನ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ ಅನ್ನುವುದು ಲೋಕಾರೂಢಿ. ಆದರೆ, ಈ ಮಾತು ಇಲ್ಲಿ ಉಲ್ಟಾ ಆಗಿದೆ. ಪತ್ನಿಯ ಪ್ರತಿಯೊಂದು ಯಶಸ್ಸಿನ ಹಿಂದೆ ಈ “ಪತಿರಾಯ’ನ ಶ್ರಮವಿದೆ. ಪ್ರೀತಿಯಿದೆ. ಒತ್ತಾಸೆಯಿದೆ. ಹಾರೈಕೆಯಿದೆ. ಈತ, ಹೆಂಡತಿಯ ಸಾಧನೆಗೆ ಸದಾ ಬೆನ್ನುಲುಬಾಗಿ ಇದ್ದು, ಆಕೆ ಪ್ರತಿ ಬಾರಿ ಸಾಧನೆಯ ಮೇಲೆ ಸಾಧನೆ ಮಾಡುತ್ತಾ, ಪದಕಗಳ ಮೇಲೆ ಪದಕ ಪಡೆಯುತ್ತಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ನೆರವಾಗಿದ್ದಾರೆ. ಇವರೇ ಓಲರ್‌ ಕೋಮ್‌, ಬಾಕ್ಸರ್‌ ಮೇರಿ ಕೋಮ್‌ರ ಪತಿ. ಇತ್ತೀಚೆಗಷ್ಟೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದು “ಚಿನ್ನ’ದ ನಗು ಸೂಸುತ್ತಿರುವ ಮೇರಿ ಕೋಮ್‌ ಬಗ್ಗೆ ಅವರಾಡಿದ ಮಾತುಗಳು ಇಲ್ಲಿವೆ… 

Advertisement

ನಾನು ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಓದಿಕೊಳ್ಳುತ್ತಿದ್ದೆ. ಪರೀಕ್ಷೆ ಬರೆದು ಸರ್ಕಾರಿ ನೌಕರಿ ಪಡೆಯುವ ಕನಸಿತ್ತು. ಜೊತೆಗೆ ಮಣಿಪುರ ಹಾಗೂ ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷನೂ ಆಗಿದ್ದೆ. ಆ ಸಮಯದಲ್ಲಿ ಮೇರಿ, ನ್ಯಾಷನಲ್‌ ಗೇಮ್ಸ್‌ಗಾಗಿ ದೆಹಲಿಗೆ ಬಂದಿದ್ದಳು. ನಾವಿಬ್ಬರೂ ಒಂದೇ ಜನಾಂಗಕ್ಕೆ, ರಾಜ್ಯಕ್ಕೆ ಸೇರಿದವರಾಗಿದ್ದೆವು. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ನಾನು ಅವಳನ್ನು ಭೇಟಿ ಮಾಡೋಕೆ ಹೋಗಿದ್ದೆ. ದೆಹಲಿ, ಮೇರಿಗೆ ಹೊಸ ಜಾಗ. ಏನಾದರೂ ಸಹಾಯ ಬೇಕಾದ್ರೆ ಫೋನ್‌ ಮಾಡಿ ಅಂತ ನನ್ನ ನಂಬರ್‌ ಕೊಟ್ಟಿದ್ದೆ.

ಹೀಗೆ ನಮ್ಮ ಪರಿಚಯವಾಯ್ತು. ಮೇರಿ ಏನೇ ಸಹಾಯ ಬೇಕಾದ್ರೂ ನನಗೆ ಕಾಲ್‌ ಮಾಡುತ್ತಿದ್ದಳು. ಅವಳಿಗೆ ಸಹಾಯ ಮಾಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಯಾಕಂದ್ರೆ, ಮೇರಿ ಸಣ್ಣ ಹಳ್ಳಿಯಿಂದ ಬಂದವಳು. ಅವಳ ಕಷ್ಟಗಳು, ಏಕಾಂಗಿ ಹೋರಾಟ, ಅವಳ ಛಲ, ಹೆತ್ತವರ ಅಸಹಕಾರ… ಹೀಗೆ ಆರ್ಥಿಕವಾಗಿ, ಮಾನಸಿಕವಾ, ಯಾರೂ ಅವಳ ಜೊತೆಗೆ ಇರಲಿಲ್ಲ. ಏಕಾಂಗಿ ಹುಡುಗಿ, ಅದರಲ್ಲೂ ಬಾಕ್ಸಿಂಗ್‌ನಂಥ ದೊಡ್ಡ ಕನಸು ಕಂಡ ಆಕೆಗೆ ಪ್ರೋತ್ಸಾಹಕ್ಕಿಂತ ನಿರುತ್ಸಾಹವಾಗುತ್ತಿಗಿದ್ದುದೇ ಹೆಚ್ಚು. 

