ಮಂಡ್ಯ: “ಚುನಾವಣೋತ್ತರ ಸಮೀಕ್ಷೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರವಾಗಿವೆ. ಅದಕ್ಕಾಗಿ ಮೇ 23ರ ಫಲಿತಾಂಶವೇ ನನಗೆ ಮುಖ್ಯವಾಗಿದೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು.
ನಗರದ ಕನಕ ಭವನದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಹಾಗಾಗಿ, ಅವುಗಳ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಏನೇ ಇದ್ದರೂ ಮೇ 23ರವರೆಗೆ ಕಾದು ನೋಡುವೆ. ನನಗೆ ಗೆಲ್ಲುವ ವಿಶ್ವಾಸವಿದೆ. ನಾನು ಯಾವುದೇ ಸರ್ವೇ ಮಾಡಿಸಿಲ್ಲ’ ಎಂದರು.
“ನನ್ನ ಹಾಗೂ ಮಾಜಿ ಸಚಿವರಾದ ಚಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇಬ್ಬರೂ ಲೋಕಾಭಿರಾಮವಾಗಿ ಕೆಲಕಾಲ ಚರ್ಚೆ ನಡೆಸಿದೆವು. ರಾಜಕೀಯವಾಗಿ ಏನನ್ನೂ ಮಾತನಾಡಿಲ್ಲ. ಚುನಾವಣೆ ಮುಗಿದಿರುವುದರಿಂದ ಸ್ವಲ್ಪ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ್ದಾರೆ’ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಜನರು ಈಗಾಗಲೇ ತಮ್ಮ ಹಕ್ಕು ಚಲಾಯಿಸಿ ತೀರ್ಮಾನ ಮಾಡಿದ್ದಾರೆ. ಅವರ ತೀರ್ಪು ಮತಯಂತ್ರದೊಳಗೆ ಭದ್ರವಾಗಿದೆ. ಅದು ಬಹಿರಂಗವಾಗಬೇಕಷ್ಟೇ. ಮೇ 23ರವರೆಗೂ ಕಾಯುವ ತಾಳ್ಮೆ ನಮಗಿದೆ.
-ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ.