ನವದೆಹಲಿ: ನರೇಂದ್ರ ದಾಭೋಲ್ಕರ್‌ಗೆ ಎರಡು ಬಾರಿ ಗುಂಡು ಹಾರಿಸಿದ್ದೆ… ಹೀಗೆಂದು ಹೇಳಿದ್ದು ಆರು ವರ್ಷಗಳ ಹಿಂದೆ ನಡೆದ ಚಿಂತಕ ನರೇಂದ್ರ ದಾಭೋಲ್ಕರ್ ಹತ್ಯೆ ಆರೋಪಿ ಶರದ್ ಕಲಾಸ್ಕರ್. ಕರ್ನಾಟಕ ಪೊಲೀಸರಿಗೆ ಈತ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಎನ್‌ಡಿಟಿವಿ ಸುದ್ದಿವಾಹಿನಿ ಬಹಿರಂಗಗೊಳಿಸಿದೆ.
ಮೊದಲು ಹಿಂದಿನಿಂದ ಗುಂಡು ಹಾರಿಸಿದೆ. ನಂತರ, ಅವರು ಕೆಳಕ್ಕೆ ಬಿದ್ದಾಗ ಬಲ ಗಣ್ಣಿನ ಮೇಲ್ಭಾಗಕ್ಕೆ ಗುಂಡು ಹಾರಿಸಿ ದ್ದೇನೆಂದು ಕಲಾಸ್ಕರ್ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ 14 ಪುಟದ ವರದಿಯನ್ನು ಕರ್ನಾಟಕ ಪೊಲೀಸರು ಸಿದ್ಧಪಡಿಸಿದ್ದಾರೆ. ಅಷ್ಟೇ ಅಲ್ಲ, ತಾನು ಪತ್ರಕರ್ತೆ ಗೌರಿ ಲಂಕೇಶ ಮತ್ತು ಚಿಂತಕ ಗೋವಿಂದ ಪಾನ್ಸರೆ ಪ್ರಕರಣದಲ್ಲೂ ಭಾಗಿಯಾಗಿದ್ದೇನೆಂದು ತಪ್ಪೊಪ್ಪಿಕೊಂಡಿ ರುವುದಾಗಿ ಪೊಲೀಸರ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಕೆಲವು ಬಲಪಂಥೀಯ ಮುಖಂಡರು ನನ್ನನ್ನು ಸಂಪರ್ಕಿಸಿ ಶಸ್ತ್ರಾಸ್ತ್ರ ಬಳಕೆ ಮತ್ತು ಬಾಂಬ್ ತಯಾರಿಕೆ ಬಗ್ಗೆ ತಿಳಿಸಿದರು. ಪ್ರಕರಣದ ಪ್ರಮುಖ ಆರೋಪಿ ವೀರೇಂದ್ರ ತಾಬ್ಡೆ ನನ್ನನ್ನು ಸಂಪರ್ಕಿಸಿದ್ದರು. ಅವರು ಸಮಾಜದ ಕೆಲವು ದುಷ್ಟರನ್ನು ಹತ್ಯೆ ಮಾಡಬೇಕಿದೆ ಎಂದು ನನಗೆ ಹೇಳಿದರು. ದಾಭೋಲ್ಕರ್ ಹತ್ಯೆ ಮಾಡುವಂತೆ ಅವರೇ ಹೇಳಿದರು. ಅದರಂತೆ ನಾನು ಹತ್ಯೆಗೈದಿದ್ದೇನೆ. ದಾಭೋಲ್ಕರ್ ಅವರು ಓಂಕಾರೇಶ್ವರ ಸೇತುವೆಯ ಮೇಲೆ ದಿನವೂ ಬೆಳಗ್ಗೆ ವಾಕ್ ಮಾಡುತ್ತಿದ್ದರು. ಇದನ್ನು ನಾನು ಗಮನಿಸಿದ್ದೆ. ಮೊದಲು ತಲೆಗೆ ಗುಂಡು ಹಾರಿಸಿದೆ. ಅವರು ಕುಸಿದು ಬಿದ್ದಾಗ ಕಣ್ಣಿನ ಮೇಲ್ಗಡೆ ಗುಂಡು ಹಾರಿಸಿದೆ. ನಂತರ ನನ್ನ ಜೊತೆಗೆ ಬಂದಿದ್ದ ಸಚಿನ್ ಅಂದೂರೆ ಕೂಡ ಗುಂಡು ಹಾರಿಸಿದ ಎಂದು ಕಲಾಸ್ಕರ್ ಹೇಳಿದ್ದಾನೆ.
ಗೌರಿ ಲಂಕೇಶ್ ಕೊಲೆ ಬಗ್ಗೆ ನಡೆಸಿದ ಹಲವು ಸಭೆಗಳಲ್ಲಿ ನಾನು ಭಾಗವಹಿಸಿದ್ದೆ. 2017ರ ಆಗಸ್ಟ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಹಿಂದು ವಿರೋಧಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು. ಆಗ ಗೌರಿ ಲಂಕೇಶ್ ಹೆಸರು ಕೇಳಿ ಬಂತು. ಅದರ ನಂತರ ಒಂದು ತಿಂಗಳಲ್ಲೇ ಗೌರಿಯನ್ನು ಹತ್ಯೆಗೈಯಲಾಯಿತು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಹೆಸರೂ ಪಟ್ಟಿಯಲ್ಲಿತ್ತು ಎಂದು ಕಲಾಸ್ಕರ್ ಹೇಳಿದ್ದಾರೆ.
ಪಾಲ್ಗರ್ ಜಿಲ್ಲೆಯ ನಾಲಸೋಪಾರದಲ್ಲಿ ಅಕ್ರಮವಾಗಿ ಪಿಸ್ತೂಲ್ ಉತ್ಪಾದನಾ ಘಟಕವನ್ನು ನಡೆಸುತ್ತಿದ್ದ ಆರೋಪದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈತನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುವ ವೇಳೆ ಕೊಲೆ ಪ್ರಕರಣ ಬಿಚ್ಚಿಕೊಂಡಿದೆ. ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಈತನ ವಿಚಾರಣೆ ನಡೆಸಿದಾಗ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. 2013ರಲ್ಲಿ ಪುಣೆಯಲ್ಲಿ ದಾಬೋಲ್ಕರ್ ಹಾಗೂ 2015ರಲ್ಲಿ ಚಿಂತಕ ಗೋವಿಂದ ಪಾನ್ಸರೆ ಹತ್ಯೆ ನಡೆದಿತ್ತು.