2001ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಬೆಳ್ಳಿ ಪದಕ ಗೆದ್ದಾಗ, ದೆಹಲಿಯಲ್ಲಿ ದೊಡ್ಡ ಸಂಭ್ರಮ ಮನೆ ಮಾಡಿತ್ತು. ಆದರೆ, ಅವಳ ಊರಿನಲ್ಲಿ, ರಾಜ್ಯದಲ್ಲಿ ಅವಳನ್ನು ಗುರುತಿಸುವವರೇ ಇರಲಿಲ್ಲ. ಮರುವರ್ಷ ಅವಳು ಟರ್ಕಿಗೆ ಹೋಗಬೇಕಾದಾಗ ಅವಳ ಹತ್ತಿರ ಕೇವಲ 2000 ರೂ. ಇತ್ತು. ಆಗ ನಾವು ಚಂದಾ ಎತ್ತಿ, ವಿದ್ಯಾರ್ಥಿ ಸಂಘದವರಿಂದ ಹಾಗೂ ಮಣಿಪುರದವರಿಂದ ಹಣ ಸಂಗ್ರಹಿಸಿ ಕೊಟ್ಟೆವು. ಮುಂದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಾಗಲೇ ಮಣಿಪುರದ ಜನ ಮೇರಿಯನ್ನು ಗುರುತಿಸಿದ್ದು. 

ಮದುವೆಯ ನಿರ್ಧಾರ ಬಂದಿದ್ದು ಆಮೇಲೆ. ಮೇರಿಯ ಸೌಂದರ್ಯ ನೋಡಿ, ಮೊದಲ ನೋಟಕ್ಕೇ ಅವಳನ್ನು ಮೆಚ್ಚಿಕೊಂಡವನು ನಾನಲ್ಲ. ಹಾಗೆ ನೋಡಿದರೆ ನಾನೂ ಅಂಥಾ ಹ್ಯಾಂಡ್‌ಸಮ್‌ ಏನಲ್ಲ. ಅವಳು ನನ್ನನ್ನು ಒಪ್ಪಿಕೊಳ್ಳುತ್ತಾಳಾ ಅನ್ನೋ ಸಂಶಯವೂ ಇತ್ತು. ಅಷ್ಟರಲ್ಲಿ ನನಗೆ ಬೇರೆ ಹುಡುಗಿ ಜೊತೆ ಮದುವೆ ನಿಶ್ಚಯವಾಗುವುದರಲ್ಲಿತ್ತು. ಆ ಹುಡುಗಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ಅವರ ಅಪ್ಪನಿಗೆ ಆಸ್ತಿಯೂ ಇತ್ತು. ಮೇರಿ ಬಡ ಕುಟುಂಬದಿಂದ ಬಂದವಳು. ಆಕೆಯ ಕಷ್ಟಗಳನ್ನು, ಎಲ್ಲವನ್ನೂ ಮೀರಿ ಸಾಧಿಸುವ ಹಂಬಲವನ್ನು ನಾನು ನೋಡಿದ್ದೆನಲ್ಲ,

Advertisement

ಹಾಗಾಗಿ ಆಕೆಯ ಜೊತೆಗಿದ್ದು ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಅವಳು ಸ್ಪರ್ಧೆಗಳಿಗೆ ಒಬ್ಬೊಬ್ಬಳೇ ಓಡಾಡಬೇಕಿತ್ತು. ಒಮ್ಮೆ ಅವಳು ಇಂಫಾಲ್‌ನಿಂದ ಗುವಾಹಟಿಗೆ ಬಸ್‌ನಲ್ಲಿ ಬಂದು, ನಂತರ ಅಲ್ಲಿಂದ ದೆಹಲಿಗೆ ರೈಲಿನಲ್ಲಿ ಬರುವಾಗ ಲಗೇಜ್‌, ಪಾಸ್‌ಪೋರ್ಟ್‌ ಕಳೆದುಕೊಂಡಳು. ಆಗ ಅವಳ ಸಹಾಯಕ್ಕೆ ಬರುವವರು ಯಾರೂ ಇರಲಿಲ್ಲ. ಬಸ್ಸು, ರೈಲಿನಲ್ಲಿ ಒಬ್ಬಳೇ ಓಡಾಡುವಾಗ ಹುಡುಗರು ಛೇಡಿಸುತ್ತಿದ್ದರು. “ಹುಡುಗಿಯರಿಗೆಲ್ಲಾ ಬಾಕ್ಸಿಂಗ್‌ ಯಾಕಪ್ಪಾ?’ ಎಂದು ಜನ ಕುಹಕವಾಡ್ತಾ ಇದ್ದರು. ಈ ಎಲ್ಲವೂ ಅವಳ ಸಾಧನೆಗೆ ಅಡ್ಡಿಯಾಗಬಾರದು. ಅವಳ ಜೊತೆಯಲ್ಲಿ ಇದ್ದು ಸಾಧನೆಗೆ ನೆರವಾಗಬೇಕು ಅಂತ ಅನ್ನಿಸಿತು.

