Advertisement

ಕಳ್ಳಬೇಟೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ

09:53 PM Jun 14, 2019 | Lakshmi GovindaRaj |

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿರುವ ಕಳ್ಳಬೇಟೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ತೇಜೋವಧೆ ಮಾಡುವ ಸಲುವಾಗಿ ಕಾಣದ ಕೈಗಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸುತ್ತಿವೆ ಎಂದು ವನ್ಯಜೀವಿ ಮಂಡಳಿ ಸದಸ್ಯ, ವಿವೇಕಾನಂದ ಸೇವಾ ಟ್ರಸ್ಟ್‌ ಅಧ್ಯಕ್ಷ ಜಿ. ಮಲ್ಲೇಶಪ್ಪ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ ವನ್ಯಜೀವಿ ಸಂರಕ್ಷಣೆಗೆ ಸುಮಾರು 30 ವರ್ಷದಿಂದ ಸ್ವಯಂ ಸೇವಾ ಸಂಸ್ಥೆ ಮುಖಾಂತರ ಸೇವೆ ಸಲ್ಲಿಸುತ್ತಿದ್ದೇನೆ. ಜೂ. 10ರಂದು ನನ್ನ ಒಡೆತನದ ಹೋಂ ಸ್ಟೇಗೆ ಬೀಗ ಮುದ್ರೆ ಹಾಕಿದ್ದಾರೆ ಎಂಬುದು ಸತ್ಯಕ್ಕೆ ದೂರ ಸಂಗತಿ ಎಂದರು.

ಮನೆಯ ಕೊಠಡಿ ನೀಡಿದ್ದೆ: ಮೂರು ತಿಂಗಳ ಹಿಂದೆ, ಬೆಂಗಳೂರಿನ ಮನೋಹರ್‌ ಮತ್ತು ಅವರ ಸ್ನೇಹಿತರು ಪ್ರಶಾಂತ ವಾತಾವರಣ ಇರುವ ಕಾರಣ ನಮ್ಮ ಮನೆಯಲ್ಲಿ ತಿಂಗಳಲ್ಲಿ ನಾಲ್ಕೈದು ದಿನ ಉಳಿದುಕೊಂಡು ಚಿತ್ರಕಥೆ ಬರೆಯಲು ಅವಕಾಶ ನೀಡಬೇಕೆಂದು ಕೋರಿದರು. ಅವರ ಕೋರಿಕೆಯ ಮೇರೆಗೆ ನನ್ನ ಮನೆಯ ಕೊಠಡಿಯನ್ನು ತಾತ್ಕಾಲಿಕವಾಗಿ ನೀಡಿದ್ದೇನೆ. ಅವರು ಆಗಾಗ ಬಂದು ಹೋಗುತ್ತಿದ್ದರು. ನೀರಿನ ವ್ಯವಸ್ಥೆ ಸರಿಯಿಲ್ಲದ ಕಾರಣ ಕೆಲವೊಮ್ಮೆ ಬಿಳಿಗಿರಿರಂಗನ ಬೆಟ್ಟದ ಇತರೆ ಅತಿಥಿಗೃಹದಲ್ಲಿ ಉಳಿದುಕೊಳ್ಳುತ್ತಿದ್ದರು ಎಂದರು.

ಹಳೆ ಪಾತ್ರೆಯ ಜತೆ ಸಿಕ್ಕಿಬಿದ್ದಿದ್ದಾರೆ: ಜೂ. 10ರಂದು ನಾನು ಊರಿನಲ್ಲಿ ಇಲ್ಲದ ಸಮಯದಲ್ಲಿ ಅವರು ಬಂದು ತಂಗಿದ್ದರು. ಅಂದು ಮಧ್ಯಾಹ್ನ 3 ಗಂಟೆಯಲ್ಲಿ ಸ್ಥಳೀಯ ಸ್ನೇಹಿತರು ಕರೆ ಮಾಡಿ, ತಮ್ಮ ಮನೆಯಲ್ಲಿ ಉಳಿದುಕೊಂಡಿರುವ ಮನೋಹರ್‌ ಕಡೆಯವರು ಬಿಳಿಗಿರಿರಂಗನಬೆಟ್ಟದ ಖಾಸಗಿ ಜಮೀನಿನಲ್ಲಿ ಸತ್ತಿರುವ ಮೊಲ ಮತ್ತು ಗೌಜಲಕ್ಕಿ, ಹಳೆಯ ಪಾತ್ರೆಯ ಸಮೇತ ಅನುಮಾನಾಸ್ಪದವಾಗಿ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿಸಿದರು ಎಂದರು.

ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ: ನನ್ನ ಮನೆಯಲ್ಲಿ ಉಳಿದುಕೊಂಡಿದ್ದವರು ಅನುಮಾನಾಸ್ಪದವಾಗಿ ಸಿಕ್ಕಿ ಬಿದ್ದಿದ್ದಾರೆ ಎಂಬ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿರುವುದು ವಿಷಾದನೀಯ.ನನ್ನ ತೇಜೋವಧೆ ಮಾಡುವ ಸಲುವಾಗಿ ಕೆಲವರು ನನ್ನ ಮನೆಗೆ ಬೀಗ ಹಾಕಿ, ಹೋಂ ಸ್ಟೇಗೆ ಬೀಗ ಹಾಕಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಾಕು ಮೊಲ ಮತ್ತು ಗೌಜಲಲ್ಲಿ ಖಾಸಗಿ ಜಮೀನಿನಲ್ಲಿ ಸಿಕ್ಕಿದ್ದು ಯಾಕೆ ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯಲಿ. ನನ್ನ ಒಡೆತನದಲ್ಲಿ ಯಾವುದೇ ಹೋಂಸ್ಟೇ ಇಲ್ಲ. ಇಲ್ಲದಿರುವ ಹೋಂ ಸ್ಟೇಗೆ ಯಾರೂ ಬೀಗ ಜಡಿದಿಲ್ಲ ಎಂದು ತಿಳಿಸಿದರು.

Advertisement

ನನ್ನ ವಿರುದ್ಧ ಷಡ್ಯಂತ್ರ: ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮಾಂಸಾಹಾರ ನಿಷೇಧ, ಮದ್ಯಪಾನ ನಿಷೇಧ, ಅರಣ್ಯ ಒತ್ತುವರಿ ತಡೆ, ಅರಣ್ಯ ಬೆಂಕಿ ಜಾಗೃತಿ, ಪರಿಸರ ಜಾಗೃತಿ ಕಾರ್ಯಕ್ರಮ ಮುಂತಾದ ಕಾರ್ಯದಲ್ಲಿ ಅರಣ್ಯ ಇಲಾಖೆಗೆ ಸಹಕಾರ ನೀಡಿದ್ದು, ಸ್ಥಳೀಯರಿಗೆ ಅಕ್ರಮ ಚಟುವಟಿಕೆಗಳಲ್ಲಿ ಸಹಕಾರ ನೀಡದಿದ್ದರಿಂದ ನನ್ನ ಮೇಲೆ ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಆತ್ಮ ಸ್ಥೈರ್ಯ ಕುಗ್ಗಿಸಲು ಸಂಚು: ನನ್ನ ಮೇಲೆ ಅಪಪ್ರಚಾರ ಮಾಡುತ್ತಿರುವವರು ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸಿರುವರು. ಅಪಪ್ರಚಾರ ಮಾಡಿದರೂ ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸಿದರೂ ವನ್ಯಜೀವಿ ಸಂರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತೇನೆ. ಯಾವುದೇ ವೈಯಕ್ತಿಕ ಲಾಭಕ್ಕಾಗಿ ಅಥವಾ ಪ್ರಶಸ್ತಿಗಾಗಿ ಕೀರ್ತಿಗಾಗಿ ಮಾಡುತ್ತಿಲ್ಲ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಸ್ಥಳೀಯರ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡದೇ ಖಂಡಿಸಿದ್ದರಿಂದ ನನ್ನ ಮೇಲೆ ಷಡ್ಯಂತ್ರ ರೂಪಿಸಿ ನನಗೆ ಕೆಟ್ಟ ಹೆಸರು ತರಲು, ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ನನ್ನ ಆತ್ಮ ಸ್ಥೈರ್ಯ ಕುಗ್ಗಿಸಲು ಸಂಚು ರೂಪಿಸಲಾಗಿದೆ ಎಂದು ತಿಳಿಸಿದರು.

ನಾನು ಯಾವುದಕ್ಕೂ ಸಹಕರಿಸಿಲ್ಲ: ನನ್ನ ಮೇಲೆ ಆರೋಪ ಮಾಡಿರುವವರ ಮೇಲೆ ಆನೆ ದಂತ ಸಾಕಾಣಿಕೆ, ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ, ಅರಣ್ಯ ಜಮೀನು ಒತ್ತುವರಿ ಆರೋಪಗಳಿವೆ. ಇದಕ್ಕೆಲ್ಲ ನಾನು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಈ ರೀತಿಯ ಆರೋಪ, ಅಪಪ್ರಚಾರ ಮಾಡುತ್ತಿದ್ಧಾರೆ ಎಂದು ಮಲ್ಲೇಶಪ್ಪ ಪ್ರತ್ಯಾರೋಪ ಮಾಡಿದರು. ಶಿವಣ್ಣ ಮತ್ತು ಮಹದೇವು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next