Advertisement

ಸಿಎಂ ಸೋಲಿಸುವ ಶಕ್ತಿ ನನಗಿದೆ: ಜಿಟಿಡಿ

09:00 AM Oct 07, 2017 | |

ಮೈಸೂರು: “ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ನಿಮ್ಮನ್ನು ಸೋಲಿಸುವ ಶಕ್ತಿ ನನಗಿದೆ. ಬನ್ನಿ, ಚುನಾವಣೆಗೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪಂಥಾಹ್ವಾನ
ನೀಡಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರನ್ನು ಸ್ವಾಮಿ ಎಂದೇ ಸಂಭೋದಿಸುತ್ತಾ, ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು. “ಸಿದ್ದರಾಮಯ್ಯ ಯಾವತ್ತೂ ಸ್ವಂತ ಶಕ್ತಿಯಿಂದ ಗೆದ್ದಿಲ್ಲ. ವರುಣ ಕ್ಷೇತ್ರದಲ್ಲಿ ಯಾರ್ಯಾರನ್ನು ಒಳ ಹಾಕಿಕೊಂಡು ಗೆದ್ದರು ಎಂಬುದು ನನಗೂ ಗೊತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಅವರ ವಿರುದ್ಧ ಪ್ರಚಾರ ಮಾಡಿದ್ದರೆ ಐದಾರು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. 25 ವರ್ಷಗಳ ಕಾಲ ಶಾಸಕರಾಗಿದ್ದ ಚಾಮುಂಡೇಶ್ವರಿ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿದರೆ ಮಾದರಿ ಕ್ಷೇತ್ರ ಮಾಡುತ್ತೇನೆ ಎಂದು ಈಗ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

“ನನ್ನ ಬಗ್ಗೆ ಜಿಲ್ಲೆಯಲ್ಲಿ ಊಹಾಪೋಹಗಳು ಹರಡಿವೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಹೊರಹಾಕಿದ ಮೇಲೆ ನಾನು ಅವರ ಮನೆಗೆ ಹೋಗಿಲ್ಲ. ರಾಜ್ಯಮಟ್ಟದ ಯಾವ ಕಾಂಗ್ರೆಸ್‌ ನಾಯಕರೂ ನನ್ನ ಜತೆ ಮಾತನಾಡಿಲ್ಲ. ಆದರೂ, ನನ್ನನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೆಳೆದುಕೊಳ್ಳಲು 100 ಕೋಟಿ ರೂ.ಗೆ ಖರೀದಿ ನಿಗದಿಯಾಗಿದೆ ಎಂದು ವದಂತಿ ಹಬ್ಬಿಸಿದ್ದಾರೆ’ ಎಂದು ಕಿಡಿ ಕಾರಿದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗಲ್ಲ. ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದೇ ತಮ್ಮ ಗುರಿ ಎಂದರು.

ಚಾಮುಂಡೇಶ್ವರಿ, ವರುಣ ನನ್ನೆರಡು ಕಣ್ಣುಗಳು
ಬೆಂಗಳೂರು: “ಮೈಸೂರಿನ ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ ಎರಡೂ ಕ್ಷೇತ್ರಗಳ ಋಣ ತೀರಿಸಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲಿಂಗಾಯತ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, “2018ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಈಗಾಗಲೇ ಹೇಳಿದ್ದೇನೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಎರಡೂ ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

“ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಪ್ರೀತಿಯಿಂದ ಒತ್ತಾಯ ಮಾಡುತ್ತಿದ್ದೀರಿ, ಎಲ್ಲರಿಗೂ ನಾನು ಆಭಾರಿ. ಚಾಮುಂಡೇಶ್ವರಿ ಹಾಗೂ ವರುಣಾ ನನ್ನನ್ನು ರಾಜಕೀಯವಾಗಿ ಬೆಳೆಸಿದ ಕ್ಷೇತ್ರಗಳು. ಮರು ಚುನಾವಣೆಯಲ್ಲಿ ಚಾಮುಂಡೇಶ್ವರಿಯ ಜನತೆ ನನ್ನ ಕೈ ಹಿಡಿಯದೇ ಹೋಗಿದ್ದರೆ ರಾಜಕಾರಣದಿಂದ ದೂರ ಉಳಿಯುತ್ತಿದ್ದೆ. ಕಷ್ಟಕಾಲದಲ್ಲಿ ನನ್ನನ್ನು ಕಾಪಾಡಿ ರಾಜಕೀಯವಾಗಿ ಮರುಜನ್ಮ ನೀಡಿದ ಕ್ಷೇತ್ರದ ಜನರನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿದರು.

Advertisement

 ನಿಯೋಗದಲ್ಲಿ ಮಾಜಿ ಶಾಸಕ ಸತ್ಯನಾರಾಯಣ, ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮಾರ್ಬಳ್ಳಿ ಕುಮಾರ, ನಾಗರಾಜು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next