ಆಗ ನಾನೂ ಬಹಳ ಕಷ್ಟದಲ್ಲಿದ್ದೆ. ಶಿಲ್ಲಾಂಗ್‌ನಲ್ಲಿ ಕೆಲಸದಲ್ಲಿದ್ದ ನಾನು ಯುಪಿಎಸ್‌ಸಿ ಪರೀಕ್ಷೆಗಾಗಿ ಕೆಲಸ ಬಿಟ್ಟಿದ್ದೆ. ಕೆಲಸ ಸಿಗುವವರೆಗೆ ಮದುವೆ ಪ್ರಸ್ತಾಪ ಮಾಡುವಂತಿರಲಿಲ್ಲ. 2004ರಲ್ಲಿ ಅವಳನ್ನು ಮದುವೆ ಆಗೋ ನಿರ್ಧಾರಕ್ಕೆ ಬಂದಾಗ ಅವಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದಳು. ಆಕೆಯ ಕಣ್ಣಲ್ಲಿ ಮತ್ತಷ್ಟು ಪದಕಗಳ ಕನಸಿತ್ತು. ಬಾಕ್ಸಿಂಗ್‌ ಬಿಡುವ ಮಾತೇ ಇರಲಿಲ್ಲ. ಈ ವೇಳೆಗೆ ನಮ್ಮ ಸ್ನೇಹಕ್ಕೆ ನಾಲ್ಕು ವರ್ಷ ಆಗಿತ್ತು. ಅವಳು ಮುಕ್ತವಾಗಿ ಎಲ್ಲ ವಿಷಯಗಳನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ಅವಳು ಫೇಮಸ್‌ ಆಗಿದ್ದರಿಂದ ತುಂಬಾ ಜನ ಅವಳನ್ನು ಮದುವೆ ಆಗೋಕೆ ರೆಡಿ ಇದ್ದರು.

ಅವಳಿಗೆ ಸಿಕ್ಕಿದ ಜನಪ್ರಿಯತೆ, ಮದುವೆ ಮಾತುಕತೆಗಳು ಅವಳನ್ನು ಡಿಸ್ಟರ್ಬ್ ಮಾಡುತ್ತಿದ್ದವು. ಆಗ ನಾನು “ಯಾವ ಪ್ರಪೋಸಲ್‌ಗ‌ಳನ್ನೂ ಒಪ್ಪಿಕೋಬೇಡ. ನನ್ನನ್ನೇ ಮದುವೆಯಾಗು. ಒಂದು ಸಲ ಎಂಗೇಜ್‌ ಆಗಿºಟ್ರೆ ಯಾರೂ ನಿನ್ನ ಡಿಸ್ಟರ್ಬ್ ಮಾಡಲ್ಲ. ಯೋಚನೆ ಮಾಡು. ಮೂರ್‍ನಾಲ್ಕು ತಿಂಗಳಲ್ಲಿ ನಿನ್ನ ನಿರ್ಧಾರ ತಿಳಿಸು’ ಎಂದುಬಿಟ್ಟೆ. ನಿಜ ಹೇಳಬೇಕಂದ್ರೆ, ಅವಳನ್ನು ಕೇಳುವ ಮುಂಚೆಯೇ ಮೇರಿಯ ಹೆತ್ತವರ ಬಳಿ ಮದುವೆಯ ಪ್ರಸ್ತಾಪ ಮಾಡಿದ್ದೆ. ಅವಳಪ್ಪ ನನ್ನನ್ನು ಕೊಂದೇ ಬಿಡುತ್ತಿದ್ದರೇನೋ! “ಹೀಗೆಲ್ಲಾ ಯಾರಾದ್ರೂ ಬಂದು ಹುಡುಗೀನ ಕೇಳ್ತಾರ?

ನಮ್ಮ ಜನಾಂಗದಲ್ಲಿ ಅದಕ್ಕೊಂದು ಶಾಸ್ತ್ರ, ಸಂಪ್ರದಾಯ ಅಂತ ಇದೆ. ಈ ಪ್ರೀತಿ ಗೀತಿ ಅಂತೆಲ್ಲಾ ಹೇಳಬೇಡ’ ಅಂತ ಬೈದಿದ್ದರು. ನಾನು ಆಕೆಯ ಅಮ್ಮನನ್ನು ಒಪ್ಪಿಸಲು ಯತ್ನಿಸಿದ್ದೆ. ಮೇರಿಯ ಕಷ್ಟಗಳು, ಆಕೆಯ ಕನಸುಗಳ ಬಗ್ಗೆ ನನಗೆ ಗೊತ್ತು. ನಾನು ಆರ್ಥಿಕವಾಗಿ, ಮಾನಸಿಕವಾಗಿ ಅವಳಿಗೆ ನೆರವಾಗ್ತಿàನಿ. ಅವಳ, ಅವಳ ಕನಸಿನ ರಕ್ಷಣೆ ನನ್ನ ಜವಾಬ್ದಾರಿ. ನಾನೂ ಮೇಘಾಲಯದ ಪರವಾಗಿ ನ್ಯಾಷನಲ್‌ ಫ‌ುಟ್‌ಬಾಲ್‌ ಆಡಿದ್ದೇನೆ. ಕ್ರೀಡಾಪಟುಗಳ ಮನಸ್ಸನ್ನು ಬೇರೆಯವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ ಎಂದೆಲ್ಲಾ ಹೇಳಿದ್ದೆ. ಯಾವುದೂ ಪ್ರಯೋಜನವಾಗಲಿಲ್ಲ. ಹಾಗಾಗಿ, ಮೇರಿಗೇ ನೇರವಾಗಿ ಹೇಳಿಬಿಟ್ಟೆ. 

ಅವಳು ಒಪ್ಪಿಕೊಂಡಳು. ಅಪ್ಪ- ಅಮ್ಮನ ಜೊತೆ ಮಾತಾಡು ಅಂದಳು. ಆಗ ನಾನು ನಡೆದಿದ್ದನ್ನ ಹೇಳಿದೆ. ಮತ್ತೂಂದು ಸಲ ಅವರ ಹೆತ್ತವರ ಬಳಿ ಕೇಳಿಕೊಂಡೆ. ಉಹೂ, ಒಪ್ಪಿಕೊಳ್ಳಲಿಲ್ಲ. ಆಗ ಮೇರಿ, ಓಡಿಹೋಗೋಣ ಅಂದಳು. ದೆಹಲಿಗೋ, ಶಿಲ್ಲಾಂಗ್‌ಗೋ ಹೋಗಿ ಮದುವೆಯಾಗಿ ಬಿಡೋಣ ಅಂದಳು. ನಾನು ಅದಕ್ಕೆ ಒಪ್ಪಲಿಲ್ಲ. ಮೇರಿ, ಅವಳ ಮನೆಯಲ್ಲಿ ಹಿರಿಯ ಮಗಳು. ನಾನು ಅಪ್ಪ ಅಮ್ಮನಿಗೆ ಕಿರಿಯ ಮಗ. ನಾವೇನೇ ಮಾಡಿದರೂ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಅವರನ್ನು ಒಪ್ಪಿಸೋಕೆ ಪ್ರಯತ್ನಿಸೋಣ.

ನೀನು ಧೈರ್ಯವಾಗಿರು ಅಂದೆ. ಅವರಮ್ಮನೂ ನನ್ನ ಬಳಿ ಬಂದು, “ಮೇರಿಯನ್ನು ನಮ್ಮಿಂದ ದೂರ ಮಾಡಬೇಡ. ಅವಳ ಅಪ್ಪನನ್ನು ನಾನು ಒಪ್ಪಿಸ್ತೀನಿ’ ಅಂದಿದ್ದರು. ನನ್ನ ಅಪ್ಪ- ಅಮ್ಮ ಕೂಡ ಒಮ್ಮೆ ಮೇರಿಯ ಹೆತ್ತವರನ್ನು ಭೇಟಿ ಮಾಡೋಕೆ ಹೋಗಿದ್ದರು. ನಮ್ಮಲ್ಲಿ ಒಂದು ಸಂಪ್ರದಾಯ ಇದೆ. ಹುಡುಗನ ಕಡೆಯವರು, ಹುಡುಗಿಯನ್ನು ಕೇಳಲು ಹೋಗುವಾಗ ಟೀ, ತಿಂಡಿ ತೆಗೆದುಕೊಂಡು ಹೋಗಬೇಕು. ಒಂದುವೇಳೆ, ಹುಡುಗಿಯ ಮನೆಯವರು ಟೀ ಕುಡಿದರೆ, ಅವರು ಮಗಳನ್ನು ಕೊಡಲು ಒಪ್ಪಿದಂತೆ. ಆದರೆ, ಮೇರಿಯ ಅಪ್ಪ ಟೀಯನ್ನು ಲೋಟಕ್ಕೆ ಹಾಕಲೂ ಬಿಟ್ಟಿರಲಿಲ್ಲ. ಕೊನೆಗೆ ಅವಳ ಅಪ್ಪನೇ ನಮ್ಮ ಮನೆಗೆ ಬಂದು ಟೀ ಕುಡಿಯುವಲ್ಲಿಗೆ 2005ರಲ್ಲಿ ನಮ್ಮ ಮದುವೆ ಆಯಿತು.

ಪದಕ ಗೆದ್ದರೂ ಪಾತ್ರೆ ಬೆಳಗುವುದು ಬಿಡಲಿಲ್ಲ…: ಮೇರಿಯನ್ನು ನಾನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅವಳು ಪಫೆìಕ್ಟ್ ವುಮನ್‌ . ಅವಳು ಯಾವುದೇ ಕೆಲಸವನ್ನಾಗಲೀ ತುಂಬಾ ಶ್ರದ್ಧೆಯಿಂದ ಮಾಡಿ ಮುಗಿಸುತ್ತಾಳೆ. ಬಾಕ್ಸಿಂಗ್‌ ಅಷ್ಟೇ ಅಲ್ಲ, ಟಿವಿ ನೋಡುವುದಾಗಲಿ, ನಿದ್ದೆ ಮಾಡುವುದಾಗಲಿ ಬಹಳ ಏಕಾಗ್ರತೆಯಿಂದ ಮಾಡುತ್ತಾಳೆ. ಟಿವಿ ನೋಡುವಾಗ ಎಷ್ಟು ಇನ್ವಾಲ್‌Ì ಆಗಿರುತ್ತಾಳೆಂದರೆ, ಕೆಲವೊಮ್ಮೆ ಅತ್ತೇ ಬಿಡುತ್ತಾಳೆ! ಒಲಿಂಪಿಕ್‌ ಪದಕ ಪಡೆದ ಮೇಲೂ ಆಕೆ ಬದಲಾಗಿಲ್ಲ. ಈಗಲೂ ಆಕೆ ಮನೆಯ ಎಲ್ಲ ಕೆಲಸ ಮಾಡುತ್ತಾಳೆ, ಪಾತ್ರೆ ತೊಳೆಯುತ್ತಾಳೆ, ಮನೆಯ ಸ್ವತ್ಛತೆಯ ಕೆಲಸವೂ ಅವಳದ್ದೇ.

ಮೊದಲು ಹೇಗೆ ಮನೆ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದಳ್ಳೋ, ಈಗಲೂ ಹಾಗೇ ಇದ್ದಾಳೆ. ಮನೆಯಲ್ಲಿದ್ದಾಗ ಮಕ್ಕಳ ಜವಾಬ್ದಾರಿಯೂ ಅವಳದ್ದೇ.  ಕೆಲವೊಮ್ಮೆ ಸಣ್ಣ ಸಣ್ಣದ್ದಕ್ಕೂ ಸಿಟ್ಟು ಮಾಡಿಕೊಳ್ಳುತ್ತಾಳೆ. ಮಕ್ಕಳು ಜಾಸ್ತಿ ಗಲಾಟೆ ಮಾಡಿದರೆ ಅವಳಿಗೆ ಕೋಪ ಬರುತ್ತದೆ. ಮಕ್ಕಳಿಗೆ ಪೆಟ್ಟು ಬೀಳುತ್ತದೆ. ಆಗ ನಾನೇ ಅವಳಿಗೆ, ಮಕ್ಕಳಲ್ವಾ? ಅವಕ್ಕೇನು ಗೊತ್ತಾಗುತ್ತೆ? ಸುಮ್ಮನಿರು ಅಂತ ಸಮಾಧಾನ ಮಾಡುತ್ತೇನೆ. ಮೇರಿ ಸ್ವಲ್ಪ ಸಂಕೋಚ ಸ್ವಭಾವದವಳು. ಮಾಧ್ಯಮದೊಂದಿಗೆ ಮಾತಾಡುವಾಗ ಕೆಲವೊಮ್ಮೆ ಗಡಿಬಿಡಿ ಮಾಡಿಕೊಳ್ಳುತ್ತಾಳೆ.

ಮತ್ತೆ ಅವಳು ಬೇಗ ಟೆನ್ಷನ್‌ಗೆ ಸಿಲುಕುತ್ತಾಳೆ. ಆಗ ಅವಳನ್ನು ಸಮಾಧಾನ ಮಾಡುವುದು ಕಷ್ಟದ ಕೆಲಸ. ಆಗ ನಾನು ನಿಜವಾಗಿಯೂ ಎಸಿ ಆನ್‌ ಮಾಡಿ, ಅವಳನ್ನು ಕೂಲ್‌ ಮಾಡ್ತೀನಿ! ಮೇರಿ, ವಿದ್ಯಾಭ್ಯಾಸಕ್ಕಿಂತ ಜಾಸ್ತಿ ಕ್ರೀಡೆಗೇ ಜಾಸ್ತಿ ಪ್ರಾಮುಖ್ಯತೆ ಕೊಟ್ಟಿದ್ದರಿಂದ, ಅವಳಿಗೆ ಮೊದಲು ಇಂಗ್ಲಿಷ್‌ ಮಾತಾಡೊಕೆ ಸ್ವಲ್ಪ ಕಷ್ಟ ಆಗುತ್ತಿತ್ತು. ಕ್ರಮೇಣ ಅವಳು ಅದನ್ನೂ ಮೆಟ್ಟಿನಿಂತಳು. ಸಂದರ್ಶನಗಳನ್ನು ಕೊಡ್ತಾ ಕೊಡ್ತಾ ಈಗ ತುಂಬಾ ಚೆನ್ನಾಗಿ ಇಂಗ್ಲಿಷ್‌ ಮಾತಾಡ್ತಾಳೆ.

ಖುಷಿಯ ವಿಚಾರ ಅಂದ್ರೆ, ಮೇರಿಗೆ ಬಂದ ಪದಕಗಳು ಕೇವಲ ಅವಳ ಜೀವನವನ್ನು ಮಾತ್ರವಲ್ಲ, ಇಡೀ ಮಣಿಪುರದ ಜನರ ಯೋಚನಾ ವಿಧಾನವನ್ನೇ ಬದಲಿಸಿದೆ. ಈಗ ತುಂಬಾ ಜನ ಬಾಕ್ಸಿಂಗ್‌ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮದೇ ಅಕಾಡೆಮಿಯಲ್ಲಿ ತುಂಬಾ ಮಕ್ಕಳು ಬಾಕ್ಸಿಂಗ್‌ ಕಲಿಯುತ್ತಿದ್ದಾರೆ. ಬೆಟ್ಟಗುಡ್ಡ ಹತ್ತಿ, ಕಾಡಿನಲ್ಲಿ ಕುಸ್ತಿ ಮಾಡುತ್ತಾ ಬಾಕ್ಸಿಂಗ್‌ಗೆ ರೆಡಿ ಆಗುತ್ತಿದ್ದಾರೆ. ಇವರಿಗೆಲ್ಲ ಮೇರಿಯೇ ಸ್ಫೂರ್ತಿ. ಅವಳು ಮಣಿಪುರಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ, ವಿಶ್ವಕ್ಕೇ ಹೆಮ್ಮೆಯ ಹೆಣ್ಣು. ನನಗೆ ಅವಳ ಬಗ್ಗೆ ತುಂಬಾ ಹೆಮ್ಮೆ ಇದೆ.

(ಕೃಪೆ: ಫ‌ಸ್ಟ್‌ಪೋಸ್ಟ್‌)

* ಓಲರ್‌ ಕೋಮ್‌, ಮೇರಿ ಕೋಮ್‌ ಪತಿ 

* ಕನ್ನಡಕ್ಕೆ: ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next